ಅಪಾಯದಲ್ಲಿ ತುಂಬೆ ವೆಂಟೆಡ್ ಡ್ಯಾಂ

ಸಂದೀಪ್ ಸಾಲ್ಯಾನ್ ಬಂಟ್ವಾಳ
ಮಂಗಳೂರು ಮಹಾನಗರಕ್ಕೆ ನೀರೊದಗಿಸಲು ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ತುಂಬೆ ವೆಂಟೆಡ್ ಡ್ಯಾಂ ಸನಿಹ ತಡೆಗೋಡೆ ಕುಸಿದು ಬಿದ್ದು ವರ್ಷ ಕಳೆದರೂ ಇನ್ನೂ ಮರು ನಿರ್ಮಾಣ ಕಾಮಗಾರಿ ನಡೆದಿಲ್ಲ. ಪರಿಣಾಮ ಈ ಬಾರಿ ಮತ್ತಷ್ಟು ಕುಸಿತವಾದಲ್ಲಿ ಹೊಸ ಡ್ಯಾಂನ ಜತೆಗೆ ಜನರೇಟರ್ ಕೊಠಡಿ, ಟ್ರಾನ್ಸ್‌ಫಾರ್ಮರ್, ಪಂಪ್‌ಹೌಸ್‌ಗೂ ಅಪಾಯ ಎದುರಾಗುವ ಭೀತಿ ಇದೆ.
ಹೊಸ ಡ್ಯಾಂನ ಒಂದು ಪಾರ್ಶ್ವದಲ್ಲಿ ನದಿಬದಿಯ ಮಣ್ಣಿನ ಗೋಡೆ ಕುಸಿಯದಂತೆ ಕಪ್ಪುಕಲ್ಲಿನಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಳೆದ ಮಳೆಗಾಲದಲ್ಲಿ ಹಳೆಯ ಮತ್ತು ಹೊಸ ಡ್ಯಾಂನ ಮಧ್ಯೆ ಹಾಗೂ ನೀರು ಪೂರೈಸುವ ಪಂಪ್‌ನ ಸ್ಟ್ರೈನರ್ ಇರುವ ಭಾಗದ ತಡಗೋಡೆ ಕುಸಿದು ಬಿದ್ದಿದೆ.

ಈ ಸಂದರ್ಭ ಅರ್ಧಭಾಗದವರೆಗೆ ಮರಳು ತುಂಬಿದ ಗೋಣಿಚೀಲಗಳನ್ನು ಇಟ್ಟು ಮಣ್ಣು ಕುಸಿಯದಂತೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಬೇಸಿಗೆಯಲ್ಲಿ ತಡೆಗೋಡೆ ಕಾಮಗಾರಿ ನಡೆಸುವುದಾಗಿ ಮಹಾನಗರ ಪಾಲಿಕೆ ಹೇಳಿತ್ತು. ಕಾಮಗಾರಿ ನಡೆಸದೆ ನಿರ್ಲಕ್ಷ ತೋರಿದ ಪರಿಣಾಮ ಈ ಮಳೆಗಾಲದಲ್ಲಿ ಉಳಿದ ಭಾಗದ ತಡೆಗೋಡೆ ಹಾಗೂ ಭೂ ಕುಸಿತ ಲಕ್ಷಣ ಗೋಚರಿಸಿದೆ. ಮುಂದಿನ ದಿನಗಳಲ್ಲಿ ನೀರು ಸಂಗ್ರಹಣೆ ವೇಳೆಯೂ ಮಣ್ಣು ಮೆದುಗೊಂಡು ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆ ಇದೆ.

ಕಳೆಪೆ ಕಾಮಗಾರಿ ಅನಾವರಣ: ವರ್ಷಪೂರ್ತಿ ನೀರು ಹರಿಯುವ ಡ್ಯಾಂನ ಕಾಂಕ್ರೀಟ್ ಬೆಡ್‌ಗಳು ಉತ್ಕೃಷ್ಟವಾಗಿರುತ್ತದೆ ಎನ್ನುವ ನಂಬಿಕೆ ಜನಸಾಮಾನ್ಯರದ್ದು. ಆದರೆ ಡ್ಯಾಂನ ಅಸಲಿತನ ಕೆಲವೇ ವರ್ಷದಲ್ಲಿ ಬಯಲಾಗಿದೆ. ಹೊಸ ಡ್ಯಾಂನಲ್ಲಿ ಕೆಲವೆಡೆ ನೀರು ಹರಿದು ಹೋಗುವ ಇಳಿಜಾರು ಪ್ರದೇಶದ ಕಾಂಕ್ರೀಟ್ ಕರಗಿ ಹೋಗಿದ್ದು, ಒಳಭಾಗದ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಳಿದ ಭಾಗದ ಕಾಂಕ್ರೀಟ್ ಕರಗಿ ಹೋಗಬಹುದು. ಇದು ಡ್ಯಾಂನ ಆಧಾರ ಸ್ತಂಭಗಳಿಗೂ ತೊಂದರೆ ಜೊತೆಗೆ ಸಂಗ್ರಹಿಸಿದ ನೀರು ಸೋರಿಕೆಯಾಗಿ ಹೋಗುವ ಅಪಾಯವಿದೆ. ಬೇಸಿಗೆಯಲ್ಲಿ ನೀರಿಲ್ಲ ಎಂದು ಕೊರಗುವ ಮನಪಾ ಡ್ಯಾಂನ ನಿರ್ವಹಣೆಯತ್ತ ಗಮನ ಹರಿಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ತುಂಬೆ ಅಣೆಕಟ್ಟಿನ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಹಣ ಬಿಡುಗಡೆ ಆಗಿಲ್ಲ. ಕೆಲಸ ಆರಂಭಿಸಲು ದೊಡ್ಡ ಮೊತ್ತ ಬೇಕಾಗಬಹದು. ಈಗ ಕಾಮಗಾರಿ ನಡೆಸುವುದು ಕಷ್ಟ. ಮಳೆ ನಿಂತ ಬಳಿಕವಷ್ಟೇ ಕೆಲಸ ಮಾಡಬಹುದು. ನೇರವಾಗಿ ತಡೆಗೋಡೆ ನಿರ್ಮಿಸಿದ ಕಾರಣ ಕುಸಿದು ಬಿದ್ದಿದೆ. ಕೆರೆ ಕಟ್ಟೆಗಳಿಗೆ ತಡೆಗೋಡೆ ನಿರ್ಮಿಸುವ ರೀತಿಯಲ್ಲಿ ಇಳಿಜಾರಾಗಿ ನಿರ್ಮಿಸಬೇಕಾಗಿದೆ.
ಬಿ.ಎಚ್.ನಾರಾಯಣಪ್ಪ, ಮನಪಾ ಆಯುಕ್ತ

Leave a Reply

Your email address will not be published. Required fields are marked *