ಬಾಡುತ್ತಿದೆ ಘಮಘಮ ಮಲ್ಲಿಗೆ!

ಅವಿನ್ ಶೆಟ್ಟಿ, ಉಡುಪಿ

ಒಂದೆಡೆ ಶಿಲೀಂಧ್ರ ಬಾಧೆ, ಮತ್ತೊಂದೆಡೆ ಎಲೆಚುಕ್ಕಿ ರೋಗ..
ಈ ಎರಡು ಕಾರಣಗಳಿಂದ ಜಿಲ್ಲೆಯ ಮಲ್ಲಿಗೆ ಕೃಷಿಯೇ ಬಾಡುವಂತಾಗಿದೆ. ಕೃಷಿಕ ಕಣ್ಣೀರಿಡುವ ಸ್ಥಿತಿಯಿದೆ. ಇಳುವರಿ ಸಂಪೂರ್ಣ ಇಳಿಮುಖವಾಗಿದ್ದು, ಮಾರುಕಟ್ಟೆಯಲ್ಲಿ ಶಂಕರಪುರ ಮಲ್ಲಿಗೆ(ಉಡುಪಿ ಮಲ್ಲಿಗೆ)ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ಎಲೆಗಳ ಮೇಲೆ ಕಾಣಿಸಿಕೊಳ್ಳುವ ಸಣ್ಣ ಸಣ್ಣ ಕಪ್ಪುಚುಕ್ಕೆಗಳು, ಎಲೆಯನ್ನೇ ವ್ಯಾಪಿಸಿ ಸಂಪೂರ್ಣ ಒಣಗಿ ಉದುರಿಸುತ್ತದೆ. ಕಾಂಡಕ್ಕೆ ಆವರಿಸುವ ಶಿಲೀಂಧ್ರ, ಬೇರಿನಿಂದ, ಎಲೆಗಳಿಗೆ ಹಬ್ಬುತ್ತ ಸಂಪೂರ್ಣ ನಾಶಮಾಡುತ್ತದೆ. ಬೇಸಿಗೆಯಲ್ಲಿ ನೀರಿಲ್ಲದೆ ಒಣಗುವ ಗಿಡಗಳಂತೆ ಸಸಿಗಳು ಕಾಣುತ್ತವೆ. ಜಿಲ್ಲೆಯಲ್ಲಿ ಕಾರ್ಕಳ 87, ಕುಂದಾಪುರ 13, ಉಡುಪಿ 114 ಹೆಕ್ಟೆರ್ ಸೇರಿದಂತೆ ಒಟ್ಟು 214 ಹೆಕ್ಟೆರ್‌ಭೂ ಪ್ರದೇಶದಲ್ಲಿ ಮಲ್ಲಿಗೆ ಕೃಷಿ ಇದೆ. ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಗರಿಷ್ಠ ಪ್ರಮಾಣದ ಮಲ್ಲಿಗೆ ಕೃಷಿಯಿದೆ. ಮನೆಗಳಲ್ಲೇ 500ರವರೆಗೂ ಗಿಡಗಳನ್ನು ಕಾಣಬಹುದು.

ದರ ಏರಿಕೆ ಬೆಳೆಗಾರರಿಗಿಲ್ಲ: ಸಮಾನ್ಯವಾಗಿ ಮಳೆಗಾಲದಲ್ಲಿ ಇಳುವರಿ ಕಡಿಮೆ. ಹಾಗಾಗಿ ಬೇಡಿಕೆ ಹೆಚ್ಚಾಗಿ, ಬೆಲೆ ಏರುತ್ತದೆ. ಇದೀಗ ಗಿಡಗಳಿಗೆ ರೋಗಭಾದೆ ತೀವ್ರಗೊಂಡ ಹಿನ್ನೆಲೆಯಲ್ಲಿ ಇಳುವರಿಯಲ್ಲಿಯೂ ಹಿನ್ನಡೆಯಾಗಿದೆ. ಆರ್ಥಿಕವಾಗಿ ಮಲ್ಲಿಗೆ ಕೃಷಿಯನ್ನೇ ನಂಬಿಕೊಂಡ ಕೃಷಿಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಮಲ್ಲಿಗೆ ಪೂರೈಕೆ ಆಗದೆ, ದರ ಹೆಚ್ಚಿದೆ. ಆದರೆ, ಈ ದರ ಬೆಳೆಗಾರರಿಗೆ ಲಭಿಸುತ್ತಿಲ್ಲ.

10 ವರ್ಷ ಹಿಂದೆಯೂ ಕಾಡಿತ್ತು ಶಿಲೀಂಧ್ರ!: ಹತ್ತು ವರ್ಷ ಹಿಂದೆಯೂ ಮಲ್ಲಿಗೆ ಬೆಳೆಗೆ ಶಿಲೀಂಧ್ರ ಬಾಧೆ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ವಕ್ಕರಿಸಿದೆ. 50 ಚೆಂಡು ಮಲ್ಲಿಗೆ ಕೊಡುತ್ತಿದ್ದ 500 ಗಿಡಗಳಲ್ಲಿ ಪ್ರಸ್ತುತ 5 ಚೆಂಡು ಮಲ್ಲಿಗೆಯೂ ಇಳುವರಿ ಆಗುತ್ತಿಲ್ಲ. ಕೀಟನಾಶಕ ಬಳಸಿದರೆ ರೋಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಆದರೆ, ಮತ್ತೆ ಹೆಚ್ಚಾಗಿದೆ ಎನ್ನುತ್ತಾರೆ ಮಲ್ಲಿಗೆ ಕೃಷಿಕರು.

ಮಲ್ಲಿಗೆ ಗಿಡಗಳು ಒಣಗಿ ಸಾಯುತ್ತಿರುವುದಕ್ಕೆ ಇಲಾಖೆ ಸೂಚಿಸಿದ ರಾಸಯನಿಕ, ಸಾವಯವ ಔಷಧಿ ಸಿಂಪಡಿಸಿದರೂ ಪ್ರಯೋಜನ ಆಗುತ್ತಿಲ್ಲ. ಆತಂಕದಲ್ಲಿದ್ದೇವೆ. ಇಲಾಖೆ ಅಧಿಕಾರಿಗಳು, ತೋಟಗಾರಿಕ ತಜ್ಞರು ಭಾದಿತ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಹಾನಿಯಾದ ಗಿಡಗಳಿಗೆ ಗರಿಷ್ಠ ಪರಿಹಾರ ನೀಡಬೇಕು.
|ರಾಮಕೃಷ್ಣ ಶರ್ಮ ಬಂಟಕಲ್ಲು, ಮಲ್ಲಿಗೆ ಬೆಳೆಗಾರ

ಮಲ್ಲಿಗೆ ಬೆಳೆಗೆ ತೀವ್ರ ಸಮಸ್ಯೆ ಗಮನಕ್ಕೆ ಬಂದಿಲ್ಲ, ಮಳೆಯಿಂದ ಹಾನಿ ಆಗಿರಬಹುದು. ಶಿಲೀಂಧ್ರ, ಎಲೆಚುಕ್ಕಿ ರೋಗ ನಿವಾರಣೆಗೆ ರೈತರು ರಾಸಾಯನಿಕ ಖರೀದಿಸಿದರೆ ಇಲಾಖೆ ಸಬ್ಸಿಡಿ ನೀಡುತ್ತದೆ. ಭೂಮಿಯ ಫಲವತ್ತತೆಗಾಗಿ ಇಲಾಖೆ ಜೈವಿಕ ಗೊಬ್ಬರ ನೀಡುತ್ತದೆ. ಮಲ್ಲಿಗೆ ಬೆಳೆ ಪರಿಹಾರಕ್ಕೆ ಸರ್ಕಾರದಿಂದ ಪ್ಯಾಕೇಜ್ ಇಲ್ಲ.
|ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ.