ಬೆಳ್ತಂಗಡಿ: ಪ್ರಯಾಣವೇ ಹರಸಾಹಸ ಎನ್ನುವ ವಾಹನ ಸವಾರರ ಚಿಂತೆಗೆ ಶೀಘ್ರವೇ ಮುಕ್ತಿ ಸಿಗಲಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ವಾರ್ಷಿಕ ಯೋಜನೆಯಡಿ ಕಾಮಗಾರಿ ನಡೆಸಲು ಈಗಾಗಲೇ ಸರ್ವೇ ಕಾರ್ಯ ಆರಂಭವಾಗಿದೆ.
ರಾಷ್ಟ್ರೀಯ ಹೆದ್ದಾರಿ 73(ಮಂಗಳೂರು- ತುಮಕೂರು) ಹಾದು ಹೋಗುತ್ತಿದ್ದರೂ ಕಿರಿದಾದ ರಸ್ತೆ ಕಾರಣದಿಂದ ಗುರುವಾಯನಕೆರೆಯಿಂದ ಉಜಿರೆ ಭಾಗದವರೆಗಿನ ಸಂಚಾರ ದುಸ್ತರವಾಗಿತ್ತು. ರಾಜ್ಯದ ಪ್ರಮುಖ ಯಾತ್ರಾ ಸ್ಥಳ ಧರ್ಮಸ್ಥಳಕ್ಕೆ ಈ ರಸ್ತೆ ಮೂಲಕ ಹಾದು ಹೋಗಬೇಕಿದ್ದ ಕಾರಣದಿಂದಲೂ ವರ್ಷದ ಬಹುತೇಕ ದಿನಗಳಲ್ಲಿ ಇಲ್ಲಿ ವಾಹನ ದಟ್ಟಣೆ ಸರ್ವೇ ಸಾಮಾನ್ಯ ಎಂಬತಾಗಿತ್ತು. ಈಗ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ವಿಸ್ತರಣೆ ಕಾಮಗಾರಿಗೆ ಮುಹೂರ್ತ ಕೂಡಿಬಂದಿದೆ.
ಚತುಷ್ಪಥ ರಸ್ತೆ: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ವಿಭಿನ್ನ ಮಾದರಿಯಲ್ಲಿ ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಗುರುವಾಯನಕೆರೆಯಿಂದ ಉಜಿರೆವರೆಗಿನ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. 9 ಕಿಲೋ ಮೀಟರ್ ಚತುಷ್ಪಥ ರಸ್ತೆ, ಬೀದಿದೀಪಗಳ ಅಳವಡಿಕೆ, ರಸ್ತೆ ಪಕ್ಕದ ಚರಂಡಿ ನಿರ್ಮಾಣ ಎಲ್ಲವೂ ಈ ಕಾಮಗಾರಿಯಲ್ಲಿ ನಡೆಯಲಿದೆ. ಪುಂಜಾಲಕಟ್ಟೆಯಿಂದ ಗುರುವಾಯನಕೆರೆವರೆಗೆ ಮತ್ತು ಉಜಿರೆಯಿಂದ ಚಾರ್ಮಾಡಿವರೆಗೆ ದ್ವಿಪಥ ರಸ್ತೆ ನಿರ್ಮಾಣಗೊಳ್ಳಲಿದೆ.
38.1 ಕಿ.ಮೀ. ರಸ್ತೆ ಕಾಮಗಾರಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ 38.1 ಕಿ.ಮೀ. ರಸ್ತೆ ಕಾಮಗಾರಿ ನಡೆಯಲಿದ್ದು, ಇದಕ್ಕಾಗಿ 383.11 ಕೋಟಿ ರೂ. ಮೀಸಲಿಡಲಾಗಿದೆ. ಸದ್ಯಕ್ಕೆ ಸರ್ವೇ ಕಾರ್ಯ ನಡೆಯುತ್ತಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಮುಂದಿನ ತಿಂಗಳಿನಲ್ಲೇ ಚಾಲನೆ ಸಿಗುವ ಸಾಧ್ಯತೆಯಿದೆ.
1 ಸೇತುವೆ, 14 ಜಂಕ್ಷನ್‌ಗಳ ಕಾಮಗಾರಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ಕಾಮಗಾರಿಯಲ್ಲಿ 1 ದೊಡ್ಡ ಸೇತುವೆ ನಿರ್ಮಾಣವಾಗಲಿದೆ. ಬೆಳ್ತಂಗಡಿಯಲ್ಲಿರುವ ಸೇತುವೆ ಬದಲಾಗಿ ಹೊಸ ಸೇತುವೆ ನಿರ್ಮಾಣವಾಗಲಿದೆ. ರಸ್ತೆಯಲ್ಲಿ ಸಿಗುವ ಹಳ್ಳಗಳಿಗೆ ಒಟ್ಟು 9 ಕಿರುಸೇತುವೆ ನಿರ್ಮಾಣವಾಗಲಿದೆ. 70 ಬಾಕ್ಸ್ ಮೋರಿಗಳು ಹಾಗೂ 14 ಜಂಕ್ಷನ್‌ಗಳು ನಿರ್ಮಾಣಗೊಳ್ಳಲಿವೆ. ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಪ್ರಮುಖ ಪಟ್ಟಣಗಳನ್ನು ಹೊರತುಪಡಿಸಿ ಸಿಗುವ ಮದ್ದಡ್ಕ, ಲಾಯಿಲ ಮುಂತಾದ ಪ್ರದೇಶಗಳಲ್ಲಿ ಜಂಕ್ಷನ್ ಮಾಡಲು ಯೋಜನೆ ರೂಪಿಸಲಾಗಿದೆ.
ಒಂದೇ ಮುಖ್ಯ ರಸ್ತೆ: ರಸ್ತೆ ಕಾಮಗಾರಿಗಳನ್ನು ಮಾಡುವಾಗ ಪ್ರಮುಖ ನಗರಗಳನ್ನು ಹಾದುಹೋಗದಂತೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಆದರೆ ಪ್ರಸ್ತುತ ರೂಪಿಸಿರುವ ಪ್ಲಾೃನ್ ಪ್ರಕಾರ ಇಲ್ಲಿ ಬೈಪಾಸ್ ರಸ್ತೆ ಇರುವುದಿಲ್ಲ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ರಸ್ತೆ ವಿಸ್ತರಣೆಗೊಂಡರೆ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಒಟ್ಟು 38 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇಕ್ಕೆಲಗಳಲ್ಲೂ ಭೂ ಸ್ವಾಧೀನ ನಡೆಸಬೇಕಾದ ಅಗತ್ಯವಿದೆ. ಪುಂಜಾಲಕಟ್ಟೆಯಿಂದ ಈ ಭಾಗದ ರಸ್ತೆ ಪಕ್ಕದಲ್ಲಿರುವ ಮನೆ, ಕಟ್ಟಡ, ಹೋಟೆಲ್, ಬಾರ್, ಕಾಂಪ್ಲೆಕ್ಸ್, ಮಾಲ್, ಬಹುಮಹಡಿ ಕಟ್ಟಡಗಳನ್ನು ತೆರವುಗೊಳಿಸಬೇಕಾದೀತು. ಈ ಭಾಗದಲ್ಲಿ ಯಾವುದೆಲ್ಲ ಕಟ್ಟಡಗಳು ರಸ್ತೆ ವಿಸ್ತರಣೆಗೆ ನೆಲೆ ಕಳೆದುಕೊಳ್ಳಲಿವೆ ಎಂಬುದು ಈಗ ನಡೆಯುತ್ತಿರುವ ಸರ್ವೇ ಕಾರ್ಯ ಪೂರ್ಣವಾದ ಬಳಿಕವಷ್ಟೇ ಗೊತ್ತಾಗಲಿದೆಯಾದರೂ ಆ ಬಗ್ಗೆ ಈಗಾಗಲೇ ಚಿಂತೆ ಪ್ರಾರಂಭವಾಗಲಿದೆ.
ರಾಷ್ಟ್ರೀಯ ಹೆದ್ದಾರಿಯ ವಾರ್ಷಿಕ ಯೋಜನೆಯ ಈ ವರ್ಷದ ಪಟ್ಟಿಯಲ್ಲಿ ಈ ಕಾಮಗಾರಿಯನ್ನು ದಕ್ಷಿಣ ಕನ್ನಡ ಸಂಸದರ ಪ್ರಯತ್ನದಿಂದ ಸೇರಿಸಲಾಗಿದೆ. ಸರ್ವೇ ಕಾರ್ಯಗಳು ಭರದಿಂದ ಸಾಗುತ್ತಿದೆ ಮತ್ತು ಆದಷ್ಟು ಬೇಗ ಈ ರಸ್ತೆ ಕಾಮಗಾರಿ ಆರಂಭವಾಗಲಿದೆ. ಗುರುವಾಯನಕೆರೆಯಿಂದ ಉಜಿರೆವರೆಗೆ ಚತುಷ್ಪಥ ರಸ್ತೆ, ಪುಂಜಾಲಕಟ್ಟೆಯಿಂದ ಗುರುವಾಯನಕೆರೆ ಮತ್ತು ಉಜಿರೆಯಿಂದ ಚಾರ್ಮಾಡಿಯವರೆಗೆ ದ್ವಿಪಥ ರಸ್ತೆ ನಿರ್ಮಾಣಗೊಳ್ಳಲಿದೆ.
-ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ