ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣ

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣಕ್ಕೆ ಪ್ರಥಮ ಹಂತದಲ್ಲಿ ಅನುಮತಿ ದೊರೆತಿದ್ದು, ಆರ್ಥಿಕ ಅಡಚಣೆಯಿಂದ ಕಾಮಗಾರಿ ಆರಂಭಿಸಿಲ್ಲ. ಬೀಜಾಡಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು ಮುಂದಿನ ಮಳೆಗಾಲದೊಳಗೆ ಈ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರ ನವಯುಗ ಕಂಪನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಹೆಜಮಾಡಿಯಿಂದ ಬೈಂದೂರುವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಬಾಕಿ ಇರುವ ಕಾಮಗಾರಿಗಳನ್ನು ವೀಕ್ಷಿಸಲು ಕುಂದಾಪುರ ಪ್ರಭಾರ ಸಹಾಯಕ ಕಮಿಷನರ್ ಅರುಣ್ ಪ್ರಭ ಜತೆ ಆಗಮಿಸಿದ ಅಧಿಕಾರಿಗಳು ಹಾಗೂ ನವಯುಗ ಕಂಪನಿ ಪ್ರತಿನಿಧಿಗಳು ಈ ವಿಷಯ ತಿಳಿಸಿದ್ದಾರೆ. ಸಾಲಿಗ್ರಾಮದಲ್ಲಿ ಸ್ಥಳ ವೀಕ್ಷಿಸಿದ ಎಸಿ ಅರುಣ್ ಪ್ರಭಾ ಅಲ್ಲಿ ಅಂಡರ್ ಪಾಸ್ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳ ಎದುರು ವಾರ್ಷಿಕ ರಥೋತ್ಸವದಂದು ದೇವರ ಬ್ರಹ್ಮರಥ ಹೆದ್ದಾರಿ ಹಾದು ಹೋಗಬೇಕು. ಅಂಡರ್ ಪಾಸ್ ಮಾಡಿದರೆ ಇದು ಸಾಧ್ಯವಾಗದು. ಸಾಸ್ತಾನ ಮತ್ತು ಬೀಜಾಡಿಗಳಲ್ಲಿ ದ್ವಿತೀಯ ಹಂತದಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಈ ಎಲ್ಲ ಅಂಶಗಳನ್ನು ಡಿಸಿಯವರಿಗೆ ಪ್ರತ್ಯಕ್ಷ ತೋರಿಸಿ ಮನದಟ್ಟು ಮಾಡಿಸಬೇಕು ಎಂದು ಮಧ್ಯಾಹ್ನದಿಂದಲೇ ಸಾರ್ವಜನಿಕರು ಬೀಜಾಡಿಯಲ್ಲಿ ಕಾದಿದ್ದರು. ಆದರೆ ಎಸಿ ಮತ್ತು ತಂಡ ಸಾಲಿಗ್ರಾಮದವರೆಗೆ ಮಾತ್ರ ಬಂದು ಮರಳಿದ್ದಾರೆ. ಇದರಿಂದ ಜನರ ಸಿಟ್ಟು ಇನ್ನಷ್ಟು ಹೆಚ್ಚಿದ್ದು ಅಧಿಕಾರಿಗಳ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾರದ ಡಿಸಿ: ಹೆಜಮಾಡಿಯಲ್ಲಿ ಮಧ್ಯಾಹ್ನ ಸಭೆ ನಡೆಸಿದ ನಂತರ ಉಡುಪಿ ಜಿಲ್ಲಾಧಿಕಾರಿಗಳು ವೀಕ್ಷಣೆಗೆ ಬರುತ್ತಾರೆ ಎಂದು ಜನರು ಮಾರ್ಗದುದ್ದಕ್ಕೂ ಕಾದಿದ್ದರು. ಆದರೆ ಅಧಿಕಾರಿಗಳೊಂದಿಗೆ ಎಸಿ ಮಾತ್ರ ಆಗಮಿಸಿದ್ದು ಜನರಲ್ಲಿ ಆಕ್ರೋಶ ಮೂಡಿಸಿತ್ತು.