ಐತಿಹಾಸಿಕ ಸ್ವರ್ಣ ಸಾಧನೆಗೆ ಹಿಮಾ ಸಂತಸ

ಟಂಪೆರ್(ಫಿನ್​ಲ್ಯಾಂಡ್): ವಿಶ್ವ ಜೂನಿಯರ್ ಚಾಂಪಿಯನ್​ಷಿಪ್​ನ ಮಹಿಳೆಯರ 400 ಮೀಟರ್ ಓಟದಲ್ಲಿ ಸ್ವರ್ಣ ಜಯಿಸಿ ಇತಿಹಾಸ ಬರೆದ ಹಿಮಾ ದಾಸ್ ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ‘ನಾನೀಗ ಕನಸು ಕಾಣುತ್ತಿರುವಂತಿದೆ. ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವುದನ್ನು ನಂಬಲಾಗುತ್ತಿಲ್ಲ’ ಎಂದು ಅಸ್ಸಾಂ ಅಥ್ಲೀಟ್ ಸಂಭ್ರಮಿಸಿದ್ದಾರೆ.

ಗುರುವಾರ ರಾತ್ರಿ ನಡೆದ ಐಎಎಎಫ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನ ಮಹಿಳೆಯರ 400 ಮೀ. ಓಟವನ್ನು 51.46 ಸೆಕೆಂಡ್​ಗಳಲ್ಲಿ ಪೂರೈಸಿದ 18 ವರ್ಷದ ಹಿಮಾ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ವಿಶ್ವ ಜೂನಿಯರ್ ಅಥ್ಲೆಟಿಕ್ಸ್​ನಲ್ಲಿ ಸ್ವರ್ಣ ಗೆದ್ದ ಭಾರತದ 2ನೇ ಹಾಗೂ ಜಾಗತಿಕ ಕ್ರೀಡಾಕೂಟದ ಟ್ರಾ್ಯಕ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯರೆನಿಸಿಕೊಂಡರು. ಇದಕ್ಕೂ ಮೊದಲು 2016ರಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಸ್ವರ್ಣ ಗೆದ್ದಿದ್ದರೆ, 2002ರಲ್ಲಿ ಸೀಮಾ ಪೂನಿಯಾ ಮತ್ತು 2014ರಲ್ಲಿ ನವಜೀತ್ ಕೌರ್ ದಿಲ್ಲೋನ್ ಡಿಸ್ಕಸ್​ನಲ್ಲಿ ಕಂಚು ಗೆದ್ದಿದ್ದರು. ‘ಪದಕ ಜಯಿಸಲು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಆಭಾರಿಯಾಗಿರುತ್ತೇನೆ. ಇಂಥ ಪ್ರೋತ್ಸಾಹವನ್ನು ನಿರೀಕ್ಷಿಸಿರಲಿಲ್ಲ. ನನ್ನ ಸಾಧನೆ ಬಗ್ಗೆ ಹೇಳಲು ನನಗೆ ಪದಗಳೇ ಸಿಗುತ್ತಿಲ್ಲ’ ಎಂದು ಹಿಮಾ ಐತಿಹಾಸಿಕ ಸಾಧನೆ ಬಳಿಕ ಹೇಳಿದರು. -ಏಜೆನ್ಸೀಸ್

ಗಣ್ಯರಿಂದ ಭೇಷ್

ಹಿಮಾ ದಾಸ್ ಐತಿಹಾಸಿಕ ಸಾಧನೆಗೆ ರಾಷ್ಟ್ರಪತಿ, ಪ್ರಧಾನಿ ಸೇರಿ ದೇಶದ ಹಲವು ಗಣ್ಯರು ಅಭಿನಂದಿಸಿದ್ದಾರೆ. ‘ಟ್ರಾ್ಯಕ್ ವಿಭಾಗದಲ್ಲಿ ಭಾರತಕ್ಕೆ ವಿಶ್ವ ಮಟ್ಟದಲ್ಲಿ ಮೊದಲ ಪದಕ ಗೆದ್ದುಕೊಟ್ಟ ಹಿಮಾಗೆ ಅಭಿನಂದನೆಗಳು. ಒಲಿಂಪಿಕ್ಸ್​ನಲ್ಲಿ ಇಂಥ ಸಾಧನೆ ನಿಮ್ಮಿಂದ ಮೂಡಿಬರಲಿ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ‘ಹಿಮಾ ಸಾಧನೆ ಭಾರತದ ಇಡೀ ಯುವ ಸಮೂಹಕ್ಕೆ ಸ್ಪೂರ್ತಿ. ಆಕೆಯ ಸಾಧನೆ ಬಗ್ಗೆ ಹೆಮ್ಮೆ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಮಾಜಿ ಅಥ್ಲೀಟ್ ಪಿಟಿ ಉಷಾ, ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿ ಹಲವು ಗಣ್ಯರು ಕೊಂಡಾಡಿದ್ದಾರೆ.

ರೈತನ ಪುತ್ರಿ, ಫುಟ್ಬಾಲ್ ಆಟಗಾರ್ತಿ!

ಕೇವಲ 0.4 ಎಕರೆ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಸಣ್ಣ ರೈತ ರಂಜಿತ್ ದಾಸ್ ಮತ್ತು ಗೃಹಿಣಿ ಜುನಾಲಿ ಮಗಳಾಗಿರುವ ಹಿಮಾ, ಬಡತನದ ನಡುವೆ ಐತಿಹಾಸಿಕ ಸಾಧನೆ ತೋರಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ನಾಲ್ವರು ಮಕ್ಕಳಲ್ಲಿ ಹಿಮಾ ಹಿರಿಯಳಾಗಿದ್ದು, ಇಬ್ಬರು ತಂಗಿ ಮತ್ತು ಓರ್ವ ತಮ್ಮನನ್ನು ಹೊಂದಿದ್ದಾರೆ. ಧಿಂಗ್​ನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯಾಗಿರುವ ಹಿಮಾ, ಅಥ್ಲೀಟ್ ಆಗುವುದಕ್ಕೆ ಮುನ್ನ ಫುಟ್​ಬಾಲ್ ಆಟಗಾರ್ತಿಯಾಗಿದ್ದರು.

ತಿರುವು ನೀಡಿದ ಕೊನೇ 50 ಮೀ.!

ನಾಲ್ಕನೇ ಲೇನ್​ನಲ್ಲಿ ಓಡಿದ ಹಿಮಾ ದಾಸ್, ಆರಂಭಿಕ 350 ಮೀಟರ್​ವರೆಗೂ 4-5ನೇ ಸ್ಥಾನದಲ್ಲಿದ್ದರು. ಓಟ ಮುಕ್ತಾಯಕ್ಕೆ 50 ಮೀಟರ್ ಬಾಕಿ ಇರುವಾಗ ಚಿರತೆ ವೇಗದಲ್ಲಿ ಓಡಿದ ಹಿಮಾ ರೊಮೇನಿಯಾದ ಆಂಡ್ರೆಸ್ ಮಿಲ್ಕೊಸ್ (52.07ಸೆ.) ಹಾಗೂ ಅಮೆರಿಕದ ಟೇಲರ್ ಮಾನ್ಸನ್​ರನ್ನು (52.28ಸೆ) ಹಿಂದಿಕ್ಕಿ ಇತಿಹಾಸ ನಿರ್ವಿುಸಿದರು.