ಕೆಎಸ್‌ಸಿಎ ಮೈದಾನಕ್ಕೆ ಹೈಟೆಕ್ ಸ್ಪರ್ಶ

ಬೆಳಗಾವಿ: ಆಟೋ ನಗರದ 15.5 ಎಕರೆ ವಿಶಾಲವಾದ ಜಾಗದಲ್ಲಿ ತಲೆ ಎತ್ತಿರುವ ಕೆಎಸ್‌ಸಿಎ ಮೈದಾನ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತಿದೆ. ಇದಕ್ಕೆ ಹೈಟೆಕ್ ಸ್ಪರ್ಶ ಸಿಗುತ್ತಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮೂಡಿಸಿದೆ.

ಕೆಎಸ್‌ಸಿಎ ಮತ್ತು ಬಿಸಿಸಿಐ ರಣಜಿ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ಕೇವಲ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಸಿದರೆ ಸಾಲದು. ಬದಲಾಗಿ ಬೆಳಗಾವಿಯಲ್ಲೂ ಆಯೋಜಿಸಬೇಕೆಂಬ ಬೇಡಿಕೆ ಗಡಿಭಾಗದ ಕ್ರೀಡಾಪ್ರೇಮಿಗಳಿಂದ ಕೇಳಿಬರುತ್ತಿದೆ.

2011ರಲ್ಲೇ ಉದ್ಘಾಟನೆಯಾದ ಮೈದಾನದಲ್ಲಿ ಈವರೆಗೆ ಗುಜರಾತ್-ಪಂಜಾಬ್ ಮತ್ತು ಗುಜರಾತ್-ತಮಿಳನಾಡು ರಾಜ್ಯಗಳ ಮಧ್ಯೆ ರಣಜಿ ಪಂದ್ಯ ನಡೆದಿದೆ. ಭಾರತ ಎ ಮತ್ತು ಬಾಂಗ್ಲಾದೇಶ ಎ ಮಹಿಳಾ ವಿಭಾಗದ ಪಂದ್ಯಗಳು ನಡೆದಿವೆ. ಕೆಎಸ್‌ಸಿಎ ವ್ಯಾಪ್ತಿಯ ಹಲವು ಟೂರ್ನಿಗಳಿಗೆ ಮೈದಾನ ಸಾಕ್ಷಿಯಾಗಿದೆ. ಈ ಮೈದಾನವನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 26 ಕೋಟಿ ರೂ. ವೆಚ್ಚದಲ್ಲಿ ಸ್ಪೋರ್ಟ್ ಸೆಂಟರ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಒಂದೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಈ ಸೆಂಟರ್ ಹೊಸ ವರ್ಷಾರಂಭದ ವೇಳೆಗೆ ಉದ್ಘಾಟನೆಯಾಗುವ ನಿರೀಕ್ಷೆ ಇದೆ.

ಕೆಪಿಎಲ್ ಪಂದ್ಯ ನಡೆಯಲಿ: ಕರ್ನಾಟಕದಲ್ಲಿ ಬೆಂಗಳೂರು ಮಾತ್ರವಲ್ಲದೆ, ಹುಬ್ಬಳ್ಳಿ ಮತ್ತು ಮೈಸೂರಿನಲ್ಲೂ ಕೆಪಿಎಲ್ ಪಂದ್ಯಾವಳಿ ನಡೆಯುತ್ತವೆ. ಇಂಥ ಪಂದ್ಯಗಳು ಬೆಳಗಾವಿಯ ಮೈದಾನದಲ್ಲೂ ನಡೆಯಬೇಕು ಎಂಬ ಬೇಡಿಕೆ ಇಲ್ಲಿನ ಕ್ರಿಕೆಟ್ ಪ್ರೇಮಿಗಳದ್ದು. ಕೆಪಿಎಲ್ ಟೂರ್ನಿ ಹೊನಲು-ಬೆಳಕಿನಲ್ಲಿ ನಡೆಯುವ ಕಾರಣ ಫ್ಲಡ್ ಲೈಟ್ ಅಳವಡಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಕೆಎಸ್‌ಸಿಎ ಸದಸ್ಯ ಅವಿನಾಶ ಪೋತದಾರ.

ಸ್ಪೋರ್ಟ್ ಸೆಂಟರ್‌ನಲ್ಲಿ ಏನೇನಿದೆ?

ಸ್ವಿಮ್ಮಿಂಗ್ ಫೂಲ್, ಬ್ಯಾಡ್ಮಿಂಟನ್ ಹಾಲ್, ಸ್ಕ್ವಾಶ್, ಟೇಬಲ್ ಟೆನ್ನಿಸ್, ಜಿಮ್ ಇತ್ಯಾದಿ ಸೌಲಭ್ಯಗಳು ಇಲ್ಲಿರಲಿವೆ. ಅಕಾಡೆಮಿ ಸದಸ್ಯರಿಗಾಗಿ ಕ್ಯಾಂಟೀನ್ ತಲೆ ಎತ್ತಲಿದೆ. ಸೆಂಟರ್ ಪಕ್ಕದಲ್ಲೇ ನ್ಯೂಜಿಲೆಂಡ್ ಮಾದರಿ ನ್ಯಾಚುರಲ್‌ಬಂಡ್ ಮೇಲೆ ಕುಳಿತು ಪ್ರೇಕ್ಷಕರಿಗೆ ಪಂದ್ಯಾವಳಿಗೆ ವೀಕ್ಷಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

(ಇಮಾಮಹುಸೇನ್ ಗೂಡುನವರ)