ಹೆಚ್ಚಿದ ತಾಜಾ ತರಕಾರಿ ಬೆಲೆ

ಕೆ.ಸಂಜೀವ ಆರ್ಡಿ, ಸಿದ್ದಾಪುರ
ಗ್ರಾಮೀಣ ಭಾಗಗಳಲ್ಲಿ ಕಾಡುಪ್ರಾಣಿಗಳ ಹಾವಳಿ, ಕೀಟಬಾಧೆ ರೋಗಗಳು, ಹವಮಾನ ವೈಪರೀತ್ಯದಿಂದ ತರಕಾರಿ ಬೆಳೆ ಕುಂಠಿತಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ತರಕಾರಿ ಬೆಳೆಸುವುದರಿಂದ ಹಿಂದೆ ಸರಿದ ಪರಿಣಾಮ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಗಗನಕ್ಕೆರಿದೆ.
ಕಳಪೆ ತರಕಾರಿ ಬೀಜಗಳು: ಇತ್ತೀಚಿನ ದಿನಗಳಲ್ಲಿ ಪೇಟೆ ಅಂಗಡಿಗಳಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಮಾರಾಟವಾಗುವ ತರಕಾರಿ ಬೀಜಗಳನ್ನು ಮಣ್ಣಿಗೆ ಹಾಕಿದರೆ ಮೊಳಕೆ ಬಾರದೇ ಹಾಳಾಗುತ್ತವೆ. ಮೊಳಕೆಯೊಡೆದರೂ ಬೆಳವಣಿಗೆ ಕುಂಠಿತಗೊಂಡು ಸತ್ತು ಹೋಗುತ್ತವೆ. ಇನ್ನು ಕೆಲವು ತರಕಾರಿ ಗಿಡಗಳು ಬೆಳೆದರೂ ಫಸಲುಗಳು ಬರುವುದಿಲ್ಲ.
ಘಟ್ಟದ ತರಕಾರಿ: ಶಿವಮೊಗ್ಗ, ಹೊನ್ನಾಳಿ, ಚಿಕ್ಕಮಗಳೂರು ಹಾಗೂ ಸುತ್ತ ಮುತ್ತಲಿನ ಭಾಗಗಳಿಂದ ವ್ಯಾಪಾರಸ್ಥರು ತರಕಾರಿಗಳನ್ನು ಇಲ್ಲಿನ ಪೇಟೆಯ ಅಂಗಡಿ, ಮಾರುಕಟ್ಟೆ ಹಾಗೂ ವಾರದ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ. ಸ್ಥಳೀಯ ರೈತರು ತರಕಾರಿ ಕೃಷಿಯಿಂದ ಹಿಂದೆ ಸರಿಯುತ್ತಿರುವುದರಿಂದ ತಾಜಾ ತರಕಾರಿ ಬೆಳೆಗಳು ಕಣ್ಮರೆಯಾಗಿ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಲು ಕಾರಣವಾಗಿದೆ.
ತಾಜಾ ತರಕಾರಿ ರುಚಿಕರ: ರೈತರು ಹಿಂದಿನ ಕಾಲದಲ್ಲಿ ಸಾವಯವ ಹಟ್ಟಿ ಗೊಬ್ಬರ, ಸೆಗಣಿ, ಫಲವತ್ತಾದ ಸುಡುಮಣ್ಣು ಬಳಸಿ ತರಕಾರಿಗಳನ್ನು ಬೆಳೆಸುತ್ತಿದ್ದರು. ಇಂತಹ ತರಕಾರಿಗಳು ರುಚಿಕರ ಹಾಗೂ ಪರಿಮಳಗಳಿಂದ ಕೂಡಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅಧಿಕ ಇಳುವರಿ ಪಡೆಯುವ ದುರಾಸೆಯಿಂದ ತರಕಾರಿ ಬೆಳೆಗಳಿಗೆ ರಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸುತ್ತಿದ್ದು, ಜನರು ಸೇವಿಸುವ ತರಕಾರಿಗಳು ರುಚಿಕರವಿಲ್ಲದೇ ಕೆಲವೇ ಸಮಯಗಳಲ್ಲಿ ಕೊಳೆತು ಹೋಗುತ್ತವೆ. ಜತೆಗೆ ಆರೋಗ್ಯಕ್ಕೂ ಸಂಚಕಾರ.

ಸುಮಾರು ವರ್ಷಗಳಿಂದ ಮನೆ ಸುತ್ತ ಮುತ್ತಲಿನ ಭಾಗಗಳಲ್ಲಿ ಸಾವಯವ ಹಟ್ಟಿ ಗೊಬ್ಬರ ಬಳಸಿ ತರಕಾರಿಗಳನ್ನು ಬೆಳೆಸುತ್ತಿದ್ದೇನೆ. ಮಳೆಗಾಲದಲ್ಲಿ ಹೆಚ್ಚು ತರಕಾರಿ ಬೆಳೆಸುತ್ತೇನೆ. ತರಕಾರಿ ಬೀಜಗಳನ್ನು ಸಂಗ್ರಹಿಸಿ ಜೋಪಾನವಾಗಿಟ್ಟರೂ ಹಾಳಾಗುವ ಸಂಭವ ಹೆಚ್ಚಾಗಿದೆ. ಹೆಚ್ಚು ಮಳೆ ಹಾಗೂ ಕೀಟ, ಹುಳಗಳ ಹಾವಳಿಯಿಂದ ತರಕಾರಿ ಬೆಳೆಗಳು ಹಾಳಾಗುತ್ತಿವೆ. ಫಸಲು ಕಡಿಮೆ ಬರುತ್ತದೆ.
|ಸಾಂಕ್ಲಿ ನಾಯ್ಕ, ಪ್ರಗತಿ ಪರ ಕೃಷಿಕ ಕಲ್ಮರ್ಗಿ

ಕೃಷಿಕರು ತರಕಾರಿ ಬೆಳೆಸುವುದು ಕಡಿಮೆ ಮಾಡಿದ್ದರಿಂದ ಅಪರೂಪಕ್ಕೊಮ್ಮೆ ತರಕಾರಿಗಳನ್ನು ಅಂಗಡಿಗೆ ಕೊಡುತ್ತಾರೆ. ಊರ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರಸ್ತುತ ಘಟ್ಟದ ಭಾಗದಿಂದ ತರಕಾರಿ ಬರುತ್ತದೆ. ಆದರೆ ಬೇಡಿಕೆ ಕಡಿಮೆ. ಊರ ತರಕಾರಿ ಕೆಲವು ದಿನಗಳವರೆಗೆ ಮಾರಾಟ ಮಾಡಬಹುದು.
|ಉದಯ ನಾಯ್ಕ, ತರಕಾರಿ ವ್ಯಾಪಾರಿ