ಗುಂಡ್ಲುಪೇಟೆ: ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾ.25ರಂದು ಯುಗಾದಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಜರುಗಲಿದೆ.

ಬ್ರಹ್ಮ ರಥೋತ್ಸವದ ಅಂಗವಾಗಿ ಮಾ.22ರಂದು ಫಲಪಂಚಾಮೃತಾಭಿಷೇಕ, ಅಂಕುರಾರ್ಪಣ, 23ರಂದು ಧ್ವಜಾರೋಹಣ, ಭೇರಿತಾಡನ, 24ರಂದು ಕಲ್ಯಾಣೋತ್ಸವ, 25ರಂದು ಬ್ರಹ್ಮ ರಥೋತ್ಸವ, 26ರಂದು ಗರುಡೋತ್ಸವ ಹಾಗೂ ಶಯನೋತ್ಸವ, 27ರಂದು ಸಂಧಾನ ಲೀಲೋತ್ಸವ, ಪೂರ್ಣಾಹುತಿ ಮತ್ತು 28ರಂದು ಮಹಾಭಿಷೇಕ, ಮಹಾಮಂಗಳಾರತಿ, ದ್ವಾದಶಾರಾಧನಾ, ಧ್ವಜಾವರೋಹಣ ನಡೆಸುವ ಮೂಲಕ ಪೂಜಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ.
ಯುಗಾದಿ ಹಬ್ಬಕ್ಕೂ ಮೊದಲು ಫಾಲ್ಗುಣ ಕೃಷ್ಣ ಶ್ರವಣ ಏಕಾದಶಿಯಂದು ರಥೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ಗೋಪಾಲನ ದರ್ಶನ ಪಡೆಯುತ್ತಾರೆ. ಇಲ್ಲಿನ ರಥವನ್ನು ಬೆಟ್ಟದಲ್ಲಿ ಸಿಗುವ ಬೊಂಬುಗಳು ಮತ್ತು ದಪ್ಪ ದಪ್ಪ ಹಂಬುಗಳನ್ನು ಮಾತ್ರ ಬಳಸಿ ಕಟ್ಟುವುದು ವಿಶೇಷ. ಅಕ್ಕಪಕ್ಕದ ಗ್ರಾಮಸ್ಥರು, ಯುವಕರು ಸೇರಿ ರಥವನ್ನು ಕಟ್ಟುವುದು ಮತ್ತು ಎಳೆಯುವುದು ಇಲ್ಲಿನ ವಾಡಿಕೆ. ಕಾಡಿನಲ್ಲಿ ಬೆಳೆದ ದಪ್ಪ ದಪ್ಪ ಹಂಬುಗಳನ್ನು ಕಟ್ಟಿ ಎಳೆದರೆ ಮಾತ್ರ ರಥ ಮುಂದೆ ಸಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ನೂರಾರು ವರ್ಷಗಳ ಈ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ.
ವಿಶೇಷ ಬಸ್ ಸಂಚಾರ: ಇಲ್ಲಿನ ದೇವಾಲಯಕ್ಕೆ ಕೇವಲ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಹೋಗಿಬರಬೇಕಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಭಕ್ತರು ತಮ್ಮ ವಾಹನಗಳನ್ನು ಕಡ್ಡಾಯವಾಗಿ ಬೆಟ್ಟದ ತಪ್ಪಲಿನಲ್ಲಿ ನಿಲ್ಲಿಸಿ ಬಸ್‌ಗಳಲ್ಲಿಯೇ ಹೋಗಬೇಕಾಗಿದೆ. ಪ್ರತಿದಿನ ಬೆಳಗ್ಗೆ 8ರಿಂದಲೇ ಪಟ್ಟಣದ ಬಸ್‌ನಿಲ್ದಾಣದಿಂದ ಬೆಟ್ಟಕ್ಕೆ ಬಸ್‌ಗಳ ಸಂಚಾರ ಆರಂಭವಾಗಲಿದೆ. ಅಲ್ಲದೆ ಅರಣ್ಯ ಇಲಾಖೆ ಸಹಯೋಗದಲ್ಲಿ ಹಗ್ಗದಹಳ್ಳ ಪರಿಸರ ಅಭಿವೃದ್ಧಿ ಸಮಿತಿಯ ಎರಡು ಜೀಪುಗಳಲ್ಲಿಯೂ ಹೋಗಿಬರಬಹುದು.
ಗುಂಡ್ಲುಪೇಟೆ ಪಟ್ಟಣದಿಂದ 18 ಕಿಲೋಮೀಟರ್, ಮೈಸೂರಿನಿಂದ 78 ಕಿ.ಮೀ. ಅಂತರದಲ್ಲಿದೆ. ಗುಂಡ್ಲುಪೇಟೆಯಿಂದ ಊಟಿ ರಸ್ತೆಯಲ್ಲಿ 8 ಕಿ.ಮೀ. ಸಾಗಿದರೆ ಹಂಗಳ ಗ್ರಾಮದ ಮಾರ್ಗವಾಗಿ ಬೆಟ್ಟಕ್ಕೆ ಹೋಗಬಹುದು.
ಸಮುದ್ರ ಮಟ್ಟಕ್ಕಿಂತ 4769 ಅಡಿಗಳಷ್ಟು ಎತ್ತರದಲ್ಲಿರುವ ಈ ಬೆಟ್ಟ ಸದಾ ಹಿಮಚ್ಛಾದಿತವಾಗಿರುವುದರಿಂದ ಇದನ್ನು ಹಿಮವದ್ ಗೋಪಾಲಸ್ವಾಮಿಬೆಟ್ಟ ಎಂದು ಕರೆಯಲಾಗುತ್ತಿದೆ. ಬಂಡೀಪುರ ಹುಲಿ ಯೋಜನೆಯ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಗೆ ಸೇರಿರುವ ಬೆಟ್ಟ 25 ಕಿ.ಮೀ. ದಟ್ಟವಾದ ಕಾಡಿನಿಂದ ಆವರಿಸಿದೆ. ಇಲ್ಲಿ ವೈವಿಧ್ಯಮಯವಾದ ವನ್ಯ ಸಂಪತ್ತಿದ್ದು ಇಲ್ಲಿರುವ ಅಪೂರ್ವ ಗಿಡಮೂಲಿಕೆಗಳ ಆಗರವಿದೆ.
ಗೋಪಾಲಸ್ವಾಮಿ ಬೆಟ್ಟ ಪ್ರವಾಸಿಗರಿಗೆ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ ನಿಬ್ಬೆರಗಾಗಿಸುತ್ತಿರುವುದರಿಂದಲೇ ಭಕ್ತರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಲ್ಲಿ ವರ್ಷಪೂರ್ತಿ ಹಿಮದಿಂದ ತಂಪಾಗಿರುವ ಶ್ರೀ ರುಕ್ಷ್ಮಿಣಿ, ಸತ್ಯಭಾಮಾ ಸಹಿತನಾಗಿ ಕೊಳಲು ನುಡಿಸುತ್ತಿರುವ ಭಂಗಿಯಲ್ಲಿ ನಿಂತಿರುವ ಹಿಮವದ್ ಗೋಪಾಲನಿಗೆ ವಾರದ ಎಲ್ಲ ದಿನಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.
ಈ ದೇವಾಲಯಕ್ಕೆ ದೇಶ-ವಿದೇಶ ಮತ್ತು ರಾಜ್ಯ ಹಾಗೂ ನೆರೆ ರಾಜ್ಯಗಳ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬೆಟ್ಟದಲ್ಲಿ ಪ್ಲಾಸ್ಟಿಕ್ ವಸ್ತುಗಳಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ.
ಬೆಟ್ಟದ ಸುತ್ತ ಎಲ್ಲಿ ನೋಡಿದರೂ ಬೆಟ್ಟ-ಗುಡ್ಡಗಳು, ಕೆರೆಕಟ್ಟೆಗಳು, ಪೂರ್ವಕ್ಕೆ ತ್ರಿಯಂಬಕಾದ್ರಿ, ಪಶ್ವಿಮಕ್ಕೆ ನೀಲಾದ್ರಿ, ಉತ್ತರಕ್ಕೆ ಮಂಗಳಾದ್ರಿ, ದಕ್ಷಿಣಕ್ಕೆ ಶಂಬರಾದ್ರಿಗಿರಿ, ಅಗ್ನೇಯಕ್ಕೆ ಹಂಸಾದ್ರಿ, ನೈರುತ್ಯಕ್ಕೆ ಗರುಡಾದ್ರಿ, ವಾಯುವ್ಯಕ್ಕೆ ಪಲ್ಲವ, ಈಶಾನ್ಯದಲ್ಲಿ ಮಲ್ಲಿಕಾರ್ಜುನ ಗಿರಿಗಳಿವೆ. ಇವುಗಳೊಂದಿಗೆ ಗದ್ದೆಹಳ್ಳದಗುಡ್ಡ, ವರಡೇಕಲ್ಲು ಗುಡ್ಡ, ಕೆಂಪನಾಯಕರ ದುರ್ಗ, ಬಂಡೀಕಲ್ ಬೆಟ್ಟ ಮೊದಲಾದ ಚಿಕ್ಕಪುಟ್ಟ ಬೆಟ್ಟಗಳಿವೆ. ಸುತ್ತಲೂ ಹೂದಳಗಳಂತಿರುವ ಎಂಟು ಪರ್ವತಗಳಿಂದ ಸುತ್ತುವರಿದ ಕಮಲದ ಆಕೃತಿಯಲ್ಲಿ ಗೋಪಾಲಸ್ವಾಮಿ ಬೆಟ್ಟವನ್ನು ಕಮಲಾಚಲಗಿರಿ, ಕಂಜಗಿರಿ, ಗೋವರ್ಧನಗಿರಿ ಎಂದು ಕರೆಯಲಾಗುತ್ತದೆ.