ನಿವೃತ್ತ ನೌಕರನಿಗೆ ಮಾನಸಿಕ ಕಿರುಕುಳ

ಬಸವನಬಾಗೇವಾಡಿ: ಪಟ್ಟಣದ ಖಾಸಗಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರೊಬ್ಬರಿಗೆ ಬಿಇಒ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಅಶೋಕ ಹಾರಿವಾಳ, ಡಿಎಸ್​ಎಸ್ ಜಿಲ್ಲಾ ಸಂಚಾಲಕ ವೈ.ಎಸ್. ಮ್ಯಾಗೇರಿ, ಟಿಪ್ಪು ಕ್ರಾಂತಿ ಸೇನೆ ತಾಲೂಕು ಅಧ್ಯಕ್ಷ ಖಾಜಾಂಬರ್ ನದಾಫ್ ಮಾತನಾಡಿ, ಕೆಲ ವರ್ಷಗಳಿಂದ ಖಾಸಗಿ ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ಕಾವಲುಗಾರ ಶರಣಪ್ಪ ಹೆಬ್ಬಾಳ ಅವರು ಆರು ತಿಂಗಳ ಹಿಂದೆ ನಿವೃತ್ತರಾಗಿ 25 ವರ್ಷದ ಮುಂಬಡ್ತಿ ವಿಶೇಷ ವೇತನ ನಿಗದಿ ಪಡಿಸಿ ತಮಗೆ ನಿವೃತ್ತಿ ವೇತನಕ್ಕೆ ಅನುಕೂಲ ಕಲ್ಪಿಸಬೇಕೆಂದು ಹಾಗೂ ಶಾಲೆ ಆಡಳಿತ ಮಂಡಳಿ ಕುರಿತಾಗಿ ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂಬ ವಿವರಣೆಯೊಂದಿಗೆ ಅವಶ್ಯಕ ದಾಖಲೆಗಳೊಂದಿಗೆ ಬಿಇಒ ಕಚೇರಿಗೆ ಶಾಲೆ ಸಿಬ್ಬಂದಿ ಅರ್ಜಿ ಸಲ್ಲಿಸಿದಾಗ ಪಿಟಿಆರ್ ಪ್ರತಿ ತರಬೇಕೆಂದು ಬಿಇಒ ಹಿಂಬರಹ ನೀಡಿದ್ದು, ಸರಿಯಾದ ಕ್ರಮವಲ್ಲ ಎಂದರು.

ವ್ಯಾಜ್ಯವಿದ್ದಾಗ ಸಂಬಂಧಪಟ್ಟ ಬಿಇಒ ಅವರು ಪಿಟಿಆರ್ ಕೇಳುವ ಅವಶ್ಯಕತೆ ಇಲ್ಲದಿದ್ದಾಗಲೂ ಅರ್ಜಿ ಮರಳಿಸಿದ್ದಾರೆ. ನಂತರ ಶಾಲೆ ಸಿಬ್ಬಂದಿ ಸೇವಾ ಪುಸ್ತಕ ಸೇರಿದಂತೆ ಇತರೆ ದಾಖಲೆಗಳೊಂದಿಗೆ ಸರ್ಕಾರದೊಂದಿಗೆ ಪುನಃ ಅರ್ಜಿ ಸಲ್ಲಿಸಿದಾಗ, ನಿವೃತ್ತ ನೌಕರರ ಹಾಗೂ ಅವರ ಸಂಬಂಧಿಕರು ಕಚೇರಿಗೆ ತೆರಳಿದಾಗ ಎಲ್ಲ ದಾಖಲೆಗಳೊಂದಿಗೆ ಪರಿಶೀಲಿಸಿ ದಾಖಲೆಗಳು ಸರಿಯಾಗಿದೆ. ಸಮಯಾವಕಾಶ ಕೇಳಿ ನಂತರ ಸೇವಾ ಪುಸ್ತಕ ಇಲ್ಲ ಎಂದು ಶಾಲೆಗೆ ಹಿಂಬರಹ ನೀಡಿದ್ದು, ಅಧಿಕಾರಿ ವರ್ತನೆ ಹಲವು ಸಂಶಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಆಪಾದಿಸಿದರು.

ಸೇವಾ ಪುಸ್ತಕ ಇಲ್ಲವೆಂದಲ್ಲಿ ಅರ್ಜಿ ಸ್ವೀಕರಿಸುವ ಮುಂಚೆ ಪರಿಶೀಲಿಸಿ ಮರಳಿಸಬೇಕಿತ್ತು. ಆದರೆ ಸಮಯ ನೀಡಿ, ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ನಿವೃತ್ತ ನೌಕರ ಹೆಬ್ಬಾಳ ಹಾಗೂ ಅವರ ಸಂಬಂಧಿಕರ ಮುಂದೆ ಕೇಳಿಕೊಂಡು ಒಂದುವರೇ ತಿಂಗಳ ನಂತರ ಸೇವಾ ಪುಸ್ತಕ ಇಲ್ಲ ಎಂದು ಸಬೂಬ ಹೇಳುತ್ತಿರುವುದು ಮೇಲ್ನೋಟಕ್ಕೆ ಅರ್ಜಿ ವಿಲೇವಾರಿಯಲ್ಲಿ ಬಿಇಒ ಹಾಗೂ ಸಿಬ್ಬಂದಿ ಅಡ್ಡ ದಾರಿ ಮೂಲಕ ವ್ಯವಹಾರ ಕುದರಿಸಿಕೊಳ್ಳುವ ದುರುದ್ದೇಶ ಮತ್ತು ಅಧಿಕಾರ ದುರುಪಯೋಗ ಪಡೆದುಕೊಂಡು ನಿವೃತ್ತ ನೌಕರನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಇಒ ಹಾಗೂ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಮಾನಸಿಕ ಕಿರುಕುಳ ನೀಡಿ ಲಾಭ ಗಿಟ್ಟಿಸಿಕೊಳ್ಳುವ ಕಾರ್ಯದಲ್ಲಿ ತಲ್ಲೀನರಾಗಿದ್ದು, ತಕ್ಷಣ ಬಿಇಒ ಅವರನ್ನು ಅಮಾನತುಗೊಳಿಸಿ ಇನ್ನುಳಿದ ಸಿಬ್ಬಂದಿ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಿವೃತ್ತ ನೌಕರ ಶರಣಪ್ಪ ಹೆಬ್ಬಾಳ, ಶ್ರೀಶೈಲ ಹೆಬ್ಬಾಳ, ಸಂತೋಷ ಕೂಡಗಿ, ಸುರೇಶ ಹಾರಿವಾಳ, ಬಸವರಾಜ ನಾಗೂರ, ಮಹೇಶ ಭೋಸಲೆ, ಸುಭಾಷ ಬುರ್ಲಿ, ನರಸು ವಾಲಿಕಾರ, ಸಂತೋಷ ನಾಗೋಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಶಿರಸ್ತೆದಾರ ಶ್ರೀನಿವಾಸ ಕಲಾಲ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು.