ತಂತ್ರಾಡಿಯಲ್ಲೊಂದು ಹೈಟೆಕ್ ಶಾಲೆ

ಅನಂತ ನಾಯಕ್ ಮುದ್ದೂರು
ಮಂದಾರ್ತಿಉಡುಪಿ ಜಿಲ್ಲೆಯ ಕಾಡೂರು ಗ್ರಾಪಂ ವ್ಯಾಪ್ತಿಯ ತಂತ್ರಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಹಳೇ ವಿದ್ಯಾರ್ಥಿಗಳು, ದಾನಿಗಳ ಸಹಕಾರದಲ್ಲಿ ಹೈಟೆಕ್ ಶಾಲೆಯಾಗಿ ಬೆಳೆಯುತ್ತಿದೆ.1957ರ ಏಪ್ರಿಲ್ 5ರಂದು ಇಲ್ಲಿನ ಶ್ರೀನಿವಾಸ ಭಟ್ಟರ ಮನೆಯಲ್ಲಿ ಶಾಲೆ ಆರಂಭವಾಯಿತು. ಶ್ರೀನಿವಾಸ ಆಚಾರ್ಯ ಅಧ್ಯಾಪಕರಾಗಿದ್ದರು. ನಂತರ ರಾಮಚಂದ್ರ ಶ್ಯಾನುಭಾಗ್ ಅವರ ಹುಲ್ಲಿನ ಚಾವಡಿಯಲ್ಲಿ 1966ರ ತನಕ ಶಾಲೆ ನಡೆಯಿತು

.ಸ್ಥಳೀಯ ಮುಂದಾಳುಗಳ ಸಹಕಾರದಿಂದ ಸರ್ಕಾರದ ಸ್ಥಳದಲ್ಲಿ ಸಾಬಿಮನೆ ಶ್ರೀನಿವಾಸ ಶ್ಯಾನುಭಾಗ್ ಮುಂದಾಳತ್ವದಲ್ಲಿ ಪ್ರಧಾನ ಕಟ್ಟಡವನ್ನು ತಾಲೂಕು ಬೋರ್ಡ್ ವತಿಯಿಂದ ಊರವರ ಸಹಾಯದಿಂದ ಕಟ್ಟಲಾಯಿತು. ಶ್ರೀರಾಮ ಗಾಣಿಗ ಅವರು 26 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರದ ದಿನಗಳಲ್ಲಿ 2 ಶಿಕ್ಷಕರು, 2 ಶಿಕ್ಷಕಿಯರು ಸೇವೆ ಸಲ್ಲಿಸಿದರು. 2015ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ್ದರಿಂದ ಮುಚ್ಚುವ ಹಂತಕ್ಕೆ ಬಂದಿತು. ಇದನ್ನು ಗಮನಿಸಿದ ಹಳೇ ವಿದ್ಯಾರ್ಥಿಗಳು ಮತ್ತು ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲಾ ಶೈಕ್ಷಣಿಕ ಅಭಿವೃದ್ಧಿ ಸಮಿತಿ ಸ್ಥಾಪನೆಗೊಂಡಿತು.ಶಾಲಾ ಆವರಣದಲ್ಲೇ ಅಂಗನವಾಡಿ: ಈ ಅಂಗನವಾಡಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಮತ್ತು ಕನ್ನಡ ಮಾಧ್ಯಮದಲ್ಲಿ ನುರಿತ ಶಿಕ್ಷಕಿಯರನ್ನು ನೇಮಿಸಿ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಸಂಪೂರ್ಣ ವೆಚ್ಚ ಭರಿಸಲಾಗುತ್ತಿದೆ. ಇಲ್ಲಿನ ಪುಟಾಣಿಗಳಿಗೆ ಬೆಳಗ್ಗೆ ಸರ್ಕಾರದ ಅಂಗನವಾಡಿಯಲ್ಲಿ ಯಾವ ರೀತಿಯ ನಿಯಮ ಇರುತ್ತದೋ ಅದೇ ರೀತಿ ಪಾಲಿಸಲಾಗುತ್ತಿದೆ.

ಮಧ್ಯಾಹ್ನದ ನಂತರ ಮಕ್ಕಳಿಗೆ ಇಂಗ್ಲಿಷ್ ಹೈಟೆಕ್ ಮಾದರಿಯ ಪೂರ್ವ ಪ್ರಾಥಮಿಕ ತರಗತಿ ಶಿಕ್ಷಣವನ್ನು ನೀಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಯೂನಿಫಾರ್ಮ್, ಶೂ, ಬ್ಯಾಡ್ಜ್, ಐ.ಡಿ.ಕಾರ್ಡು, ಪುಸ್ತಕ, ಉಚಿತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.ಶಾಲಾ ವಾಹನ ಕೊಡುಗೆ: ಸುಮಾರು 4.5 ಲಕ್ಷ ರೂ. ವೆಚ್ಚದ ಶಾಲಾ ವಾಹನವನ್ನು ಹಳೇ ವಿದ್ಯಾರ್ಥಿಗಳು ಮತ್ತು ದಾನಿಗಳು ಖರೀದಿಸಿ ಶಾಲೆಗೆ ನೀಡಿದ್ದಾರೆ. ಈ ಅಂಗನವಾಡಿಯಲ್ಲಿ ಕಲಿಯುವ ಮಕ್ಕಳು ಇದೇ ಶಾಲೆಗೆ ಸೇರುವುದರಿಂದ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ನಾಲ್ಕು ವರ್ಷಗಳಿಂದ ಈ ರೀತಿಯ ಕ್ರಮದಿಂದ ಶಾಲಾ ಮಕ್ಕಳ ಸಂಖ್ಯೆಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಶಾಲಾ ವಾಹನವು ಕಾಡೂರು ಗ್ರಾಪಂ ವ್ಯಾಪ್ತಿಯ ತಂತ್ರಾಡಿ, ಗುಡ್ಡೆಯಂಗಡಿ, ಕಾಡೂರು, ಮಂದಾರ್ತಿ, ನಡೂರು ಮುಂತಾದ ಭಾಗಗಳಲ್ಲಿ ಸಂಚರಿಸಿ ಶಾಲಾ ವಿದ್ಯಾರ್ಥಿಗಳನ್ನು ಕರೆ ತರಲಾಗುತ್ತಿದೆ.

ಶಾಲಾ ವಾಹನದ ಚಾಲನೆಗೆ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದೇವರಾಜ ನಿಯೋಜನೆಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ವಾಹನಕ್ಕೆ ಬೇಕಾದ ಇಂಧನ ಹಾಗೂ ದುರಸ್ತಿ ಮುಂತಾದ ವೆಚ್ಚಗಳನ್ನು ಹಳೇ ವಿದ್ಯಾರ್ಥಿಗಳು ಮತ್ತು ದಾನಿಗಳು ಭರಿಸುತ್ತಿದ್ದಾರೆ.

ಹೊಸ ಕಟ್ಟಡಕ್ಕೆ ರೂಪುರೇಷೆ: ಶಾಲೆಯು ಸುಮಾರು 63 ವರ್ಷಗಳನ್ನು ಪೂರೈಸಿದ್ದು, ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಸಂಸದರ ನಿಧಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ಕಟ್ಟಡ ನಿರ್ಮಿಸಲಾಗುತ್ತಿದೆ.ಶಾಲೆಯ ಬೇಡಿಕೆಗಳು: ಶಾಲೆಯ ಜಾಗವು ಸುಮಾರು 1 ಎಕರೆ ವಿಸ್ತೀರ್ಣ ಹೊಂದಿದ್ದು, ಕಂಪ್ಯೂಟರ್ ಕೊಠಡಿ, ರಂಗಮಂದಿರ, ಶೌಚಗೃಹ, ಅಕ್ಷರ ದಾಸೋಹದ ಕಟ್ಟಡ, ಶಾಲಾ ಆವರಣಾ ಗೋಡೆ, ಶಿಕ್ಷಕಿಯರು ಮುಂತಾದ ಅಗತ್ಯ ವಿಷಯಗಳ ಬೇಡಿಕೆಯಿದ್ದು, ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು, ದಾನಿಗಳು ಸಹಕರಿಸಿದರೆ ಈ ಶಾಲೆಯು ಆಂಗ್ಲ ಮಾಧ್ಯಮ ಶಾಲೆಕ್ಕಿಂತಲೂ ಎತ್ತರದಲ್ಲಿ ಬೆಳೆಯುತ್ತದೆ.ವಿವಿಧ ಕಚೇರಿಗಳ ಸ್ಥಾಪನೆ- ಹಳೇ ವಿದ್ಯಾರ್ಥಿ ಸಂಘ 2002, ಶಾಲಾ ಶೈಕ್ಷಣಿಕ ಅಭಿವೃದ್ಧಿ ಸಮಿತಿ 2015, ಕಲ್ಗುಂಡಿ ಶ್ರೀ ಭಜನಾ ಮಂಡಳಿ 2005, ಅಂಗನವಾಡಿ ಕೇಂದ್ರ 1995ರಲ್ಲಿ ಸ್ಥಾಪನೆಗೊಂಡಿತು. ಈ ಕಚೇರಿಗಳನ್ನು ಒಗ್ಗೂಡಿಸಿ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಬಗ್ಗೆ ಚರ್ಚಿಸಿ ಶಾಲಾ ಶೈಕ್ಷಣಿಕ ಅಭಿವೃದ್ಧಿ ಸಮಿತಿ 2015ರಲ್ಲಿ ರಚನೆಗೊಂಡು ಅಧ್ಯಕ್ಷರಾಗಿ ನಟರಾಜ ರಾವ್ ಆಯ್ಕೆಯಾದರು.

ಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಉಚಿತವಾಗಿ ನೀಡಿದ್ದಾರೆ. ಶಾಲಾ ವಾಹನ ನಿಲ್ಲಿಸಲು ಕಲ್ಗುಂಡಿ ಭಜನಾ ಮಂಡಳಿಯವರು ಶೆಡ್ ನಿರ್ಮಿಸಿ ಸಹಕರಿಸಿದ್ದಾರೆ. ಬಂಟರ ಸಂಘ ಬೆಂಗಳೂರು ಅಧ್ಯಕ್ಷ ಉಮೇಶ್ ಶೆಟ್ಟಿ ತಂತ್ರಾಡಿ ನೋಟ್ ಪುಸ್ತಕವನ್ನು ಈ ಬಾರಿ ನೀಡಿದ್ದಾರೆ.

2015ರಲ್ಲಿ ಶಾಲಾ ಶೈಕ್ಷಣಿಕ ಸಮಿತಿ ರಚನೆಗೊಂಡು ಅಂಗನವಾಡಿ ಮಕ್ಕಳಿಗೆ ಹೈಟೆಕ್ ಶಿಕ್ಷಣಕ್ಕೆ (ಇಂಗ್ಲಿಷ್ ಮತ್ತು ಕನ್ನಡ)ಒತ್ತು ನೀಡಿದ್ದರಿಂದ ಗ್ರಾಮೀಣ ಭಾಗವಾದ ತಂತ್ರಾಡಿ ಶಾಲೆಗೆ ಮಕ್ಕಳ ಸಂಖ್ಯೆ ಅಧಿಕವಾಯಿತು. ಇದು ಪ್ರಾಯೋಗಿಕವಾಗಿ ಮಾಡಿದ್ದು ಕರ್ನಾಟಕ ರಾಜ್ಯದಲ್ಲಿ ಇತಿಹಾಸ ನಿರ್ಮಿಸಿದೆ. ಸತ್ಯನಾರಾಯಣ ಶೆಟ್ಟಿ ನಡೂರು, ಕಾಡೂರು ಗ್ರಾಪಂ ಸದಸ್ಯ

Leave a Reply

Your email address will not be published. Required fields are marked *