ಭಾರತಕ್ಕೆ ಯಶಸ್ವಿ ಏಷ್ಯಾಡ್

ಮಹಿಳಾ ಹಾಕಿಯಲ್ಲಿ ರಜತ ಸಂಭ್ರಮ

ಏಷ್ಯಾಡ್​ನಲ್ಲಿ ಸುಮಾರು 36 ವರ್ಷಗಳ ಬಳಿಕ ಚಾಂಪಿಯನ್ ಆಗುವ ಅವಕಾಶವನ್ನು ಕೈಚೆಲ್ಲಿದ ಭಾರತ ಮಹಿಳಾ ಹಾಕಿ ತಂಡ ಸ್ವರ್ಣವನ್ನು ಜಪಾನ್ ತಂಡಕ್ಕೆ ಬಿಟ್ಟುಕೊಟ್ಟಿತು. ಜತೆಗೆ 2020ರ ಟೋಕಿಯೊ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆಯುವ ಅವಕಾಶವೂ ಕೈತಪ್ಪಿತು. ಫೈನಲ್ ಹೋರಾಟದಲ್ಲಿ ಜಪಾನ್​ನ ಬಲಿಷ್ಠ ರಕ್ಷಣಾ ವಿಭಾಗವನ್ನು ಬೇಧಿಸಲು ವಿಫಲಗೊಳ್ಳುವ ಮೂಲಕ ರಾಣಿ ರಾಂಪಾಲ್ ಪಡೆ 1-2 ಗೋಲುಗಳಿಂದ ಪರಾಭವಗೊಂಡಿತು. ಇದರೊಂದಿಗೆ ಇಂಚೋನ್ ಏಷ್ಯಾಡ್ ಕಂಚು ಪದಕ ಹೋರಾಟದಲ್ಲಿ ಕಂಡಿದ್ದ ಸೋಲಿಗೆ ಸೇಡು ತೀರಿಸಿದ ಜಪಾನ್ ಚೊಚ್ಚಲ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿತು. 1982ರ ಏಷ್ಯಾಡ್​ನಲ್ಲಿ ಕೊನೇ ಮತ್ತು ಏಕೈಕ ಬಾರಿ ಭಾರತ ಚಿನ್ನ ಜಯಿಸಿತ್ತು. ಪೆನಾಲ್ಟಿ ಕಾರ್ನರ್ ಅವಕಾಶದ ಮೂಲಕ ಜಪಾನ್ ಮೊದಲು ಗೋಲಿನ ಖಾತೆ ತೆರೆಯಿತು. 11ನೇ ನಿಮಿಷದಲ್ಲಿ ಶಿಮಿಜು ಜಪಾನ್​ಗೆ 1-0ಯ ಮುನ್ನಡೆ ತಂದರು. ದ್ವಿತೀಯ ಕ್ವಾರ್ಟರ್​ನ 25ನೇ ನಿಮಿಷದಲ್ಲಿ ಆಕ್ರಮಣಕಾರಿ ಆಟದೊಂದಿಗೆ ನೇಹಾ ಭಾರತದ ಪರ ಗೋಲು ದಾಖಲಿಸಿ 1-1 ಸಮಬಲ ಸಾಧಿಸಿ ತಂಡವನ್ನು ಲಯಕ್ಕೆ ತಂದರು. 3ನೇ ಕ್ವಾರ್ಟರ್ ಅವಧಿಯ ಕೊನೇ 44ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಜಪಾನ್ ಕವಾಮುರಾರ ಸಾಹಸದಿಂದ ಮುನ್ನಡೆ ಸಾಧಿಸಿತು. ಅಂತಿಮ ಕ್ವಾರ್ಟರ್​ನ ಹೆಚ್ಚಿನ ಅವಧಿ ಜಪಾನ್ ಆಟಗಾರ್ತಿಯರು ಚೆಂಡನ್ನು ನಿಯಂತ್ರಣದಲ್ಲಿಟ್ಟುಕೊಂಡರು. ಕೊನೇ ಹಂತದಲ್ಲಿ ಭಾರತಕ್ಕೆ ಸಿಕ್ಕ ಗೋಲು ಗಳಿಸುವ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಇದರೊಂದಿಗೆ ಜಪಾನ್ ತಂಡ ತವರಿನ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದಿದೆ. ಭಾರತ 1998ರ ಬಳಿಕ ಮತ್ತೆ ರಜತ ಪದಕ ಜಯಿಸಿತು.

ಫೈನಲ್​ಗೇರಿದ ಬಾಕ್ಸರ್ ಅಮಿತ್

ಬಾಕ್ಸಿಂಗ್​ನಲ್ಲಿ ಅಮಿತ್ ಪಾಂಗಲ್(49ಕೆ.ಜಿ) ಫೈನಲ್​ಗೇರಿದ ಏಕೈಕ ಭಾರತೀಯ ಎನಿಸಿಕೊಂಡರಲ್ಲದೆ, ಸ್ವರ್ಣ ಪದಕದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅಮಿತ್ ಸೆಮಿಫೈನಲ್​ನಲ್ಲಿ 3-2ರಿಂದ ಫಿಲಿಪ್ಪಿನ್ಸ್​ನ ಕಾರ್ಲೆ ಪಾಲಮ್ನ್ನು ಸೋಲಿಸಿದರು. ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್್ಸ ಬೆಳ್ಳಿ ಪದಕ ವಿಜೇತ ಅಮಿತ್ ಸ್ವರ್ಣ ಪದಕಕ್ಕಾಗಿ ಉಜ್ಬೆಕಿಸ್ತಾನದ ಹಸನ್​ಬಾಯ್ ದುಸ್ಮಟೊವ್​ರನ್ನು ಎದುರಿಸಲಿದ್ದಾರೆ.

ಜಕಾರ್ತದ ಏಷ್ಯಾಡ್ ಭಾರತದ ಪಾಲಿಗೆ ಅತ್ಯಂತ ಯಶಸ್ವಿ ಕ್ರೀಡಾಕೂಟವೆಂಬ ಹೆಗ್ಗಳಿಕೆಗೆ ಭಾಜನವಾಗುವುದು ಖಚಿತವೆನಿಸಿದೆ. ಕ್ರೀಡಾಕೂಟದ 13ನೇ ದಿನ ಭಾರತ ಚಿನ್ನದ ಪದಕ ಗೆಲ್ಲದಿದ್ದರೂ, 2 ರಜತ ಮತ್ತು 4 ಕಂಚಿನ ಪದಕ ಒಲಿಸಿಕೊಂಡಿತು. ಜತೆಗೆ 2 ಚಿನ್ನ ಅಥವಾ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದೆ. ಈ ಮೂಲಕ ಭಾರತ 2010ರ ಗುವಾಂಗ್​ರೆkೌ ಏಷ್ಯಾಡ್​ನಲ್ಲಿ ಒಟ್ಟು 65 ಪದಕ (14 ಚಿನ್ನ, 17 ಬೆಳ್ಳಿ, 34 ಕಂಚು) ಜಯಿಸಿದ್ದ ತನ್ನ ಸಾಧನೆ ಸರಿಗಟ್ಟಿದೆ. ಶನಿವಾರ ಭಾರತ ಈ ಸಾಧನೆ ಮೀರಿ ನಿಲ್ಲುವುದು ಖಚಿತವೆನಿಸಿದೆ. ಸ್ಕಾ್ವಷ್, ಬಾಕ್ಸಿಂಗ್ ಫೈನಲ್​ನಲ್ಲಿ ಚಿನ್ನ ಗೆದ್ದರೆ ಭಾರತ 1951ರ ಚೊಚ್ಚಲ ಏಷ್ಯಾಡ್​ನಲ್ಲಿ 15 ಚಿನ್ನ ಗೆದ್ದಿದ್ದ ದಾಖಲೆಯನ್ನೂ ಸರಿಗಟ್ಟಲಿದೆ.

ಸೈಲಿಂಗ್​ನಲ್ಲಿ ಮೂರು ಪದಕ

ಸೈಲಿಂಗ್ (ಹಾಯಿದೋಣಿ) ಸ್ಪರ್ಧೆಯಲ್ಲಿ ಚೆನ್ನೈನ ವರ್ಷಾ ಗೌತಮ್ ಹಾಗೂ ಶ್ವೇತಾ ಶೆರ್ವೆಗಾರ್ ಜೋಡಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರೆ, ಹರ್ಷಿತಾ ತೋಮರ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. ಪುರುಷರ ವಿಭಾಗದಲ್ಲಿ ವರುಣ್ ಠಕ್ಕರ್ ಅಶೋಕ್ ಮತ್ತು ಚೆಂಗಪ್ಪ ಗಣಪತಿ ಕೆಳಪಂಡ ಜೋಡಿ ಕಂಚು ಪದಕ ಜಯಿಸಿತು. ವರ್ಷಾ ಗೌತಮ್​ಶ್ವೇತಾ 49ಇಆರ್ ಎಫ್​ಎಕ್ಸ್ ವಿಭಾಗದಲ್ಲಿ 15 ರೇಸ್​ಗಳಲ್ಲಿ ಒಟ್ಟು 40 ಅಂಕ ಸಂಪಾದಿಸಿ 2ನೇ ಸ್ಥಾನದೊಂದಿಗೆ ಮಿಂಚಿದರು. ವರ್ಷಾ-ಶ್ವೇತಾ ಭಾರತೀಯ ಸೈಲಿಂಗ್ ಸಂಸ್ಥೆ ಮೊದಲಿಗೆ ಪ್ರಕಟಿಸಿದ್ದ ಏಷ್ಯಾಡ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಅವರು, ನಂತರ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಸೂಚನೆಯಂತೆ ಕೊನೇಕ್ಷಣದಲ್ಲಿ ಏಷ್ಯಾಡ್ ಸ್ಪರ್ಧೆ ಅವಕಾಶ ಪಡೆದಿದ್ದರು. 16 ವರ್ಷದ ಹರ್ಷಿತಾ ಓಪನ್ ಲೇಸರ್ 4.7ರಲ್ಲಿ 12 ರೇಸ್​ಗಳಲ್ಲಿ ಪೈಪೋಟಿ ನೀಡಿ 62 ಅಂಕ ಗಳಿಸಿ 3ನೇ ಸ್ಥಾನದೊಂದಿಗೆ ಕಂಚಿನ ಪದಕಕ್ಕೆ ಖುಷಿಪಟ್ಟರು. ವಿಕಾಸ್ ಮತ್ತು ಗಣಪತಿ 49ಇಆರ್ ಸ್ಪರ್ಧೆಯಲ್ಲಿ ಒಟ್ಟು 53 ಅಂಕ ಸಂಪಾದಿಸಿ ಕಂಚು ಜಯಿಸಿದರು. ಓಪನ್ ಲೇಸರ್ 4.7 ವಿಭಾಗದಲ್ಲಿ ಗೋವಿಂದ ಬೈರಂಗಿ 4 ಮತ್ತು ನೇತ್ರ ಕುಮನನ್ ಲೇಸರ್ ರೇಡಿಯಲ್ ಸೈಲಿಂಗ್​ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಗಾಯದಿಂದಾಗಿ ವಿಕಾಸ್​ಗೆ ಕಂಚು

ಕೊನೇ ಎರಡು ಏಷ್ಯಾಡ್​ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪದಕ ಜಯಿಸಿದ ನಂತರ ಹಾಲಿ ಏಷ್ಯನ್ ಗೇಮ್ಸ್​ನಲ್ಲಿ ಚೊಚ್ಚಲ ಸ್ವರ್ಣ ಪದಕ ಗೆಲ್ಲುವ ಗುರಿಯಲ್ಲಿದ್ದ ವಿಕಾಸ್ ಕೃಷ್ಣನ್ ಕನಸಿಗೆ ಗಾಯ ಹಿನ್ನಡೆಯುಂಟು ಮಾಡಿತು. ವೈದ್ಯಕೀಯ ತಂಡ ವಿಕಾಸ್ ಶುಕ್ರವಾರ ಆಡಲು ಫಿಟ್ ಇಲ್ಲ ಎಂದು ಹೇಳಿದ್ದರಿಂದ ಉಪಾಂತ್ಯ ಹೋರಾಟದಲ್ಲಿ ಕಣಕ್ಕಿಳಿಯಲಿಲ್ಲ. ಇದರಿಂದ ವಿಕಾಸ್ ಕಂಚಿನ ಪದಕಕ್ಕೆ ಖುಷಿಪಟ್ಟಿದ್ದಾರೆ. ಆದರೆ ಏಷ್ಯಾಡ್​ನಲ್ಲಿ ಸತತ ಮೂರನೇ ಬಾರಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ಎಂಬ ಸಾಧನೆ ಮಾಡಿದ್ದಾರೆ. ‘ವಿಕಾಸ್​ಗೆ ಕಣ್ಣಿನಲ್ಲಿ ವಿಪರೀತ ಉರಿ ಇತ್ತು. ಇಂಥ ಗಾಯದೊಂದಿಗೆ ಫೈಟ್ ಮಾಡುವುದು ಬಹಳ ಅಪಾಯ’ ಎಂದು ಅವರ ಮೆಡಿಕಲ್ ಟೀಮ್ ತಿಳಿಸಿದೆ.

 

ಫೈನಲ್​ಗೆ ಮಹಿಳಾ ಸ್ಕಾ್ವಷ್ ಟೀಮ್

ಜೋಶ್ನಾ ಚಿನ್ನಪ್ಪ 8 ಬಾರಿಯ ವಿಶ್ವ ಚಾಂಪಿಯನ್ ನಿಕೋಲ್ ಡೇವಿಡ್​ಗೆ ಏಷ್ಯಾಡ್ ಸೆಮಿಫೈನಲ್​ನಲ್ಲಿ ಸೋಲಿನ ಆಘಾತ ನೀಡುವುದರೊಂದಿಗೆ ಭಾರತ ಮಹಿಳಾ ತಂಡ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಭಾರತಕ್ಕೆ ಸ್ಕಾ್ವಷ್​ನಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಖಚಿತ ಗೊಂಡಿದೆ. ಶುಕ್ರವಾರ ನಡೆದ ಮಹಿಳಾ ತಂಡ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-0ಯಿಂದ ಮಲೇಷ್ಯಾವನ್ನು ಸೋಲಿಸಿ ಸತತ 2ನೇ ಬಾರಿ ಏಷ್ಯಾಡ್​ನಲ್ಲಿ ಸ್ವರ್ಣ ಪದಕ ಹೋರಾಟದ ಸುತ್ತಿಗೆ ಲಗ್ಗೆ ಇಟ್ಟಿತು. ಮೊದಲ ಪಂದ್ಯದಲ್ಲಿ ಜೋಶ್ನಾ ದಿಟ್ಟ ಹೋರಾಟದ ಮೂಲಕ 12-10, 11-9, 6-11, 10-12, 11-9ರಿಂದ 7 ಏಷ್ಯಾಡ್ ಸ್ವರ್ಣ ಪದಕ ವಿಜೇತೆ ನಿಕೋಲ್ ಡೇವಿಡ್​ರನ್ನು ಸೋಲಿಸಿದರು. ಇದೇ ಸ್ಪೂರ್ತಿಯೊಂದಿಗೆ ಆಡಿದ ದೀಪಿಕಾ ಪಲ್ಲಿಕಲ್ ಕಾರ್ತಿಕ್ 11-2, 11-9, 11-7ರಿಂದ 2 ಏಷ್ಯಾಡ್ ಸ್ವರ್ಣ ಪದಕ ಸಾಧಕಿ ಲೋ ವಿ ವರ್ನ್​ರನ್ನು ಸೋಲಿಸಿದರು. ಭಾರತ ಶನಿವಾರ ಫೈನಲ್​ನಲ್ಲಿ ಹಾಂಕಾಂಗ್ ತಂಡವನ್ನು ಎದುರಿಸಲಿದೆ.

ಪುರುಷರ ಸ್ಕಾ್ವಷ್ ಟೀಮ್ೆ ಕಂಚು

ಇಂಚೋನ್ ಏಷ್ಯನ್​ಗೇಮ್್ಸ ಸ್ವರ್ಣ ಪದಕ ವಿಜೇತ ಭಾರತ ಪುರುಷರ ಸ್ಕಾ್ವಷ್ ತಂಡ ಈ ಬಾರಿ ಕಂಚಿನ ಪದಕಕ್ಕೆ ಖುಷಿಪಟ್ಟಿತು. ಸೆಮಿಫೈನಲ್​ನಲ್ಲಿ ಭಾರತ 0-2ರಿಂದ ಹಾಂಕಾಂಗ್ ತಂಡದ ವಿರುದ್ಧ ಶರಣಾಯಿತು. ಭರವಸೆ ಮೂಡಿಸಿದ್ದ ಸೌರವ್ ಘೋಷಾಲ್ ಸಂಪೂರ್ಣ ಫಿಟ್ ಆಗಿರದ ಹಿನ್ನಡೆಯಿಂದ 0-3ರಿಂದ ಮ್ಯಾಕ್ಸ್ ಲೀ ಅವರ ವಿರುದ್ಧ ಶರಣಾದರು. ಹರಿಂದರ್ ಪಾಲ್ ಸಂಧು ಕೂಡ 1-3ರಿಂದ ಲಿಯೊ ಅವ್ ವಿರುದ್ಧ ಸೋಲುವುದರೊಂದಿಗೆ ಭಾರತ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

 

 

ಟಿಟಿ ಸಿಂಗಲ್ಸ್​ನಲ್ಲಿ ಮನಿಕಾ, ಶರತ್ ನಿರಾಸೆ

ಕೂಟದಲ್ಲಿ ಎರಡು ಕಂಚು ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ ಭಾರತ, ಟೇಬಲ್ ಟೆನಿಸ್ ಸವಾಲನ್ನು ಪುರುಷರ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪದಕವಿಲ್ಲದೆ ಮುಗಿಸಿದೆ. ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ನಾಲ್ಕು ಪದಕಗಳನ್ನು ಬಾಚಿದ್ದ ಮನಿಕಾ ಬಾತ್ರಾ, ಶರತ್ ಕಮಲ್, ಜಿ ಸತ್ಯನ್ ಪ್ರಿ ಕ್ವಾರ್ಟರ್​ಫೈನಲ್ ಸೋಲಿನೊಂದಿಗೆ ನಿರಾಸೆ ಮೂಡಿಸಿದರು. ಮನಿಕಾ ಬಾತ್ರಾ 2-11, 8-11, 11-6, 4-6ರಿಂದ ಚೀನಾದ ವಾಂಗ್ ಮನ್ಯೂ ಎದುರು ಏಕಪಕ್ಷೀಯವಾಗಿ ಶರಣಾದರು. ವಿಶ್ವ ನಂ.33 ಶರತ್ 7-11, 11-9, 10-12, 16-14, 9-11ರಿಂದ ಚೀನಾ ತೈಪೆಯ ಚಿಹ್ ಯುಹಾನ್ ಚುನಗ್ ಎದುರು ಸೋತರು. ವಿಶ್ವ ನಂ.39 ಸತ್ಯನ್ 11-9, 4-11, 9-11, 6-11, 10-12ರಿಂದ ಜಪಾನ್​ನ ಕೆಂಟಾ ಮಸುಡೈರಾ ವಿರುದ್ಧ ಪರಾಭವಗೊಂಡರು.

ವಾಲಿಬಾಲ್, ಜುಡೋದಲ್ಲಿ ನಿರಾಸೆ

ಭಾರತ ಮಹಿಳಾ ತಂಡ ವಾಲಿಬಾಲ್​ನಲ್ಲಿ 9-10ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲೂ ಸೋತಿದೆ. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಭಾರತ 21-25, 16-25, 15-25ರಿಂದ 73 ನಿಮಿಷಗಳಲ್ಲಿ ಸೋತಿತು. ಇದರೊಂದಿಗೆ ಭಾರತ ಬಿ ಗುಂಪಿನಲ್ಲಿ ಒಂದೂ ಗೆಲುವಿಲ್ಲದೆ ನಿರಾಸೆ ಮೂಡಿಸಿದೆ. ಭಾರತದ ಜುಡೋ ಪಟುಗಳಾದ ಅವತಾರ್ ಸಿಂಗ್ ಮತ್ತು ರಾಜ್ವಿಂದರ್ ಕೌರ್ ಏಷ್ಯಾಡ್ ಸವಾಲು ಮುಗಿಸಿದ್ದಾರೆ. ಪುರುಷರ ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ 100 ಕೆ.ಜಿ ವಿಭಾಗದಲ್ಲಿ ಅವತಾರ್ 1-10ರಿಂದ ಯುಎಇಯ ಇವಾನ್ ರಿಮೆರೆಂಕೊ ಎದುರು ಸೋತರು.