ಅಥ್ಲೆಟಿಕ್ಸ್​ನ ನವತಾರೆ

| ಉಮೇಶ್ ಕುಮಾರ್ ಶಿಮ್ಲಡ್ಕ

ಅದು ಫಿನ್​ಲೆಂಡ್​ನ ರೆಟಿನಾ ಸ್ಟೇಡಿಯಂ. ಅಂದು ಜುಲೈ 12. 2018ರ ಐಎಎಎಫ್ ವಿಶ್ವ 20 ವಯೋಮಿತಿ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದ 400 ಮೀಟರ್ ಓಟದ ಅಂತಿಮ ಹಣಾಹಣಿಗೆ ಆ ಕ್ರೀಡಾಂಗಣ ಸಿದ್ಧವಾಗಿತ್ತು. ಭಾರತದ ಕೆಲವು ಕ್ರೀಡಾಭಿಮಾನಿಗಳ ನೋಟವೂ ಅದರತ್ತ ಇತ್ತೆನ್ನಿ. ಕಾರಣ ಇಲ್ಲದಿಲ್ಲ, ಅಲ್ಲಿ ಗಮನಸೆಳೆಯುತ್ತಿದ್ದುದು ಅಸ್ಸಾಂನ ಓಟಗಾರ್ತಿ ಹದಿನೆಂಟರ ಹರೆಯದ ಹಿಮಾ ದಾಸ್. ಓಟದ ವಿಚಾರ ಬಂದಾಗ ಅಥ್ಲೆಟಿಕ್ಸ್​ಗಳ ಪೈಕಿ ಮೊದಲು ನೆನಪಾಗುವ ಹೆಸರು ಓಟದ ರಾಣಿ ಪಿ.ಟಿ.ಉಷಾ ಅವರದ್ದು. ಏಷ್ಯಾ ಮಟ್ಟದಲ್ಲಿ 400 ಮೀಟರ್ ಓಟದ ಅಂಗಣದಲ್ಲಿ ಮೇಲುಗೈ ಸಾಧಿಸಿದ್ದವರು ಅವರು. ಆದರೆ, ಜಾಗತಿಕ ಮಟ್ಟದ ಐಎಎಎಫ್ ಕ್ರೀಡಾಕೂಟದಲ್ಲಿ ಅಂತಿಮ ಹಣಾಹಣಿ ತಲುಪಿದ ಸಾಧನೆಯನ್ನು ಭಾರತದ ಯಾವ ಓಟಗಾರ್ತಿಯೂ ಮಾಡಿರಲಿಲ್ಲ. ಫೈನಲ್ ತಲುಪಿದ್ದ ಹಿಮಾ ದಾಸ್ ಫೈನಲ್​ನಲ್ಲಿ ಓಡಲು ಆರಂಭಿಸಿದಾಗ ಆಕೆಯ ಬಗ್ಗೆ ದೇಶದ ಜನರಿಗೆ ಹೆಚ್ಚೇನೂ ಗೊತ್ತಿರಲಿಲ್ಲ. ಕೇವಲ 51.46 ಸೆಕೆಂಡ್​ನಲ್ಲಿ ಹಿಮಾ ಚಿನ್ನದ ಪದಕ ಗೆದ್ದು ದೇಶದ ಮನೆಮಾತಾದರು.

ಅಷ್ಟೇ ಅಲ್ಲ, ಅವರು ಚಿನ್ನದ ಪದಕಕ್ಕೆ ಕೊರಳೊಡ್ಡುವ ಸಂದರ್ಭದಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಭಾವುಕರಾಗಿದ್ದ ದೃಶ್ಯ ವಿಡಿಯೋ ಮೂಲಕ ದೇಶವಾಸಿಗಳ ಹೃನ್ಮನಗಳನ್ನು ತಟ್ಟಿತು ಕೂಡ. ಸಾಧನೆಯನ್ನು ಮಾತೃಭೂಮಿಗೆ ಒಪ್ಪಿಸುವ ಆ ಮುಗ್ಧ ಭಾವುಕ ಮನಸ್ಥಿತಿಯ ಹಿಮಾ ಅವರ ನಡವಳಿಕೆ ಎಂಥವರನ್ನೂ ಕರಗುವಂತೆ ಮಾಡಿತ್ತು.

ಓಟದ ಅಂಗಳಕ್ಕಿಳಿದ ಅಲ್ಪ ಅವಧಿಯಲ್ಲೇ ಬಲವಾದ ಹೆಜ್ಜೆ ಗುರುತು ಮೂಡಿಸಿದ ಹಿಮಾ ಕೃಷಿ ಕುಟುಂಬದ ಹಿನ್ನೆಲೆಯವರು. ಅಸ್ಸಾಂನ ನಾಗಾಂವ್​ನ ಧಿಂಗ್ ಪಟ್ಟಣಕ್ಕೆ ಸಮೀಪದ ಕಂಧುಲಿಮಾರಿ ಗ್ರಾಮದಲ್ಲಿ 2000ನೇ ಇಸವಿಯ ಜನವರಿ 9ರಂದು ಜನಿಸಿದರು. ತಂದೆ ರಂಜಿತ್. ತಾಯಿ ಜೊನಾಲಿ ದಾಸ್. ಅರ್ಧ ಎಕರೆಯೂ ಇಲ್ಲದ ಕೃಷಿ ಭೂಮಿ. ಭತ್ತ ಕೃಷಿಯನ್ನು ನೆಚ್ಚಿಕೊಂಡಿರುವ ಕುಟುಂಬ. ನಾಲ್ವರು ಮಕ್ಕಳ ಪೈಕಿ ಹಿಮಾ ಹಿರಿಯಕ್ಕ. ಧಿಂಗ್ ಪಬ್ಲಿಕ್ ಹೈಸ್ಕೂಲ್​ನಲ್ಲಿ ಶಿಕ್ಷಣ. ಬಾಲ್ಯದಲ್ಲಿ ಫುಟ್ಬಾಲ್​ನತ್ತ ಒಲವು. ಫುಟ್ಬಾಲ್ ತಾರೆಯಾಗುವ ಕನಸು ಕಂಡು ಆ ಆಟವನ್ನು ಹುಡುಗರ ಜತೆಗೆ ಆಡಲಾರಂಭಿಸಿದರು. ಆದರೆ, ಭವಿಷ್ಯದಲ್ಲಿ ಅದನ್ನು ವೃತ್ತಿಯಾಗಿ ಸ್ವೀಕರಿಸಲಾಗದು ಎಂಬುದು ಅರಿವಾಗಿ ಅಥ್ಲೆಟಿಕ್ಸ್ನತ್ತ ಹೊರಳಿದವರು ಹಿಮಾ. ಇದಕ್ಕೆ ಪ್ರೇರಣೆ ನೀಡಿದ್ದು ಜವಹರ ನವೋದಯ ವಿದ್ಯಾಲಯದ ದೈಹಿಕ ಶಿಕ್ಷಣ ತರಬೇತುದಾರ ಶಂಸು ಹಖ್. ಆರಂಭದಲ್ಲಿ ಹಖ್ ಮಾರ್ಗದರ್ಶನದಲ್ಲಿ ಸಣ್ಣ ಮತ್ತು ಮಧ್ಯಂತರ ದೂರದ ಓಟದ ಸ್ಪರ್ಧೆಗಳಲ್ಲಿ ಹಿಮಾ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಹಖ್, ನಾಗಾಂವ್ ಸ್ಪೋರ್ಟ್ಸ್ ಅಸೋಸಿಯೇಷನ್​ನ ಗೌರಿ ಶಂಕರ ರಾಯ್ಗೆ ಹಿಮಾರನ್ನು ಪರಿಚಯಿಸಿದರು. ಅಂತರ್​ಜಿಲ್ಲಾ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಗೆದ್ದರು. ಕ್ರೀಡಾ ಮತ್ತು ಯುವಜನ ನಿರ್ದೇಶನಾಲಯದ ಅಥ್ಲೆಟಿಕ್ಸ್ ತರಬೇತುದಾರ ನಿಪೋನ್ ದಾಸ್ ಅವರ ಗಮನಸೆಳೆದಿತ್ತು ಹಿಮಾರ ಈ ಸಾಧನೆ. ಗುವಾಹಟಿಗೆ ಬಂದು ತರಬೇತಿ ಪಡೆಯುವಂತೆ ಹಿಮಾಗೆ ತಿಳಿಸಿದ ನಿಪೋನ್, ಅವರ ಪಾಲಕರ ಬಳಿ ತೆರಳಿ ತರಬೇತಿ ಪ್ರಸ್ತಾವನೆ ಮುಂದಿರಿಸಿದರು. ಸಾರುಸಾಜೈ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ತಲುಪಿದ ಹಿಮಾ, ರಾಜ್ಯ ಕ್ರೀಡಾ ಅಕಾಡೆಮಿ ಸೇರಿ ಬಾಕ್ಸಿಂಗ್ ಮತ್ತು ಫುಟ್ಬಾಲ್ ವಿಶೇಷ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡರು. ಇಲ್ಲಿಂದ ಅವರು ಮೊದಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯುವ ಕ್ರೀಡಾಕೂಟದಲ್ಲಿ ಭಾಗಿಯಾದರು. ತರುವಾಯ, ಕಳೆದ ವರ್ಷ ಜೂನ್​ನಲ್ಲಿ ಬ್ಯಾಂಕಾಕ್​ನಲ್ಲಿ ನಡೆದ ಏಷ್ಯನ್ ಯೂತ್ ಮೀಟ್​ನಲ್ಲಿ 200 ಮೀಟರ್ ಓಟವನ್ನು 25.05 ಸೆಕೆಂಡ್​ನಲ್ಲಿ ಓಡಿ ಮುಗಿಸಿದ್ದರು.

ಈ ನಡುವೆ, ಈ ವರ್ಷ ಜನವರಿಯಿಂದೀಚೆಗೆ ನಿಧಾನವಾಗಿ ದೇಶದ ಜನರ ಗಮನ ಸೆಳೆಯಲಾರಂಭಿಸಿದವರು ಹಿಮಾ. ತನ್ನದೇ ದಾಖಲೆಗಳನ್ನು ಮುರಿಯುತ್ತ ಸಾಗುತ್ತಿರುವ ಅವರು, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 400 ಮೀಟರ್ ಓಟದಲ್ಲಿ ದಾಖಲೆಗಳನ್ನು ಬರೆದು ಅನೇಕರ ಹುಬ್ಬು ಮೇಲೇರುವಂತೆ ಮಾಡಿದ್ದಾರೆ. ಹೀಗೆ ಕೆಲವು ದಾಖಲೆಗಳನ್ನು ಉಲ್ಲೇಖಿಸುವುದಾದರೆ, ಪಟಿಯಾಲ ಫೆಡರೇಷನ್ ಕಪ್(ಮಾ.5)ನಲ್ಲಿ 400 ಮೀಟರ್ ಓಟವನ್ನು 53.21 ಸೆಕೆಂಡ್​ನಲ್ಲಿ, ಇದರ ಫೈನಲ್​ನಲ್ಲಿ 51.97 ಸೆಕೆಂಡ್​ನಲ್ಲಿ ಓಡಿ ಮುಗಿಸಿದ್ದರು. ಈ ಸಾಧನೆಯಿಂದಾಗಿ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತು. ಏಪ್ರಿಲ್​ನಲ್ಲಿ ನಡೆದ ಕಾಮನ್​ವೆಲ್ತ್ ಗೇಮ್ಸ್​ನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು ಆರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂದಿತ್ತು. ಗುವಾಹಟಿಯಲ್ಲಿ ನಡೆದ ಅಂತಾರಾಜ್ಯ ಚಾಂಪಿಯನ್​ಷಿಪ್​ನಲ್ಲಿ 51.13 ಸೆಕೆಂಡ್​ನಲ್ಲಿ 400 ಮೀಟರ್ ಓಟ ಮುಗಿಸಿದ್ದರು. ಇದು ಅವರ ಈವರೆಗಿನ ವೈಯಕ್ತಿಕ ದಾಖಲೆ.

ಜಕಾರ್ತಾದಲ್ಲಿ ಆಗಸ್ಟ್​ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಲ್ಲಿ ಹಿಮಾ ಓಟವಷ್ಟೇ ಅಲ್ಲ, ಮಹಿಳಾ ಮತ್ತು ಮಿಕ್ಸೆಡ್ ರಿಲೇಗಳಲ್ಲೂ ಭಾಗವಹಿಸಲಿದ್ದಾರೆ.

ಇಂಥ ಹಿಮಾರ ನಾಗರಿಕ ಪ್ರಜ್ಞೆ ಕುರಿತೂ ಹೇಳಬೇಕಾಗುತ್ತದೆ. ವಯಸ್ಸಿನಲ್ಲಿ ಕಿರಿಯರಾದರೂ ಅವರು ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಂಡುಲಿ ಗ್ರಾಮದಲ್ಲಿ ಮದ್ಯದಂಗಡಿಗಳ ವಿರುದ್ಧ ಪ್ರತಿಭಟಿಸುವಲ್ಲಿ ಕೂಡ ಹಿಂದೆ ಬೀಳಲಿಲ್ಲ. ಜಿಲ್ಲೆಯ ಜನ ಹಿಮಾರನ್ನು ಪ್ರೀತಿಯಿಂದ ‘ಧಿಂಗ್ ಎಕ್ಸ್​ಪ್ರೆಸ್’ ಎಂದೇ ಕರೆಯುವುದು. ಅದು ಅವರ ಓಟದ ವೇಗಕ್ಕೆ ನಿದರ್ಶನ.

ಇತ್ತೀಚಿನ ಅವರ ಚಿನ್ನದಂಥ ಸಾಧನೆಗೆ ಹಲವು ಗಣ್ಯರು ಶುಭ ಕೋರಿದ್ದಾರಲ್ಲದೇ, ಹಿರಿಯ ಅಥ್ಲೀಟ್​ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಕೆ ಇದೇ ವೇಗವನ್ನು ಕಾಯ್ದುಕೊಂಡರೆ ಮಂಜಿತ್ ಕೌರ್ ನಿರ್ವಿುಸಿರುವ 51.05 ಸೆಕೆಂಡ್​ಗಳ ರಾಷ್ಟ್ರೀಯ ದಾಖಲೆ ಮುರಿಯುವ ದಿನ ದೂರವಿಲ್ಲ. ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಗೇಮ್ಸ್​ನಲ್ಲಿ ಓಟದ ಅವಧಿ 50 ಸೆಕೆಂಡ್​ಗೂ ಕೆಳಗೆ ಬಂದರೆ ಅಚ್ಚರಿ ಏನಿಲ್ಲ ಎಂದು ಓಟದ ರಾಣಿ ಎಂದೇ ಪ್ರಸಿದ್ಧರಾದ ಪಿ.ಟಿ.ಉಷಾ ಪ್ರತಿಕ್ರಿಯಿಸಿದ್ದರು.

ಇಂಥ ಹಿಮಾಗೆ ಇನ್ನೂ ಹದಿಹರೆಯ. ಸಾಧನೆಯ ಹಾದಿಯಲ್ಲಿ ಈಗಷ್ಟೇ ಚೊಚ್ಚಲ ಹೆಜ್ಜೆ ಗುರುತು ಮೂಡಿಸಿದ್ದಾರಷ್ಟೇ. ಸಾಗಬೇಕಾದ ಹಾದಿ ಇನ್ನೂ ಇದೆ ಎಂಬುದು ವಾಸ್ತವ. ಚೊಚ್ಚಲ ಗೆಲುವು ಅವರನ್ನು ಆವರಿಸಿಕೊಂಡಿಲ್ಲ ಎಂಬುದಕ್ಕೆ, ‘ನಾನಿನ್ನೂ ಕೆಳಸ್ತರದಲ್ಲಿರುವ ಕ್ರೀಡಾಪಟು. ನಮ್ಮದು ಮಧ್ಯಮ ವರ್ಗದ ಕುಟುಂಬ. ನಾನಿನ್ನೂ ತಾರೆಯಾಗಿಲ್ಲ’ ಎಂಬ ಹಿಮಾರ ಮಾತು ಸಾಕ್ಷಿ. ಆದರೆ, ಅವರ ಮಾತುಗಳಲ್ಲಿರುವ ವಿಶ್ವಾಸ, ಓಟದ ಟ್ರಾ್ಯಕ್ ಮೇಲೆ ಅವರ ಕಾಲಿಗೆ ಇರುವ ಹಿಡಿತ ಎಲ್ಲವೂ ಅವರ ಸಾಧನೆಯ ಹಾದಿಯತ್ತ ಕುತೂಹಲದ ನೋಟ ಬೀರುವಂತೆ ಮಾಡಿವೆ.