More

  ಕರಾವಳಿಯಲ್ಲಿ ಹೈ ಅಲರ್ಟ್

  ಮಂಗಳೂರು/ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ವಿಮಾನ ನಿಲ್ದಾಣ, ರೈಲು/ಬಸ್ ನಿಲ್ದಾಣಗಳು, ಧಾರ್ಮಿಕ ಸ್ಥಳ, ಪ್ರಮುಖ ವಾಣಿಜ್ಯ ಕೇಂದ್ರಗಳು, ಪ್ರವಾಸಿ ಸ್ಥಳಗಳಲ್ಲಿ ವಿಶೇಷ ಭದ್ರತೆ, ತಪಾಸಣೆ ಕೈಗೊಳ್ಳಲಾಗಿದೆ.
  ನವಮಂಗಳೂರು ಬಂದರು, ಎಂಆರ್‌ಪಿಎಲ್ ಸಹಿತ ಉದ್ದಿಮೆಗಳು, ಮಂಗಳೂರು ನಗರದ ರೈಲು ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಮಾಲ್, ಕೈಗಾರಿಕಾ ಪ್ರದೇಶ, ನವಮಂಗಳೂರು ಬಂದರು ಸಹಿತ ಜನದಟ್ಟಣೆ ಅಧಿಕವಿರುವ ಎಲ್ಲ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ನಗರದ ಪೊಲೀಸ್ ಇಲಾಖೆಯ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
  ಮಾಲ್‌ಗಳಲ್ಲಿ ಭದ್ರತಾ ಸಿಬ್ಬಂದಿಗೆ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಆಯಾ ಪ್ರದೇಶದ ಪೊಲೀಸ್ ಠಾಣಾ ಸಿಬ್ಬಂದಿಯನ್ನೂ ಭದ್ರತೆಗೆ ನಿಯೋಜಿಸಲಾಗಿದೆ. ಆದರೆ ಮೀನುಗಾರಿಕಾ ಬಂದರು, ಕೇಂದ್ರ ಮಾರುಕಟ್ಟೆ ಪರಿಸರ, ಸಿಟಿ, ಸರ್ವೀಸ್ ನಿಲ್ದಾಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಲು ಪೊಲೀಸ್ ಸಿಬ್ಬಂದಿಯೇ ಇಲ್ಲ. ಕೆಲವು ಕಡೆಗಳಲ್ಲಿ ಪೊಲೀಸ್ ಇಲಾಖೆಯ ಖಾಲಿ ವಾಹನವಷ್ಟೇ ನಿಲ್ಲಿಸಿರುವುದು ಕಂಡುಬಂತು.

  ರೈಲು ನಿಲ್ದಾಣ: ನಗರ ಮೀಸಲು ಶಸಸ್ತ್ರ ಮೀಸಲು ಪಡೆ ಪೊಲೀಸರು, ರೈಲ್ವೆ ಪೊಲೀಸ್ ಫೋರ್ಸ್, ರೈಲ್ವೆ ಭದ್ರತಾ ಪಡೆಯ ಸುಮಾರು 30ಕ್ಕೂ ಅಧಿಕ ಸಿಬ್ಬಂದಿಯನ್ನು ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ. ಪ್ರಯಾಣಿಕರ ಎಲ್ಲ ರೀತಿಯ ಲಗೇಜ್‌ಗಳನ್ನು ಸ್ಕಾೃನಿಂಗ್ ಮಾಡಿಯೇ ಒಳಕ್ಕೆ ಬಿಡಲಾಗುತ್ತದೆ. ಪಾರ್ಸಲ್‌ಗಳನ್ನು ಸ್ಕಾೃನಿಂಗ್ ಮಾಡಲಾಗುತ್ತಿದೆ.
  ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಹಿತ ಎಲ್ಲ ಪ್ರಮುಖ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಸೋಮವಾರ ಪೊಲೀಸರು ಹಾಗೂ ನಿಗಮದ ಭದ್ರತಾ ಸಿಬ್ಬಂದಿ ಕಣ್ಣಿಟ್ಟಿದ್ದಾರೆ. ಶಂಕಿತ ಸರಕು ವಸ್ತುಗಳನ್ನು ಪರಿಶೀಲನೆ ನಡೆಸಿದ್ದಾರೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ.

  ವದಂತಿ ತಂದ ಆತಂಕ
  ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಸಜೀವ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ಪಣಂಬೂರು ಬೀಚ್‌ಗೆ ತರಲಾಗುತ್ತಿದೆ ಎನ್ನುವ ಸುದ್ದಿ ಕಡಲ ಕಿನಾರೆಯ ಮೀನುಗಾರರು ಹಾಗೂ ಪ್ರವಾಸಗರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತು. ಇದು ವದಂತಿ ಎನ್ನುವುದನ್ನು ಪೊಲೀಸ್ ಆಯುಕ್ತರು ಕೆಲ ಹೊತ್ತಿನಲ್ಲಿಯೇ ಖಚಿತಪಡಿಸಿದ ಬಳಿಕ ತೀರ ನಿವಾಸಿಗಳು ನಿರಾಳರಾದರು.

  ಹೆಚ್ಚುವರಿ ಸಿಬ್ಬಂದಿ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜನವರಿ ಅಂತ್ಯದ ವರೆಗೂ ಮಂಗಳೂರಿನಲ್ಲಿ ಹೆಚ್ಚುವರಿ ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಂಪನಕಟ್ಟೆಯ ಕೇಂದ್ರ ರೈಲು ನಿಲ್ದಾಣಕ್ಕೆ ಆರ್‌ಪಿಎಫ್ ಸಹಾಯಕ ಸೆಕ್ಯುರಿಟಿ ಕಮಿಷನರ್ ಎಸ್.ಎನ್.ಸಹನ್, ಇನ್ಸ್‌ಪೆಕ್ಟರ್ ಮನೋಜ್ ಕುಮಾರ್, ಎಸ್.ಐ. ಶಶಿ ಎನ್.ಕೆ., ಮೀಸಲು ಶಸಸ್ತ್ರ ಮೀಸಲು ಪಡೆ ಎಸಿಪಿ ಎಂ.ಎ.ಉಪಾಸೆ, ಜಿಆರ್‌ಪಿ ಪೊಲೀಸ್ ಇನ್ಸ್‌ಪೆಕ್ಟರ್ ತಾರಾನಾಥ್, ಪಾಂಡೇಶ್ವರ ಠಾಣಾ ಇನ್ಸ್‌ಪೆಕ್ಟರ್ ರಾಜೇಂದ್ರ ಕುಮಾರ್ ಅವರು ನಿಲ್ದಾಣಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ್ದಾರೆ.

  ಉಡುಪಿಯಲ್ಲೂ ತಪಾಸಣೆ ಚುರುಕು
  ಇಂದ್ರಾಳಿ ರೈಲ್ವೆ ನಿಲ್ದಾಣ, ನಗರದ ಪ್ರಮುಖ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಶ್ವಾನದಳ, ವಿಧ್ವಂಸಕ ಕೃತ್ಯ ತಡೆ ತಂಡ ವಿಶೇಷ ತಪಾಸಣೆ ನಡೆಸಿತು. ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಶ್ವಾನದಳ, ವಿಧ್ವಂಸಕ ಕೃತ್ಯ ತಡೆ ಪೊಲೀಸರ ತಂಡ ಬೀಡುಬಿಟ್ಟು ಎಲ್ಲೆಡೆ ತಪಾಸಣೆ ನಡೆಸುತ್ತಿದೆ. ಪ್ರಯಾಣಿಕರ ಬ್ಯಾಗು, ಲಗೇಜು ಬಾಕ್ಸ್, ಮತ್ತಿತರ ವಸ್ತುಗಳನ್ನು ಪರಿಶೀಲಿಸಲಾಯಿತು. ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ ನಾಲ್ಕೈದು ಸುತ್ತು ತಪಾಸಣೆ ನಡೆಸಿದರು. ಇನ್ನೊಂದು ಪ್ರತ್ಯೇಕ ಶ್ವಾನದಳ, ವಿದ್ವಂಸಕ ಕೃತ್ಯ ತಡೆ ತಂಡ ಕುಂದಾಪುರ, ಬೈಂದೂರು ಭಾಗಕ್ಕೆ ತೆರಳಿ ರೈಲ್ವೆ ನಿಲ್ದಾಣ ಭದ್ರತೆ ಪರಿಶೀಲಿಸಿತು.
  ಪಡುಬಿದ್ರಿ, ಇಂದ್ರಾಳಿ, ಬಾರ್ಕೂರು, ಸೇನಾಪುರ ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ರೈಲ್ವೆ ಭದ್ರತಾ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದರು. ಪ್ರತಿ ನಿಲ್ದಾಣದಲ್ಲಿ ಹತ್ತಕ್ಕೂ ಅಧಿಕ ಮಂದಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು, ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.

  ಧಾರ್ಮಿಕ ಕೇಂದ್ರಗಳಿಗೆ ಭದ್ರತೆ
  ಉಡುಪಿ ಕೃಷ್ಣಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ಸಹಿತ ಉಭಯ ಜಿಲ್ಲೆಗಳ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ಪ್ರಮುಖ ಕ್ಷೇತ್ರಗಳಿಗೆ ಶ್ವಾನದಳ ಮತ್ತು ಭದ್ರತಾ ತಂಡ ಭೇಟಿ ಪರಿಶೀಲನೆ ನಡೆಸಿ, ಅನುಮಾನಾಸ್ಪದ ವ್ಯಕ್ತಿ, ವಸ್ತುಗಳು ಕಂಡರೆ ಮಾಹಿತಿ ನೀಡಲು ಸೂಚಿಸಲಾಗಿದೆ. ದೇವಸ್ಥಾನದೊಳಗೆ ಪ್ರವೇಶಿಸುವವರನ್ನು ತಪಾಸಣೆ ಮಾಡಿಯೇ ಒಳಬಿಡಲು ಸೂಚಿಸಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಹರೆ ಸಿಬ್ಬಂದಿ, ದೇವಳದ ಭದ್ರತಾ ಸಿಬ್ಬಂದಿ, ಗೃಹರಕ್ಷಕ ದಳದವರು ಭದ್ರತೆ ವ್ಯವಸ್ಥೆ ನಡೆಸುತ್ತಿದ್ದಾರೆ.

  ಕರಾವಳಿ ಮೇಲೂ ಕಣ್ಣು: ಕರಾವಳಿ ಕಾವಲು ಪಡೆ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಗಳಲ್ಲಿ 9 ಬೋಟ್‌ಗಳಲ್ಲಿ ನಿರಂತರ ಗಸ್ತಿನಲ್ಲಿದ್ದಾರೆ. ಕೋಸ್ಟ್ ಗಾರ್ಡ್ ಕೂಡ ಕಟ್ಟೆಚ್ಚರ ಸ್ಥಿತಿಯಲ್ಲಿದ್ದು, ಸಮುದ್ರ ಮಾರ್ಗದ ಮೇಲೆ ಕಣ್ಣಿರಿಸಿದೆ.

  ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲನೆ ಎಂದಿನಂತೆ ಇರುತ್ತದೆ, ಇದರಲ್ಲಿ ವಿಶೇಷ ಇಲ್ಲ. ಕೃಷ್ಣಮಠ ಸೇರಿದಂತೆ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳು, ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಯಾವಾಗಲು ತಪಾಸಣೆ, ಪರಿಶೀಲನೆ ನಡೆಸುವಂತೆ ನಡೆಸಲಾಗಿದೆ.
  – ಎನ್.ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ಅಧೀಕ್ಷಕ, ಉಡುಪಿ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts