27ಕ್ಕೆ ಸಂತ್ರಸ್ತ ರೈತರಿಂದ ಪ್ರತಿಭಟನೆ

ತರೀಕೆರೆ: ಭೂಸ್ವಾಧೀನ ಪ್ರಕ್ರಿಯೆಯಡಿ ಪರಿಹಾರ ನಿಗದಿಗೊಳಿಸುವ ವಿಚಾರದಲ್ಲಿ ಅನ್ಯಾಯವೆಸಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಭೂಮಿ ನೀಡಿರುವ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಟಿ.ಎನ್.ಗೋಪಿನಾಥ್ ಆಗ್ರಹಿಸಿದರು.

ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್​ಗಾಗಿ ಭೂಮಿ ನೀಡಿರುವ ಸಂತ್ರಸ್ತ ರೈತರ ಹೋರಾಟ ಸಮಿತಿ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಡಿಮೆ ಪರಿಹಾರ ನೀಡಲು ಮುಂದಾಗುತ್ತಿದೆ. ಇದನ್ನು ಖಂಡಿಸಿ ಫೆ. 27ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಗಾಗಿ ಪಟ್ಟಣದ ಹೊರ ವಲಯದಲ್ಲಿ ನಿರ್ವಿುಸುತ್ತಿರುವ ಬೈಪಾಸ್​ಗೆ ರೈತರು ಬೆಳೆದು ನಿಂತಿರುವ ಸಮೃದ್ಧ ತೋಟಗಳನ್ನೇ ಬಿಟ್ಟುಕೊಟ್ಟಿದ್ದಾರೆ. ಆದರೆ ಸೂಕ್ತ ಪರಿಹಾರ ನೀಡಲು ಪ್ರಾಧಿಕಾರ ಹಿಂದೇಟು ಹಾಕುತ್ತಿದೆ ಎಂದರು.

ಭೂಸ್ವಾಧೀನ ಪ್ರಕ್ರಿಯೆಗೆ ಶೇ. 70ರಷ್ಟು ರೈತರು ಭೂಮಿ ನೀಡಲು ಒಪ್ಪಿಗೆ ಸೂಚಿಸಿದರೆ ಮಾತ್ರ ಜಮೀನು ಸ್ವಾಧೀನ ಪಡಿಸಿಕೊಳ್ಳಬಹುದು ಎಂದು ನ್ಯಾಯಾಲಯದ ಆದೇಶವಿದೆ. ಆದರೆ ಹೆದ್ದಾರಿ ಪ್ರಾಧಿಕಾರ ಇದನ್ನು ಉಲ್ಲಂಘಿಸಿರುವುದಲ್ಲದೆ ಭಿಕ್ಷೆ ನೀಡಿದಂತೆ ಕಡಿಮೆ ಪರಿಹಾರ ನೀಡಲು ಮುಂದಾಗಿದೆ. ಪರಿಹಾರವನ್ನು ಅಡಿ ಲೆಕ್ಕದಲ್ಲಿ ನೀಡದೆ ಗುಂಟೆ ಲೆಕ್ಕದಲ್ಲಿ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಮಾತನಾಡಿ, ಈಗಾಗಲೆ ತಾಲೂಕಿನ ರೈತರು ಭದ್ರಾ ಮೇಲ್ದಂಡೆ ಯೋಜನೆಯಿಂದ ಸಾಕಷ್ಟು ಭೂಮಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ನಿರ್ವಣಕ್ಕೂ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2016ರಲ್ಲೇ ನೋಟಿಫಿಕೇಷನ್ ಹೊರಡಿಸಿ ಭೂಸ್ವಾಧೀನ ಪ್ರಕ್ರಿಯೆಯಡಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಪರಭಾರೆ ಮಾಡುವುದಾಗಲಿ, ಆ ಭೂಮಿಯ ಮೇಲೆ ಯಾವುದೇ ರೀತಿಯ ಬ್ಯಾಂಕ್ ಸಾಲ ಪಡೆಯುವ ಹಾಗಿಲ್ಲ ಎಂದು ರೈತರ ಮೇಲೆ ನಿರ್ಬಂಧ ಹೇರಿದೆ ಎಂದರು.

ಪ್ರಮುಖರಾದ ಬಿ.ಎಸ್.ಆರ್.ಮಂಜುನಾಥ್, ಆನಂದ್, ಟಿ.ಕೆ.ಶೇಖರ್, ಡಿ.ಎಲ್.ಶಿವರಾಜ್​ಕುಮಾರ್, ಗಿರಿರಾಜ್, ಟಿ.ಎಸ್.ಧರ್ಮರಾಜ್, ಟಿ.ಎಸ್.ರಮೇಶ್ ಮತ್ತಿತರರಿದ್ದರು.

ಪರಿಹಾರ ನೀಡುವ ವಿಚಾರದಲ್ಲಿ ಹೆದ್ದಾರಿ ಪ್ರಾಧಿಕಾರ ತನ್ನ ಧೋರಣೆ ಬದಲಿಸದಿರುವುದು ಸಂತ್ರಸ್ತ ರೈತರನ್ನು ಕೆರಳಿಸುವಂತಿದೆ. ಪರಿಹಾರ ನೀಡುವುದಾದರೆ 2019ರ ದರದಂತೆ ನಿಗದಿ ಮಾಡುವುದಲ್ಲದೆ, ಗುಜರಾತ್ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ನೀಡಲಿ. ಇಲ್ಲದೆ ಇದ್ದರೆ ಯಾವುದೆ ಕಾರಣಕ್ಕೂ ಭೂಮಿ ಬಿಡುವ ಪ್ರಶ್ನೆಯೇ ಇಲ್ಲ.

| ಟಿ.ಎಚ್.ಶಿವಶಂಕರಪ್ಪ, ಮಾಜಿ ಶಾಸಕ