ಐದು ವರ್ಷದಲ್ಲೇ ಅಂತರ್ಜಲ ಗರಿಷ್ಠ ಕುಸಿತ

ಶ್ರವಣ್‌ಕುಮಾರ್ ನಾಳ, ಪುತ್ತೂರು

ಪಶ್ಚಿಮಘಟ್ಟದ ಬುಡವಾಗಿರುವ ಅರೆ ಮಲೆನಾಡು-ಕರಾವಳಿ ಪ್ರದೇಶ ಸಮೃದ್ಧ ಅಂತರ್ಜಲ ಹೊಂದಿರಬೇಕಾದ ಭಾಗ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಹೆಚ್ಚುತ್ತಿದೆ. ಕಳೆದ 5-6 ವರ್ಷಗಳ ಮಾಹಿತಿಯನ್ವಯ ಇದೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಲ್ಲೇ ಗರಿಷ್ಠ ಕುಸಿತ ಕಂಡಿದೆ.

ಜೂನ್-ಜುಲೈನಲ್ಲಿ ಬೀಳುವ ಮಳೆ ಭೂಮೇಲ್ಪದರದ ಅಂತರ್ಜಲ ಹೆಚ್ಚಿಸಲು ನೆರವಾದರೆ, ಆಗಸ್ಟ್-ಅಕ್ಟೋಬರ್‌ವರೆಗಿನ ಮಳೆ ಭೂಗರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿಂಗಲು ಪೂರಕವಾಗಿರುತ್ತದೆ. ಕರಾವಳಿಯಾದ್ಯಂತ ಅಕ್ಟೋಬರ್ ವೇಳೆ ಸರಾಸರಿ 4.5 ಮೀ. ಅಂತರ್ಜಲ ಮಟ್ಟ ಇರುತ್ತದೆ. ಆದರೆ ಈಗ ಈ ಪ್ರಮಾಣ 9.29 ಮೀ.ಗೆ ಕುಸಿದಿದೆ. ಇದು ಕಳೆದ 5 ವರ್ಷದಲ್ಲಿ ದಾಖಲಾದ ಅಂತರ್ಜಲ ಗರಿಷ್ಠ ಕುಸಿತವಾಗಿದೆ.

ಜಲಕ್ಷಾಮ ಭೀತಿ: 2014ರ ಅಕ್ಟೋಬರ್ ವೇಳೆ ಮಂಗಳೂರು ತಾಲೂಕಿನಲ್ಲಿ 6.96 ಮೀ.ನಲ್ಲಿದ್ದ ಅಂತರ್ಜಲ 2018ರಲ್ಲಿ 14.86ಕ್ಕೆ ಇಳಿದಿದೆ. ಅಂದರೆ ಬರೋಬ್ಬರಿ 7.9 ಮೀ.ನಷ್ಟು ಕೆಳಕ್ಕೆ ಇಳಿದಿದೆ. ಪುತ್ತೂರಿನಲ್ಲಿ 3.8 ಮೀ.ನಿಂದ 9.1ಕ್ಕೆ, ಸುಳ್ಯದಲ್ಲಿ 5.21 ರಿಂದ 6.01ಕ್ಕೆ, ಬೆಳ್ತಂಗಡಿಯಲ್ಲಿ 3.95 ರಿಂದ 9.51ಕ್ಕೆ, ಬಂಟ್ವಾಳದಲ್ಲಿ 4.09ರಿಂದ 7.01 ಮೀ.ಗೆ ಕುಸಿತ ದಾಖಲಾಗಿದೆ.
ಐದು ವರ್ಷದ ಒಟ್ಟು ಚಿತ್ರಣ ಗಮನಿಸಿದರೆ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಕುಸಿತವೇ ಕಂಡಿದೆ. ಮಾರ್ಚ್‌ನಲ್ಲಿ ದಾಖಲಾಗುವ ಅಂತರ್ಜಲ ಪ್ರಮಾಣ ಅಕ್ಟೋಬರ್‌ನಲ್ಲೇ ದಾಖಲಾಗಿದೆ ಎಂದರೆ ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರಗೊಳ್ಳಬಹುದು ಎಂಬ ಆತಂಕವಿದೆ.

ಅಕ್ಟೋಬರ್ ತಿಂಗಳ ಜಲಮಟ್ಟದ ಅಂಕಿ ಅಂಶ (ಮೀ.ನಲ್ಲಿ)
ತಾಲೂಕು-2014-2015-2016-2017-2018
ಬಂಟ್ವಾಳ-4.09- 7.34 -5.91 -5.11- 7.01
ಬೆಳ್ತಂಗಡಿ -3.95 -5.21 -7.17- 8.19- 9.51
ಮಂಗಳೂರು -6.96- 7.63 -9.19-11.92- 14.86
ಪುತ್ತೂರು -3.8 -4.55- 6.05 -7.9 -9.01
ಸುಳ್ಯ-5.21 -8.18 -7.01 -7.96- 6.01

ಬೆಳ್ತಂಗಡಿಯಲ್ಲಿ 0.34ರಷ್ಟು ಹೆಚ್ಚಳ: ಜುಲೈನಿಂದ ಅಕ್ಟೋಬರ್‌ವರೆಗಿನ ಅಂತರ್ಜಲ ಮಟ್ಟದಲ್ಲಿ 0.1ರಿಂದ 2.61 ಮೀಟರ್ ತನಕ ವ್ಯತ್ಯಾಸ ಕಂಡು ಬಂದಿದೆ. ಬಂಟ್ವಾಳ 1.13, ಮಂಗಳೂರು 1.91, ಪುತ್ತೂರು 2.31, ಸುಳ್ಯದಲ್ಲಿ 2.31 ಮೀ.ನಷ್ಟು ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಬೆಳ್ತಂಗಡಿಯಲ್ಲಿ ಮಾತ್ರ 0.34 ಮೀ.ನಷ್ಟು ಹೆಚ್ಚಳ ಕಂಡಿದೆ.

ಸುಳ್ಯದಲ್ಲಿ ಅಂತರ್ಜಲ ವೃದ್ಧಿ, ಮಂಗಳೂರಿನಲ್ಲಿ ತೀವ್ರ ಕುಸಿತ: ಈ ಬಾರಿ ಮಂಗಳೂರು, ಬೆಳ್ತಂಗಡಿ ಹಾಗೂ ಸುಳ್ಯ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ, ಅಚ್ಚರಿ ಅಂದರೆ ಸುಳ್ಯ ಹೊರತುಪಡಿಸಿ ಉಳಿದೆರಡು ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಹೆಚ್ಚಾಗಿದೆ. ಪುತ್ತೂರಿನಲ್ಲಿ ಆಗಸ್ಟ್‌ನಲ್ಲಿ 4.28 ಮೀಟರ್‌ನಲ್ಲಿದ್ದ ಅಂತರ್ಜಲ ಮಟ್ಟ ಸೆಪ್ಟೆಂಬರ್‌ನಲ್ಲಿ 6.99 ಮೀ, ಅಕ್ಟೋಬರ್‌ನಲ್ಲಿ 9.01 ಮೀ.ಗೆ ತಲುಪಿದೆ. ಅಗಸ್ಟ್‌ನಿಂದ ಇಲ್ಲಿಯವರೆಗೆ ಅಂದರೆ 4.37 ಮೀ.ನಷ್ಟು ಕೆಳಗೆ ಇಳಿದಿದೆ ಎಂದರ್ಥ. ಅದೇ ರೀತಿ ಮಂಗಳೂರಿನಲ್ಲಿ ಆಗಸ್ಟ್‌ನಲ್ಲಿ 6.45 ಮೀ. ಇದ್ದು, ಈಗ 14.86 ಮೀ.ಗೆ ತಲುಪಿದೆ. ಅಂದರೆ 8.41 ಮೀ. ಕೆಳಗೆ ಇಳಿದಿದೆ. ಬೆಳ್ತಂಗಡಿಯಲ್ಲಿ ಆಗಸ್ಟ್‌ನಲ್ಲಿ 3.21 ಮೀಟರ್‌ನಲ್ಲಿದ್ದ ಅಂತರ್ಜಲ ಮಟ್ಟ ಅಕ್ಟೋಬರ್‌ನಲ್ಲಿ 9.51 ಮೀ.ಗೆ ತಲುಪಿದೆ. ಅಗಸ್ಟ್‌ನಿಂದ ಇಲ್ಲಿಯವರೆಗೆ 6.3 ಮೀ.ನಷ್ಟು ಕೆಳಗೆ ಇಳಿದಿದೆ.

ಅಂತರ್ಜಲ ಕುಸಿತಕ್ಕೆ ಕಾರಣವೇನು?: ಮಳೆ ನೀರು ಭೂರಂಧ್ರ ಮೂಲಕ ಭೂಗರ್ಭ ಸೇರದಿರುವುದೇ ಅಂತರ್ಜಲ ಕುಸಿತಕ್ಕೆ ಮೂಲ ಕಾರಣ. ಭೂಮಿಯ ಭೌಗೋಳಿಕ ರಚನೆಯನ್ನು ಬದಲಾಯಿಸಿರುವುದರಿಂದ ಮಳೆ ನೀರಿ ಹರಿದು ಹೋಗುತ್ತದೆ ವಿನಃ ಭೂಗರ್ಭ ಸೇರುವುದಿಲ್ಲ. ಈ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಂಡರೆ ಅಂತರ್ಜಲ ಕುಸಿತ ಪ್ರಮಾಣವನ್ನು ತಡೆಯಬಹುದು ಎಂದು ಹಿರಿಯ ಭೂವಿಜ್ಞಾನಿ ಡಾ. ಸೋಮಶೇಖರ್ ಹಿರೇಮಠ ವಿಜಯವಾಣಿಗೆ ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿದ್ದ ಅಂತರ್ಜಲ ಮಟ್ಟ ಈಗಿಲ್ಲ, ಮಳೆ ಪ್ರಮಾಣ ಇಳಿಕೆ ಭೂಮಿಗೆ ಇಂಗುವ ಪ್ರಮಾಣ ಕಡಿಮೆ ಆಗಿರುವುದರಿಂದ ಈ ಬಾರಿ ಸೆಪ್ಟೆಂಬರ್‌ನಿಂದಲೇ ಕುಸಿತ ಕಂಡಿದೆ. ಕಳೆದ ಐದು ವರ್ಷಗಳಿಂದ ಅಂತರ್ಜಲ ಮಟ್ಟ ಕೆಳಮುಖದತ್ತ ಸಾಗಿದೆ.
|ಜಾನಕಿ, ಭೂ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅಂತರ್ಜಲ ವಿಭಾಗ ಮಂಗಳೂರು