ಬೆಂಗಳೂರು: ಸಾಮಾನ್ಯರಿಗೂ ಅರ್ಥವಾಗುವಂತೆ ನ್ಯಾಯಾಲಯಗಳ ತೀರ್ಪಗಳನ್ನು ಕನ್ನಡದಲ್ಲೇ ಪ್ರಕಟಿಸಬೇಕು ಎಂಬ ಬಹುವರ್ಷಗಳ ಕೂಗಿಗೆ ಹೈಕೋರ್ಟ್ ಓಗೊಟ್ಟಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲೇ ತೀರ್ಪು ಪ್ರಕಟಿಸುವ ಮೂಲಕ ಹೈಕೋರ್ಟ್ ದಾಖಲೆ ಬರೆದಿದೆ.
ನ್ಯಾ. ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠವು ಗುರುವಾರ ಕನ್ನಡದಲ್ಲೇ ತೀರ್ಪು ನೀಡಿದೆ. ಬುಧವಾರ ಭಾರತ ಭಾಷಾ ದಿನ ಇತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಇಂಥದ್ದೊಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. 2008ರಲ್ಲಿ ರಿಟ್ ಅರ್ಜಿ ವಿಚಾರಣೆ ವೇಳೆ ನ್ಯಾ. ಅರಳಿ ನಾಗರಾಜ್ ಅವರೂ ಕನ್ನಡದಲ್ಲಿಯೇ ತೀರ್ಪು ನೀಡುವ ಮೂಲಕ ಗಮನ ಸೆಳೆದಿದ್ದರು. ಆದರೆ, ಆ ತೀರ್ಪು ಇಂಗ್ಲಿಷ್ ತೀರ್ಪಿನ ತರ್ಜುಮೆಯಾಗಿತ್ತು. ಎರಡನ್ನೂ ಮೂಲ ತೀರ್ಪಗಳೆಂದೇ ಪರಿಗಣಿಸಬೇಕೆಂದು ಆಗ ಹೇಳಿದ್ದರು. ಇದೀಗ ಕನ್ನಡದಲ್ಲೇ ತೀರ್ಪು ಬಂದಿದೆ.
ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದ್ದು, ತೀರ್ಪನ್ನು ಇಂಗ್ಲಿಷ್, ಕನ್ನಡದಲ್ಲಿ ಪ್ರತ್ಯೇಕವಾಗಿ ನ್ಯಾಯಪೀಠ ಬರೆದಿದೆ. ತೀರ್ಪಿನ ಪ್ರಮುಖಾಂಶಗಳನ್ನು ನ್ಯಾ. ದೀಕ್ಷಿತ್ ಕನ್ನಡದಲ್ಲೇ ಓದಿದ್ದಾರೆ. ನಂತರ ನ್ಯಾ. ದೀಕ್ಷಿತ್, ‘ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು’ ಎಂದು ಆಶಿಸಿದ್ದಾರೆ.
‘ಡಿ.11 ಭಾರತ ಭಾಷಾ ದಿನ. ಭಾರತದ ಭಾಷೆಗಳಿಗೆ ಮಾನ್ಯತೆ ನೀಡುವುದು ಅದರ ಉದ್ದೇಶ. ಅದರ ಮರುದಿನ ಕನ್ನಡದಲ್ಲಿ ಆದೇಶ ಮಾಡುತ್ತಿದ್ದೇವೆ. ನಿನ್ನೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನರಾದ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ರಜೆ ಇತ್ತು. ಇಂಗ್ಲಿಷ್, ಕನ್ನಡದಲ್ಲಿ ಪ್ರತ್ಯೇಕವಾಗಿ ನಾವೇ ಎರಡು ಆದೇಶ ಬರೆದಿದ್ದೇವೆ. ಇದು ತರ್ಜುಮೆಯಲ್ಲ. ಕವಿ ರವೀಂದ್ರನಾಥ್ ಟ್ಯಾಗೋರ್ ಹೇಗೆ ಬಂಗಾಳಿ, ಇಂಗ್ಲಿಷ್ನಲ್ಲಿ ಪದ್ಯ ಬರೆಯುತ್ತಿದ್ದರೋ ಹಾಗೆ’ ಎಂದು ನ್ಯಾ. ದೀಕ್ಷಿತ್ ವಿವರಿಸಿದರು.
ಇಂಗ್ಲಿಷ್ ಮಾತ್ರ ಎಂದಿಲ್ಲ!: ಸಂವಿಧಾನದ 348ನೇ ವಿಧಿ ಪ್ರಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನ ಭಾಷೆ ಇಂಗ್ಲಿಷ್ ಮಾತ್ರ ಎಂದು ಹೇಳಿಲ್ಲ. 348(1)ನೇ ವಿಧಿಯಡಿ ಸರ್ಕಾರವು ರಾಷ್ಟ್ರಪತಿಗಳಿಂದ ಅನುಮತಿ ಪಡೆದು ರಾಜ್ಯಪಾಲರ ಮೂಲಕ ಕಾನೂನು ಮಾಡಬಹುದು ಎಂದು ಹೇಳಿದೆ. ಆದರೆ, ಸಂಬಂಧ ಪಟ್ಟವರು ಅದರ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಅವರಾರೂ ನಿರ್ಧಾರ ಕೈಗೊಂಡಿಲ್ಲ. ನಾವು ಕಾಯಲಾಗದು. ಕನ್ನಡದಲ್ಲಿ ತೀರ್ಪು ಬರುವುದು ಆರಂಭವಾಗಬೇಕು. ಅದಕ್ಕಾಗಿಯೇ ನಾವು ಆರಂಭಿಸಿದ್ದೇವೆ ಎಂದು ನ್ಯಾ. ದೀಕ್ಷಿತ್ ಹೇಳಿದರು.
ಮೊದಲು ಇಂಗ್ಲಿಷ್ ನಂತರ ಕನ್ನಡ: ಮೊದಲಿಗೆ ಇಂಗ್ಲಿಷ್ನಲ್ಲಿ ತೀರ್ಪು ಓದಿದ ನ್ಯಾ. ದೀಕ್ಷಿತ್, ನಂತರ ಕನ್ನಡದಲ್ಲಿ ‘ಮೇಲ್ಕಾಣಿಸಿದ ಕಾರಣಗಳಿಂದಾಗಿ ಈ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಏಕಸದಸ್ಯ ನ್ಯಾಯಾಧೀಶರ ಪ್ರಶ್ನಿತ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಲಾಗಿದೆ. ಪ್ರತಿವಾದಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ತತ್ಪರಿಣಾಮ ಟಿಒಎಸ್ ಸಂಖ್ಯೆ 1/2023ರಲ್ಲಿ ಮೇಲ್ಮನವಿದಾರರ ದಾವೆಯನ್ನು ಪುನರು ಜ್ಜೀವನಗೊಳಿಸಲಾಗಿದೆ. ಅದನ್ನು ಕಾನೂನು ರೀತ್ಯಾ ವಿಚಾರಣೆ ಮತ್ತು ವಿಲೇವಾರಿ ಮಾಡಬೇಕಾಗುತ್ತದೆ. ಯಾರೂ ವೆಚ್ಚವನ್ನು ಭರಿಸುವಂತಿಲ್ಲ’ ಎಂದು ಓದಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರೊಬ್ಬರು, ‘ಇದು ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ. ನ್ಯಾಯಪೀಠದ ಈ ತೀರ್ಪು ಇತರ ನ್ಯಾಯಮೂರ್ತಿಗಳಿಗೆ ಉತ್ತಮ ಸಂದೇಶ ರವಾನಿಸಲಿದೆ’ ಎಂದರು. ‘ಹೌದು, ಸಾಮಾನ್ಯ ಜನರಿಗೆ ಅರ್ಥವಾಗಬೇಕು. ಇಂಗ್ಲಿಷ್ ಅಥವಾ ಅವರಿಗೆ ತಿಳಿಯದ ಭಾಷೆಯಲ್ಲಿ ಹೇಳಿದರೆ ಆಗದು. ನಾವು ನಮ್ಮ ಕೆಲಸ ಮಾಡಿದ್ದೇವೆ’ ಎಂದು ನ್ಯಾ. ದೀಕ್ಷಿತ್ ಹೇಳಿದರು.
ಹೊಸ ಟ್ರೆಂಡ್ ಸೆಟ್: ‘ಈಗ ಎಲ್ಲ ತೀರ್ಪಗಳನ್ನು ಇಂಗ್ಲಿಷ್ನಲ್ಲಿ ನೀಡುತ್ತಿದ್ದೇವೆ. ಜನಸಾಮಾನ್ಯರಿಗೆ ಅರ್ಥವಾಗುವುದು ಹೇಗೆ? ಇಂಗ್ಲೆಂಡ್ನಲ್ಲಿ 1730ರವರೆಗೆ ಲ್ಯಾಟಿನ್ ಭಾಷೆಯಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತಿತ್ತು. ಹೀಗಾಗಿ, ಇಂಗ್ಲೆಂಡ್ ನ್ಯಾಯಾಲಯದ ಆದೇಶ/ ತೀರ್ಪು ಸ್ಥಳೀಯ ಭಾಷೆಯಲ್ಲಿ ನೀಡಬೇಕೆಂದು ಶಾಸನ ರೂಪಿಸಿ, 1730ರಿಂದ ಈವರೆಗೆ ಇಂಗ್ಲಿಷ್ನಲ್ಲೇ ಕಲಾಪ ನಡೆಯುತ್ತಿದೆ. ಆದೇಶದ ಸಕಾರಣಗಳನ್ನು ಒಳಗೊಂಡ ಭಾಗ ತಿಳಿಯಲಿ, ಬಿಡಲಿ. ಆದರೆ, ಆಪರೇಟಿವ್ ಭಾಗವನ್ನಾದರೂ ಕನ್ನಡದಲ್ಲಿ ನೀಡಬೇಕು. ಆಗ ದಾವೆದಾರರಿಗೆ ಅರ್ಥವಾಗುತ್ತದೆ. ಈ ಮೂಲಕ ನಾವು ಹೊಸ ಟ್ರೆಂಡ್ ಸೆಟ್ ಮಾಡಲು ನಿರ್ಧರಿಸಿದ್ದೇವೆ’ ಎಂದು ಪೀಠ ಹೇಳಿದೆ.
Champions Trophy ಸ್ವರೂಪದಲ್ಲಿ ಪ್ರಮುಖ ಬದಲಾವಣೆ? ಭಾರತ-ಪಾಕ್ ವಿವಾದದ ನಡುವೆಯೇ ಕೇಳಿ ಬಂತು ಹೊಸ ವಿಚಾರ
ರಾಮಾಯಣಕ್ಕಾಗಿ ಸಸ್ಯಾಹಾರಿಯಾದ್ರಾ Sai Pallavi? ನಟಿ ನೀಡಿದ ಸ್ಪಷ್ಟನೆ ಹೀಗಿದೆ