ಕೊನೆಗೂ ಜಯದ ಖಾತೆ ತೆರೆದ ಆರ್​ಸಿಬಿ

ಮೊಹಾಲಿ: ಸತತ 6 ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಡೆಗೂ ಐಪಿಎಲ್-12ರಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ನಾಯಕ ವಿರಾಟ್ ಕೊಹ್ಲಿ (67 ರನ್, 53 ಎಸೆತ, 8 ಬೌಂಡರಿ) ಹಾಗೂ ಎಬಿ ಡಿವಿಲಿಯರ್ಸ್ (59*ರನ್, 38 ಎಸೆತ, 5 ಬೌಂಡರಿ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಫಲವಾಗಿ ಆರ್​ಸಿಬಿ ತಂಡ 8 ವಿಕೆಟ್​ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿತು. ಈ ಮೂಲಕ ಆರ್​ಸಿಬಿ ಪ್ಲೇಆಫ್ ಆಸೆ ಜೀವಂತವಿರಿಸಿ ಕೊಂಡಿತು.

ಪಿಸಿಎ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಅನುಭವಿ ಕ್ರಿಸ್ ಗೇಲ್ (99*ರನ್, 64 ಎಸೆತ, 10 ಬೌಂಡರಿ, 5 ಸಿಕ್ಸರ್) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್​ಗೆ 173 ರನ್​ಗಳಿಸಿತು. ಪ್ರತಿಯಾಗಿ ಆರ್​ಸಿಬಿ ತಂಡ 19.2 ಓವರ್​ಗಳಲ್ಲಿ 2 ವಿಕೆಟ್​ಗೆ 174 ರನ್​ಗಳಿಸಿ ಜಯದ ನಗೆ ಬೀರಿತು.

ಚೇಸಿಂಗ್​ಗೆ ಬಲ ತುಂಬಿದ ಕೊಹ್ಲಿ-ಎಬಿಡಿ: ಪಾರ್ಥಿವ್ ಪಟೇಲ್ (19) ಹಾಗೂ ಕೊಹ್ಲಿ ಮೊದಲ ವಿಕೆಟ್​ಗೆ ಬಿರುಸಿನ 43 ರನ್ ಪೇರಿಸಿದರು. ಬಳಿಕ ಕೊಹ್ಲಿಗೆ ಜತೆಯಾದ ಎಬಿ ಡಿವಿಲಿಯರ್ಸ್ ಬಿರುಸಿನ ಬ್ಯಾಟಿಂಗ್ ಮೂಲಕ ಚೇಸಿಂಗ್​ಗೆ ಬಲ ತುಂಬಿದರು. ಪ್ರತಿ ಓವರ್​ಗೆ ಸರಾಸರಿ 10ರಂತೆ ರನ್ ಕಲೆಹಾಕುತ್ತಾ ಸಾಗಿದ ಈ ಜೋಡಿ ಪಂಜಾಬ್ ಮೇಲೆ ಒತ್ತಡ ಹೇರಿತು. ಒಂದು ಹಂತದಲ್ಲಿ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದ ಆರ್​ಸಿಬಿಗೆ ಮೊಹಮದ್ ಶಮಿ ಶಾಕ್ ನೀಡಿದರು. ಶಮಿ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ಕೊಹ್ಲಿ, ಎಂ. ಅಶ್ವಿನ್​ಗೆ ಕ್ಯಾಚ್ ನೀಡಿದರು. ಈ ಜೋಡಿ 2ನೇ ವಿಕೆಟ್​ಗೆ 85 ರನ್ ಪೇರಿಸಿ ಬೇರ್ಪಟ್ಟಿತು. ಬಳಿಕ ಎಬಿಡಿ ಹಾಗೂ ಮಾರ್ಕಸ್ ಸ್ಟೋಯಿನಿಸ್ (28*ರನ್, 16 ಎಸೆತ, 4 ಬೌಂಡರಿ) ಜೋಡಿ 3ನೇ ವಿಕೆಟ್​ಗೆ 46 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು. -ಏಜೆನ್ಸೀಸ್

ಕ್ರಿಸ್ ಗೇಲ್ ಐಪಿಎಲ್​ನಲ್ಲಿ 99 ರನ್ ಗಳಿಸಿ ಅಜೇಯರಾಗಿ ಉಳಿದ 2ನೇ ಬ್ಯಾಟ್ಸ್ ಮನ್. ಸುರೇಶ್ ರೈನಾ ಮೊದಲಿಗರು.

ಗೇಲ್ ಏಕಾಂಗಿ ಹೋರಾಟ

ಕ್ರಿಸ್ ಗೇಲ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ (18) ಜೋಡಿ 38 ಎಸೆತಗಳಲ್ಲಿ 66 ರನ್ ಗಳಿಸಿ ಕಿಂಗ್ಸ್ ಇಲೆವೆನ್​ಗೆ ಉತ್ತಮ ಆರಂಭ ಒದಗಿಸಿತು. ಸಿರಾಜ್ ಎಸೆದ ಇನಿಂಗ್ಸ್ ನ 6ನೇ ಓವರ್​ನಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿದ ಗೇಲ್ 24 ರನ್ ಕಸಿದರು. ಇದರೊಂದಿಗೆ ಪಂಜಾಬ್ ತಂಡ 6 ಓವರ್​ಗಳಲ್ಲೇ 60ರ ಗಡಿ ದಾಟಿತು. ಮರು ಓವರ್​ನಲ್ಲಿ ಚಾಹಲ್ ಈ ಜೋಡಿಗೆ ಬ್ರೇಕ್ ಹಾಕಿದರು. 7ನೇ ಓವರ್​ನ ಮೊದಲ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ರಾಹುಲ್, ಮರು ಎಸೆತದಲ್ಲಿ ಸ್ಟಂಪ್ ಆದರು. ಬಳಿಕ ಬಂದ ಮಯಾಂಕ್ ಅಗರ್ವಾಲ್ (15) ಚಾಹಲ್ ಎಸೆತದಲ್ಲಿ ಬೌಲ್ಡ್ ಆದರು. ಈ ನಡುವೆ ಕ್ರಿಸ್ ಗೇಲ್ ಏಕಾಂಗಿ ಹೋರಾಟ ಮುಂದುವರಿಸಿದರು. ಸರ್ಫ್ರಾಜ್ ಖಾನ್ (15), ಗೇಲ್ ಜತೆಗೂಡಿ 3ನೇ ವಿಕೆಟ್​ಗೆ 24 ರನ್ ಪೇರಿಸಿ ಔಟಾದರೆ, ಬಡ್ತಿ ಪಡೆದು ಕಣಕ್ಕಿಳಿದ ಸ್ಯಾಮ್ ಕರ›ನ್ (1) ಮೊಯಿನ್ ಅಲಿ ಎಸೆತದಲ್ಲಿ ಬೌಲ್ಡ್ ಆದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ, ಗೇಲ್ ತಾಳ್ಮೆಯ ಆಟದೊಂದಿಗೆ ತಂಡಕ್ಕೆ ಆಸರೆಯಾದರು. ಮಂದೀಪ್ ಜತೆಗೂಡಿ ಮುರಿಯದ 5ನೇ ವಿಕೆಟ್​ಗೆ 60 ರನ್ ಪೇರಿಸಿದರು. ಅಂತಿಮ ಓವರ್​ವರೆಗೂ ಗೇಲ್ ಕ್ರೀಸ್​ನಲ್ಲಿದ್ದರೂ ಕೇವಲ 1 ರನ್​ನಿಂದ ಶತಕ ಸಿಡಿಸಲು ವಿಫಲರಾದರು. ಶತಕಕ್ಕೆ ಕೊನೇ ಎಸೆತದಲ್ಲಿ 5 ರನ್ ಬೇಕಿದ್ದಾಗ ಬೌಂಡರಿ ಸಿಡಿಸಿದರು.

ಹಲವು ಸೋಲಿನ ಬಳಿಕ ಒಲಿದಿರುವ ಈ ಗೆಲುವು ಸಾಕಷ್ಟು ಖುಷಿ ನೀಡಿದೆ. ಇದಕ್ಕಿಂತ ಮುನ್ನ ಕೆಲ ಪಂದ್ಯಗಳಲ್ಲಿ ಗೆಲುವಿನ ಸನಿಹ ಬಂದು ಎಡವಿದ್ದೆವು. ಪಂಜಾಬ್ ತಂಡವನ್ನು 173 ರನ್​ಗೆ ನಿಯಂತ್ರಿಸಿದ್ದು ಉತ್ತಮ ಪ್ರಯತ್ನ.

| ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕ

ಕೊಹ್ಲಿ-ಡಿವಿಲಿಯರ್ಸ್ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ (2,788) ಜತೆಯಾಟ ವಾಡಿದ ಜೋಡಿ ಎನಿಸಿಕೊಂಡಿತು. ಕೊಹ್ಲಿ-ಗೇಲ್ (2,787) ಜೋಡಿಯನ್ನು ಹಿಂದಿಕ್ಕಿದರು. ಕ್ರಿಸ್ ಗೇಲ್ ಐಪಿಎಲ್​ನಲ್ಲಿ 7ನೇ ಮತ್ತು ಟಿ20 ಕ್ರಿಕೆಟ್​ನಲ್ಲಿ ಒಟ್ಟಾರೆ 22ನೇ ಶತಕದಿಂದ ವಂಚಿತರಾದರು.

Leave a Reply

Your email address will not be published. Required fields are marked *