ಕಕ್ಕೇರಿ: ಖಾನಾಪುರ, ಬೆಳಗಾವಿ, ಅಳ್ನಾವರ ತಾಲೂಕನ್ನು ಬರಪೀಡಿತ ಘೋಷಿಸಬೇಕು, ರೈತರು ಪಡೆದ ಬೆಳೆ ಸಾಲ ಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತತ್ವದಲ್ಲಿ ರೈತರು ಸಮೀಪದ ಅಳ್ನಾವರ ಕ್ರಾಸ್ ಬಳಿ ಧಾರವಾಡ-ಗೋವಾ ಹಾಗೂ ತಾಳಗುಪ್ಪ- ಬೆಳಗಾವಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಸೋಮವಾರ ಪ್ರತಿಭಟಿಸಿದರು.
ಮುಖಂಡರಾದ ಕಿಶೋರ ಮಿಠಾರಿ ಮಾತನಾಡಿ, ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಧಾರವಾಡ ತಾಲೂಕಾಧ್ಯಕ್ಷ ಅಲ್ಲಾಬಕ್ಷ ಕುಂದುಬೈನವರ ಮಾತನಾಡಿ, ಅಳ್ನಾವರ ಹಾಗೂ ಖಾನಾಪುರ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಚೆಕ್ ಡ್ಯಾಮ್ ನಿರ್ಮಿಸಬೇಕು. ಬಾಳಗುಂದ ಕೆರೆ ನಿರ್ಮಿಸುವ ಯೋಜನೆ, ಕಬ್ಬು ಬೆಳೆಗೆ ವಿಮೆ ಜಾರಿ, ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಧಾರವಾಡ ಜಿಲ್ಲಾ ರೈತ ಸಂಘಟನೆ ಅಧ್ಯಕ್ಷ ರವಿ ಕಾಂಬಳೆ ಮಾತನಾಡಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಬರುವವರಿಗೂ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಅಳ್ನಾವರ ತಾಲೂಕು ದಂಡಾಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.

ಮುಖಂಡರಾದ ಯಲ್ಲಪ್ಪ ಚನ್ನಾಪುರ, ಶಿವಾಜಿ ಅಂಬಡಗಟ್ಟಿ, ಸೇಬಸ್ಟಿನ್ ಸೋಜ, ನಿಂಗೋಜಿ ಸಂಬರಗಿ, ನಾರಾಯಣ ಪಾಟೀಲ, ನೀಲಕಂಠ ಗುಂಜಿಕರ, ರಮೇಶ ವೀರಾಪುರ, ಶಿವಾಜಿ ಅಂಬಡಗಟ್ಟಿ, ದತ್ತ ಬೀಡಕರ, ಪುಂಡಲೀಕ ಪಾರದಿ, ಬಸವಂತಪ್ಪ ಕಂಬಾರಗಣವಿ, ಮಹಾಂತೇಶ ಸಂಗೊಳ್ಳಿ ಇತರರಿದ್ದರು.