ಪರಿಹಾರ ವಿತರಣೆ ಲೋಪ ಸರಿಪಡಿಸಲು ಮಾಜಿ ಸಿಎಂಗೆ ಮನವಿ

ಬೀರೂರು: ತಾಲೂಕಿನ ಬರ ಹಾಗೂ ನೀರಾವರಿ ಸಮಸ್ಯೆ, ಹೆದ್ದಾರಿ ನಿರ್ವಣದಿಂದಾಗಿ ಭೂಮಿ ಕಳೆದುಕೊಳ್ಳುತ್ತಿರುವವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ಕ್ರಮ ವಹಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಪಂ ಮತ್ತು ತಾಪಂ ಕೆಲ ಸದಸ್ಯರು ಮನವಿ ಮಾಡಿದರು.

ಹಾವೇರಿಗೆ ತೆರಳಲಿದ್ದ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಶುಕ್ರವಾರ ಬೆಳಗ್ಗೆ ಹೆಲಿಕಾಪ್ಟರ್​ನಲ್ಲಿ ಪಟ್ಟಣಕ್ಕೆ ಆಗಮಿಸಿದ್ದಾಗ ಸ್ಥಳೀಯ ಜನಪ್ರತಿನಿಧಿಗಳು ಮಾಜಿ ಸಿಎಂ ಅವರಲ್ಲಿ ಸಮಸ್ಯೆಗಳನ್ನು ಹೇಳಿಕೊಂಡರು.

ಕಡೂರು-ಬೀರೂರು ಮಧ್ಯೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದೆ. 1 ಎಕರೆ ಭೂಮಿಗೆ 50-70 ಲಕ್ಷ ರೂ. ಮೌಲ್ಯವಿದೆ. ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡದೆ ರಹಸ್ಯವಾಗಿ ಜಮೀನಿನ ಫೋಟೋ ತೆಗೆದುಕೊಂಡು ಹೋಗುತ್ತಿದ್ದಾರೆ ಮತ್ತು ಅವುಗಳಿಗೆ ಕೇವಲ 5-10 ಲಕ್ಷ ರೂ. ಪರಿಹಾರ ಎನ್ನುತ್ತಿದ್ದಾರೆ. ಉಸ್ತುವಾರಿ ಸಚಿವರು ಅಧಿಕಾರಿಗಳೊಂದಿಗೆ ರ್ಚಚಿಸಿ ಜಮೀನಿಗೆ ಉತ್ತಮ ಬೆಲೆ ನೀಡುವಂತೆ ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಕೋರಿದರು. ಇದಕ್ಕೆ ಉತ್ತರಿಸಿದ ಸಚಿವ ಜಾರ್ಜ್, ಸರ್ಕಾರ ಭೂಮಿಗೆ ಏನು ನಿಗದಿ ಮಾಡಿದೆ ಅಷ್ಟೇ ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲಾಗುವುದು. ಇದರಲ್ಲಿ ಮೋಸ ಆಗುವ ಪ್ರಶ್ನೆಯೇ ಇಲ್ಲ ಎಂದರು.

ವಿಷ್ಣುಸಮುದ್ರ ಕೆರೆಗೆ ನೀರು ಹರಿಸುವಿಕೆ ಹಾಗೂ ತಾಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಸೂಕ್ತ ಕ್ರಮ ವಹಿಸುವಂತೆ ಸರ್ಕಾರದ ಮೇಲೆ ಒತ್ತಡಹಾಕುವಂತೆ ಮನವಿ ಮಾಡಿದರು.