ವಿಜಯವಾಣಿ ಸುದ್ದಿಜಾಲ ಕಾರ್ಕಳ
ರಾಷ್ಟ್ರೀಯ ಹೆದ್ದಾರಿ 169ರ ಸಾಣೂರಿನಲ್ಲಿ ಹೈಟೆನ್ಶನ್ ಟವರ್ ಬುಡದಲ್ಲಿ ಮಣ್ಣು ಕುಸಿತಗೊಂಡ ಪ್ರದೇಶಕ್ಕೆ ತಡೆಗೋಡೆ ನಿರ್ಮಾಣವಾಗುತ್ತಿದ್ದು, ಇದನ್ನು ಮತ್ತಷ್ಟು ವಿಸ್ತರಿಸುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಕಳೆದ ಎರಡು ವರ್ಷಗಳಿಂದ ಸಾಣೂರು ರಾಷ್ಟ್ರೀಯ ಹೆದ್ದಾರಿ _169 ನಿರ್ಮಾಣ ಸಂದರ್ಭ ಸಾರ್ವಜನಿಕರಿಂದ ನಿರಂತರ ದೂರುಗಳು ಹೆದ್ದಾರಿ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಕೋಟ ಶ್ರೀನಿವಾಸ ಪೂಜಾರಿ ಅವರು ಸಾಣೂರು ಪುಲ್ಕೇರಿ ಬೈಪಾಸ್ ಸರ್ಕಲ್‌ನಿಂದ ಮುರತಂಗಡಿ ಪದವಿಪೂರ್ವ ಕಾಲೇಜುವರೆಗೆ ಸುಮಾರು ನಾಲ್ಕು ಕಿ.ಮೀ ತನಕ ನಡೆಯುತ್ತಿರುವ ರಸ್ತೆ ಕಾಮಗಾರಿಯ ತೊಡಕುಗಳನ್ನು ಪರಿಶೀಲಿಸಿದರು.
ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ ಜೈನ್, ಸಾಣೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಚೇತ ಕಾಮತ್, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಲವೀನಾ ಮೆಲ್ವಿಟಾ ನೊರೋನ್ಹಾ, ಕಾಲೇಜು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ ಶೆಟ್ಟಿ, ಸಾಣೂರು ಯುವಕ ಮಂಡಲ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಪ್ರಸಾದ್ ಪೂಜಾರಿ ಹಾಗೂ ಜಗದೀಶ್ ಶೆಟ್ಟಿಗಾರ್, ಮಾಧವ ಭಂಡಾರ್ಕರ್, ಗಣೇಶ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ ಶೆಟ್ಟಿ, ಪಿಡಿಒ ಸದಾಶಿವ ಮೂಲ್ಯ, ಪ್ರಮುಖರಾದ ಕರುಣಾಕರ ಕೋಟ್ಯಾನ್, ವಸಂತ, ಸರಸ್ವತಿ, ಸತೀಶ್, ಪ್ರಕಾಶ್ ರಾವ್, ಸುಮತಿ, ಉದಯ ಕೋಟ್ಯಾನ್, ಪ್ರವೀಣ್ ಕೋಟ್ಯಾನ್, ದೇವಾನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ತುರ್ತು ಕಾಮಗಾರಿಗೆ ಸೂಚನೆ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ತುರ್ತು ಕಾಮಗಾರಿಗಳನ್ನು ಶೀಘ್ರವೇ ಆರಂಭಿಸುವಂತೆ ಹೆದ್ದಾರಿ ಯೋಜನಾಧಿಕಾರಿ ಜಾವೇದ್ ಅಜ್ಮಿ, ಇಂಜಿನಿಯರ್ ನಾಸಿರ್, ದಿಲೀಪ್ ಬಿಲ್ಡ್ ಕಾನ್ ಜನರಲ್ ಮ್ಯಾನೇಜರ್ ವರದ ರಾವ್, ಕನ್‌ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ ಅವರಿಗೆ ಸೂಚಿಸಿದರು.
ಎರಡು ವರ್ಷಗಳಿಂದ ಹಲವು ಬಾರಿ ಸ್ಥಳ ಪರಿಶೀಲಿಸಿ ಶಾಸಕರ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದರೂ ತೀರಾ ಅಗತ್ಯವಾದ 1.6 ಕಿಲೋಮೀಟರ್ ಸರ್ವೀಸ್ ರಸ್ತೆಗೆ ಇನ್ನೂ ಪ್ರಸ್ತಾವನೆ ಸಲ್ಲಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ 12 ಅಡ್ಡ ರಸ್ತೆಗಳಲ್ಲಿ ಜಲ್ಲಿಕಲ್ಲು ಹಾಗೂ ಮರಳು ತುಂಬಿದ್ದು, ವಾಹನ ಚಾಲಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
-ಸಾಣೂರು ನರಸಿಂಹ ಕಾಮತ್, ಹೆದ್ದಾರಿ ಹೋರಾಟ ಸಮಿತಿ ಪ್ರಮುಖ