2 ಲಕ್ಷ ರೂ. ಕೊಡಿಸುವಂತೆ ಪೊಲೀಸರಿಗೆ ದುಂಬಾಲು ಬಿದ್ದ… ಕೆಮ್ಮಿನ ಔಷಧವನ್ನೇ ವಿಷವೆಂದು ಕುಡಿದ…

ಹುಬ್ಬಳ್ಳಿ: ಜನರು ತಮಗೆ ಬರಬೇಕಿರುವ ಹಣವನ್ನು ಪಡೆಯಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ವಸೂಲಾತಿ ಅಸಾಧ್ಯ ಎನಿಸಿದಾಗ ಇನ್ನಿಲ್ಲದ ನಾಟಕ ಆರಂಭಿಸುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನಗೆ ಬರಬೇಕಿದ್ದ 2 ಲಕ್ಷ ರೂ. ವಸೂಲಾತಿ ಅಸಾಧ್ಯ ಎನಿಸಿದಾಗ ಈತನು ಕೂಡ ಹಾಗೆ ಮಾಡಿದ್ದಾನೆ. ಮೊದಲು ಪೊಲೀಸರನ್ನು ಸಂಪರ್ಕಿಸಿರುವ ಈತ, ಸಾಲ ಕೊಡಿಸಿಕೊಡಲು ಅವರಿಗೂ ಸಾಧ್ಯವಾಗಲ್ಲ ಎಂದು ಅನಿಸುತ್ತಲೇ ವಿಷ ಎಂದು ಹೇಳಿ ಕೆಮ್ಮಿನ ಔಷಧ ಕುಡಿದು ಸಾಯುವ ನಾಟಕವಾಡಿದ್ದಾನೆ.

ಲೋಹಿಯಾ ನಗರದ ಪರಶುರಾಮ ಬದ್ಧಿ ಸಾಯುವ ನಾಟಕವಾಡಿದವನು. ಈತ ಸಂತೋಷ್​ ಕಾಟ್ವೆ ಎಂಬಾತನಿಗೆ 2 ಲಕ್ಷ ರೂ. ಸಾಲ ಕೊಟ್ಟಿದ್ದ ಎನ್ನಲಾಗಿದೆ. ಈ ಹಣವನ್ನು ವಸೂಲಿ ಮಾಡಲು ಸಾಕಷ್ಟು ಪ್ರಯತ್ನಿಸಿದ್ದ. ಆದರೆ ಸಾಧ್ಯವಾಗಿರಲಿಲ್ಲ. ಹಾಗಾಗಿ 2 ತಿಂಗಳ ಹಿಂದೆ ಹಣವನ್ನು ಪಡೆಯಲು ಉಪನಗರ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ.

ಪ್ರತಿದಿನವೂ ಠಾಣೆಗೆ ಹೋಗುತ್ತಿದ್ದ ಪರಶುರಾಮ ಹಣ ಕೊಡಿಸುವಂತೆ ಪೊಲೀಸರನ್ನು ಪೀಡಿಸುತ್ತಿದ್ದ. ಅದರಂತೆ ಭಾನುವಾರ ಕೂಡ ಠಾಣೆಗೆ ಹೋಗಿ ಹಣ ಕೊಡಿಸುವಂತೆ ಆಗ್ರಹಿಸಿದ್ದ. ಇದಕ್ಕೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ನ್ಯಾಯ ಕೊಡಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ತನ್ನೊಂದಿಗೆ ತಂದಿದ್ದ ಬಾಟಲಿಯಲ್ಲಿದ್ದ ವಸ್ತುವನ್ನು ಠಾಣೆಯಲ್ಲೇ ಕುಡಿದಿದ್ದ. ತಾನು ಕುಡಿದಿದ್ದು ವಿಷವೆಂದು ಹೇಳಿದ್ದ.

ಇದರಿಂದ ಠಾಣೆಯಲ್ಲಿದ್ದ ಪೊಲೀಸ್​ ಸಿಬ್ಬಂದಿ ವಿಚಲಿತರಾಗಿದ್ದರು. ಪರಶುರಾಮನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದರು. ಕೊನೆಗೆ ಬಾಟಲಿಯಲ್ಲಿದ್ದ ವಸ್ತುವನ್ನು ಪರಿಶೀಲಿಸಿದಾಗ ಅದು ಕೆಮ್ಮಿನ ಔಷಧ ಎಂಬುದು ಖಚಿತವಾಗಿದೆ. ಇದಾಗುತ್ತಲೇ ಪರಶುರಾಮ ತನ್ನ ನಾಟಕವನ್ನು ಕೊನೆ ಮಾಡಿದ್ದಾನೆ. ಆದರೂ ಆತನನ್ನು ಆಸ್ಪತ್ರೆಗೆ ಕರೆದೊಯ್ದಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

Leave a Reply

Your email address will not be published. Required fields are marked *