ನೆಲ್ಯಾಡಿ: ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ಗುಡ್ಡ ಕುಸಿತವಾಗುತ್ತಿದೆ. ಮಳೆ ಪ್ರಮಾಣ ಇಳಿಕೆಯಾಗುವವರೆಗೆ ದ.ಕ- ಹಾಸನ ಸಂಪರ್ಕ ಕಡಿತ ಸಾಧ್ಯತೆ ಇದೆ.
ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ರೈಲ್ವೆ ಟ್ರ್ಯಾಕ್ ಸಮೀಪ ಗುಡ್ಡ ಜರಿದು, ಮಣ್ಣುಗಳ ರಾಶಿ ನಿರಂತರ ಹೆದ್ದಾರಿ ರಸ್ತೆಗೆ ಬೀಳುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಸದ್ಯಕ್ಕೆ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.
*ರಸ್ತೆ ಅಭಿವೃದ್ಧಿ ಕಾಮಗಾರಿ ಸಮಸ್ಯೆ
ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ರಸ್ತೆ ವಿಸ್ತರಣೆಗೆ ಈ ಹಿಂದೆ ಗುಡ್ಡವನ್ನು ಅಗೆಯಲಾಗಿತ್ತು. ಮಾರನಹಳ್ಳಿ ರೈಲ್ವೆ ಟ್ರ್ಯಾಕ್ ನಿಂದ ಸುಮಾರು 50 ಅಡಿ ಮೇಲ್ಭಾಗದಿಂದ ಮಣ್ಣು ಜರಿಯುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಏಕಕಾಲದಲ್ಲಿ ಒಂದು ಬದಿಯ ವಾಹನಕಷ್ಟೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನಿಧಾನ ಗತಿಯಲ್ಲಿ ಎರಡು ಬದಿಯ ವಾಹನಕ್ಕೂ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.
*ರೈಲು ಸಂಚಾರಕ್ಕೂ ತೊಂದರೆ
ಮಳೆ ನಿರಂತರ ಸುರಿಯಲಾರಂಭಿಸಿದರೆ ರೈಲು ಸಂಚಾರದಲ್ಲಿಯು ವ್ಯತ್ಯಾಸವಾಗಬಹುದು ಎಂದು ಹೇಳಲಾಗುತ್ತಿದೆ. ದೊಡ್ಡ ತಪ್ಪಲು ಸಮೀಪ ಗುಡ್ಡ ಜರಿಯುತ್ತಿರುವ ಕಾರಣ ಬೆಳಗ್ಗೆ 9 ಗಂಟೆಯಿಂದ ನೆಲ್ಯಾಡಿ -ಶಿರಾಡಿ- ಗುಂಡ್ಯ ಭಾಗದಿಂದ ಸಂಚರಿಸುವ ಘನವಾಹನಗಳಾದ ಟ್ಯಾಂಕರ್, 16 ಚಕ್ರದ ಟ್ರಕ್, ಟ್ರೈಲರ್ ಗಳನ್ನು ನೆಲ್ಯಾಡಿ – ಗುಂಡ್ಯ ಭಾಗದಲ್ಲಿಯೇ ನಿಲ್ಲಿಸಲಾಗಿದೆ. ಮಾರನಹಳ್ಳಿ ಸಮೀಪ ಸಂಚಾರ ನಿರ್ಬಂಧಗೊಂಡರೆ ವಾಹನ ದಟ್ಟಣೆ ನಿಯಂತ್ರಿಸಲು ಕಷ್ಟವಾದಿತು ಎನ್ನುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದಂತೆ ಲಘು ವಾಹನಗಳು ಸಂಚಾರಿಸುತ್ತಿದೆ.
ಗುರುವಾರ ಮುಂಜಾನೆಯಿಂದಲೇ ನೆಲ್ಯಾಡಿ ಶಿರಾಡಿ ಗುಂಡ್ಯ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಅಗತ್ಯ ಕಾರ್ಯಗಳಿದ್ದರೆ ಮಾತ್ರ ಪ್ರಯಾಣ ಕೈಗೊಳ್ಳಿ, ಇಲ್ಲವಾದರೆ ಅನಾವಶ್ಯಕ ಸಮಸ್ಯೆಯನ್ನು ತಂದೊಡ್ಡಬೇಡಿ ಎಂದು ಸ್ಥಳೀಯರು ವಿನಂತಿಸಿದ್ದಾರೆ. ಸ್ಥಳದಲ್ಲಿ ಹೆದ್ದಾರಿ ಪೊಲೀಸರು, ಸಂಚಾರ ಠಾಣೆ ಪೋಲಿಸರು ಆರಕ್ಷಕ ಠಾಣೆ ಪೊಲೀಸರು, ರಿಷಾ ಕ್ರೇನ್ ಸರ್ವಿಸಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.