ಎಚ್ಚೆತ್ತುಕೊಳ್ಳದ ಹೆದ್ದಾರಿ ಇಲಾಖೆ, ಪ್ರಯಾಣಿಕರಿಗೆ ಶಿಕ್ಷೆ

ಬೆಳ್ತಂಗಡಿ: ಘಟ್ಟದ ಮೇಲೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಶಿರಾಡಿ ಘಾಟ್ ಕಾಮಗಾರಿಗಾಗಿ ರಸ್ತೆ ಸಂಚಾರ ನಿಷೇಧಿಸುವಾಗಲೇ ಪ್ರಮುಖ ಪರ್ಯಾಯ ರಸ್ತೆ ಚಾರ್ಮಾಡಿ ಘಾಟ್ ನಿರ್ವಹಣೆ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಗಮನ ಹರಿಸಬೇಕಿತ್ತು. ಆದರೆ ಮಳೆಗಾಲ ಆರಂಭವಾದ ಮೇಲೂ ಇಲಾಖೆ ಎಚ್ಚೆತ್ತುಗೊಂಡಿಲ್ಲ. ಇದರ ಪರಿಣಾಮ, ಪ್ರಯಾಣಿಕರು ದಿನಗಟ್ಟಲೆ ರಸ್ತೆಯಲ್ಲೇ ಉಪವಾಸ ಬೀಳುವಂತಾಗಿದೆ.

ಶಿರಾಡಿ ಘಾಟ್ ಬಂದ್ ಆಗಿದ್ದರಿಂದ ಅಧಿಕ ಸಂಖ್ಯೆಯಲ್ಲಿ ವಾಹನಗಳು ಇಲ್ಲಿ ಪ್ರಯಾಣಿಸುತ್ತಿದ್ದು, ಅಧಿಕ ಮಳೆಯಾಗುತ್ತಿರುವ ಕಾರಣ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿವೆ. ಮರಗಳು ರಸ್ತೆಗೆ ಅಡ್ಡಲಾಗಿ ಬೀಳುತ್ತಿವೆ. ಆಗಾಗ ಭೂಕುಸಿತ ಸಂಭವಿಸುತ್ತಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದ್ದು, ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ಕುರಿತು ‘ವಿಜಯವಾಣಿ’ ಸತತ ವರದಿ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು.

ಬೆಳ್ತಂಗಡಿ ತಹಸೀಲ್ದಾರ್ ಸಹಿತ ಇತರ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಹಾಗೂ ಅರಣ್ಯ ಇಲಾಖೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಒಂದೆರಡು ದಿನಗಳಲ್ಲಿ ದುರಸ್ತಿ ಕಾರ್ಯ ಪ್ರಾರಂಭಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ ಅಷ್ಟರೊಳಗೆ ಬೃಹತ್ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿದೆ.

ಕಳೆದೊಂದು ವಾರದಿಂದ ಘಾಟಿ ಭಾಗದಲ್ಲಿ ಭೂಕುಸಿತ, ಮರಗಳು ಬೀಳುತ್ತಿರುವುದು ನಡೆಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇತ್ತ ಗಮನ ಹರಿಸಿಲ್ಲ. ಜನಪ್ರತಿನಿಧಿಗಳೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿರ್ಲಕ್ಷೃದಿಂದಾಗಿ ಪ್ರತಿದಿನ ರಸ್ತೆ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಏಳೆಂಟು ಗಂಟೆ ಸಂಭವಿಸುತ್ತಿದ್ದ ಟ್ರಾಫಿಕ್ ಜಾಮ್ ಇದೀಗ ಗುಡ್ಡ ಕುಸಿತದೊಂದಿಗೆ ಸಂಚಾರವೇ ನಿರ್ಬಂಧಗೊಂಡಿದೆ. ಪ್ರಯಾಣಿಕರು ಅನಿವಾರ್ಯವಾಗಿ ಮತ್ತಷ್ಟು ಸುತ್ತುಬಳಸಿ ಪರ್ಯಾಯ ಮಾರ್ಗಗಳ ಮೂಲಕ ತೆರಳಬೇಕಿದೆ.

ಗಡಿ ವಿವಾದ, ಇಲಾಖೆಗಳ ಗೊಂದಲ: ಚಾರ್ಮಾಡಿ ಘಾಟಿ ಬೆಳ್ತಂಗಡಿ ಹಾಗೂ ಮೂಡಿಗೆರೆ ತಾಲೂಕು ವ್ಯಾಪ್ತಿಗೆ ಬರುವುದರಿಂದ ಸಮಸ್ಯೆಗಳು ಎದುರಾದಾಗ ಪರಿಹರಿಸುವವರು ಯಾರು ಎಂಬ ಗೊಂದಲ ಅಧಿಕಾರಿಗಳಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯವಾಗಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದ್ದರಿಂದ ನಿರ್ವಹಣೆ ಹೊಣೆ ಅವರದ್ದು. ಆದರೆ ಘಾಟಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುತ್ತಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಪೊಲೀಸ್ ಸಹಿತ ಬೇರೆ ಇಲಾಖೆಗಳು ಮರ ತೆರವಿಗೆ ಮುಂದಾದರೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸುವ ಆತಂಕ ಉನ್ನತ ಅಧಿಕಾರಿಗಳಲ್ಲೇ ಇದೆ. ರಾಷ್ಟ್ರೀಯ ಹೆದ್ದಾರಿ, ಅರಣ್ಯ, ಕಂದಾಯ, ಪೊಲೀಸ್ ಎಲ್ಲ ಇಲಾಖೆಗಳೂ ಜತೆಗೂಡಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ಕುರಿತು ಸಂಸದರು, ಉನ್ನತ ಅಧಿಕಾರಿಗಳು ಗಮನ ಹರಿಸಬೇಕು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಮೆರೆಯಿತು ಮಾನವೀಯತೆ: ಘಾಟಿ ಮಧ್ಯೆ 13ಕ್ಕೂ ಅಧಿಕ ಗಂಟೆಗಳ ಕಾಲ ಸಿಲುಕಿದ್ದ ಪ್ರಯಾಣಿಕರ ನೆರವು ನೀಡುವಲ್ಲಿ ಹಲವರು ಮಾನವೀಯತೆ ಮೆರೆದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಚಿಕ್ಕಮಗಳೂರಿನ ಎಸ್ಪಿ ಅಣ್ಣಾಮಲೈ, ದ.ಕ ಎಸ್‌ಪಿ ಡಾ.ರವಿಕಾಂತ್ ಗೌಡ ಉಸ್ತುವಾರಿಯಲ್ಲಿ ಚಾರ್ಮಾಡಿಯಲ್ಲಿ ನೆರವು ಕಾರ್ಯ ನಡೆಸಲಾಗಿದೆ. ಪೂಂಜಾ ನೇತೃತ್ವದಲ್ಲಿ ಸಂಚಾರ ಸ್ತಬ್ದಗೊಂಡು ಊಟ ತಿಂಡಿ ಇಲ್ಲದವರಿಗೆ ಊಟ ಪೂರೈಕೆ ಮಾಡಲಾಗಿದೆ. ನೂರಾರು ಕಾರ್ಯಕರ್ತರು ಊಟದ ಪೊಟ್ಟಣವನ್ನು ಬಸ್, ಕಾರುಗಳಲ್ಲಿ ಸಿಲುಕಿಕೊಂಡವರಿಗೆ ಪೂರೈಕೆ ಮಾಡಿದರು. ಪೊಲೀಸರ ವತಿಯಿಂದಲೂ ಬಿಸ್ಕತ್ ಹಾಗೂ ಬನ್ ವಿತರಣೆ ಮಾಡಲಾಯಿತು.

ಮೂಡಿಗೆರೆ ಶಾಸಕ ಕುಮಾರಸ್ವಾಮಿ, ಆಪತ್ಬಾಂಧವ ಚಾರ್ಮಾಡಿ ಹಸನಬ್ಬ ಇನ್ನಿತರ ಸಂಸ್ಥೆಗಳು, ಸಾರ್ವಜನಿಕರು ಪ್ರಯಾಣಿಕರಿಗೆ ಬಾಳೆಹಣ್ಣು, ಹಲಸಿನ ಹಣ್ಣು, ಬಿಸ್ಕೆಟ್, ಊಟ, ನೀರಿನ ವ್ಯವಸ್ಥೆ ಕಲ್ಪಿಸಿದರು. ಪುತ್ತೂರು ಸಹಾಯಕ ಕಮಿಷನರ್ ಎಚ್.ಕೃಷ್ಣಮೂರ್ತಿ, ಬೆಳ್ತಂಗಡಿ ತಹಸೀಲ್ದಾರ್ ತಮ್ಮಣ್ಣ ತಿಮ್ಮಪ್ಪ ಹಾದಿಮನಿ, ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ, ಬೆಳ್ತಂಗಡಿ ಎಸ್‌ಐ ಗಿರೀಶ್ ಕುಮಾರ್, ಬೆಳ್ತಂಗಡಿ ಕಂದಾಯ ಇಲಾಖಾಧಿಕಾರಿ ರವಿ, ಪಿಡಬ್ಲುೃಡಿ ಇಂಜಿನಿಯರ್ ತೌಸಿಫ್, ಟ್ರಾಫಿಕ್ ಪೊಲೀಸರು, ಗುರುವಾಯನಕೆರೆ ಅಗ್ನಿಶಾಮಕದಳ, ಅರಣ್ಯ ಇಲಾಖಾ ಸಿಬ್ಬಂದಿ ಸತತ ಶ್ರಮವಹಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ದ.ಕ. ಸಂಸದ ನಳಿನ್‌ಕುಮಾರ್ ಕಟೀಲು ಕೂಡ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು.

ಇಂದು ಅಧಿಕಾರಿಗಳ ಸಭೆ: ಚಾರ್ಮಾಡಿ ಘಾಟ್ ಸಮಸ್ಯೆ ಕುರಿತಂತೆ ಬುಧವಾರ ಬೆಳಗ್ಗೆ 10.30ಕ್ಕೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಶಾಸಕ ಹರೀಶ್ ಪೂಂಜ ಅಧಿಕಾರಿಗಳ ಸಭೆ ಕರೆದಿದ್ದಾರೆ. ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಸಮಸ್ಯೆ ಇದೆ, ಈಗ ಅಧಿಕ ಮಳೆಯಾಗಿರುವುದರಿಂದ ಇನ್ನಷ್ಟು ಸಮಸ್ಯೆಯಾಗಿದೆ. ಸ್ವಯಂಸೇವಕರು, ಅಧಿಕಾರಿಗಳು, ಪೊಲೀಸ್ ಇಲಾಖೆ ಸಮಸ್ಯೆ ಪರಿಹರಿಸಲು ಶ್ರಮಿಸಿದ್ದು, ಪ್ರಯಾಣಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ಯತ್ನಿಸಲಾಗಿದೆ. ಶಿರಾಡಿ ಘಾಟ್ ರಸ್ತೆಯಂತೆಯೇ ಅಭಿವೃದ್ಧಿಪಡಿಸಲು ಸಂಸದರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ‘ವಿಜಯವಾಣಿ’ಗೆ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ. ಎರಡು ದಿನಗಳ ನಂತರ ಸುಗಮ ಸಂಚಾರಕ್ಕೆ ವ್ಯವಸ್ಥೆ ಆಗಲಿದೆ ಎಂದು ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ತಿಳಿಸಿದ್ದಾರೆ.

ಶಿರಾಡಿಯಲ್ಲಿ ವಾಹನ ಸಂಚಾರ ಇನ್ನೂ ಒಂದು ವಾರ ಅಸಾಧ್ಯ: ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ತಲುಪಿದೆ. ಆದರೆ ಒಂದು ಸೇತುವೆಯಷ್ಟೇ ಮುಗಿಯಲು ಬಾಕಿ ಇದೆ. ಹಾಗಾಗಿ ಇನ್ನೂ ಒಂದು ವಾರವಾದರೂ ಬೇಕೇ ಬೇಕು ಎಂದು ಗುತ್ತಿಗೆದಾರರಾದ ಶರ್ಪುದ್ದೀನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. 13 ಕಿ.ಮೀ ಹೆದ್ದಾರಿ ಕಾಂಕ್ರೀಟೀಕರಣ ಬಹುತೇಕ ಮುಗಿಯುತ್ತಾ ಬಂದಿದೆ, ಆದರೆ ಕೊನೆಯಲ್ಲಿ ಕಾಣಿಸಿಕೊಂಡ ಭಾರಿ ಮಳೆಯಿಂದಾಗಿ ಕಾಮಗಾರಿಗೆ ತೊಡಕಾಗಿರುವುದೇ ಕೆಲಸಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಸೇತುವೆ ಭಾಗದ ಕೆಲಸ ಮುಗಿಯದೆ ವಾಹನ ಸಂಚರಿಸುವಂತೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಪೊಲೀಸ್ ಇಲಾಖೆಯೊಂದಿಗೆ ಹೆಚ್ಚು ಸಹಕರಿಸಿ ರಸ್ತೆ ಸಂಚಾರ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಬೇಕಿದೆ. ದ.ಕ. ಹಾಗೂ ಚಿಕ್ಕಮಗಳೂರು ಪೊಲೀಸ್ ಇಲಾಖೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ಇಲ್ಲಿನ ದುಸ್ಥಿತಿ ಬಗ್ಗೆ ವರದಿ ನೀಡಲಾಗುವುದು.
* ಅಣ್ಣಾಮಲೈ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ

ಚಾರ್ಮಾಡಿ ಘಾಟಿ ಸಂಚಾರ ಬಂದ್ ಆದಾಗ ಸುಮಾರು 2 ಸಾವಿರ ಪ್ರಯಾಣಿಕರು, 210ಕ್ಕೂ ಅಧಿಕ ಘನ ವಾಹನಗಳು, 50ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸಿಲುಕಿಕೊಂಡಿದ್ದವು. ಪ್ರಯಾಣಿಕರ ಹಸಿವು ನೀಗಿಸಲು ಬಾಳೆಹಣ್ಣು, ಬಿಸ್ಕತ್ತು, ನೀರು ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ಘಾಟಿ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು.
* ರವಿಕಾಂತೇಗೌಡ ಬಿ.ಆರ್, ದ.ಕ. ಪೊಲೀಸ್ ವರಿಷ್ಠಾಧಿಕಾರಿ

Leave a Reply

Your email address will not be published. Required fields are marked *