More

    ಮರಗಣತಿ ಆರಂಭಿಸದ್ದಕ್ಕೆ ಚಾಟಿ; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ, ಪ್ರಮಾಣಪತ್ರ ಸಲ್ಲಿಸಲು ತಾಕೀತು

    ಬೆಂಗಳೂರು:  ರಾಜಧಾನಿಯಲ್ಲಿ ಮರಗಳ ಗಣತಿ ಕಾರ್ಯ ನಡೆಸುವ ಸಂಬಂಧ ನೀಡಿರುವ ಆದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಹಾಗೂ ಕೋರ್ಟ್ ನೀಡಿದ್ದ ಗಡುವು ಮುಗಿದರೂ ಮರಗಳ ಗಣತಿ ಆರಂಭಿಸದ ಬಿಬಿಎಂಪಿ ಹಾಗೂ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

    ದತ್ತಾತ್ರೇಯ ಟಿ. ದೇವರೆ ಮತ್ತು ಬೆಂಗಳೂರು ಎನ್ವಿರಾನ್​ವೆುಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿತು. ಮರಗಳ ಗಣತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಹಲವು ತಪ್ಪುಗಳಿವೆ. ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿರುವ ಮರಗಳನ್ನು ಮಾತ್ರ ಎಣಿಕೆ ಮಾಡಲಾಗುವುದು.

    ಖಾಸಗಿ ಜಾಗ ಮತ್ತು ಸ್ವತ್ತಿನಲ್ಲಿರುವ ಮರಗಳನ್ನು ಗಣತಿಗೆ ಪರಿಗಣಿಸಲಾಗು ವುದಿಲ್ಲ ಎಂದು ಹೇಳಲಾಗಿದೆ. ಇದು ಮರಗಳ ಸಂರಕ್ಷಣೆ ಕಾಯ್ದೆ ಹಾಗೂ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿದೆ. ಮೇಲಾಗಿ, ಹೈಕೋರ್ಟ್ ನೀಡಿದ್ದ ಗಡುವು ಮೀರಿ 3 ತಿಂಗಳಾದರೂ ಈವರೆಗೆ ಮರಗಳ ಗಣತಿ ಆರಂಭವಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

    ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕರ್ನಾಟಕ ರಾಜ್ಯ ಮರ ಸಂರಕ್ಷಣಾ ಕಾಯ್ದೆ-1976ರ ಸೆಕ್ಷನ್ 7 (ಬಿ) ಅನ್ವಯ ಮರಗಳ ಗಣತಿ ನಡೆಸಬೇಕು. ಎಲ್ಲ ಮರಗಳ ಎಣಿಕೆ ಆಗಬೇಕು ಎಂದು ಕಾಯ್ದೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ. ನ್ಯಾಯಾಲಯವೂ ಈ ಬಗ್ಗೆ ಸರಳವಾಗಿ ಆದೇಶ ಬರೆಸಿದೆ. ಹೀಗಿದ್ದರೂ, ಒಪ್ಪಂದದಲ್ಲಿ ಕೇವಲ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಮತ್ತು ಬೀದಿಗಳಲ್ಲಿರುವ ಮರಗಳ ಗಣತಿ ನಡೆಸಲಾಗುವುದು ಎಂಬ ಅಂಶ ಬಂದಿದ್ದಾದರೂ ಹೇಗೆ ಎಂದು ಪ್ರಶ್ನಿಸಿತು.

    ಇಷ್ಟು ಸರಳ ವಿಚಾರ ಅಧಿಕಾರಿಗಳಿಗೆ ಅರ್ಥ ಆಗಲಿಲ್ಲವೆಂದರೆ ಏನರ್ಥ, ಒಪ್ಪಂದಕ್ಕೆ ಸಹಿ ಮಾಡಿರುವ ಬಿಬಿಎಂಪಿ ಆಯುಕ್ತರು ಮತ್ತು ಮರ ವಿಜ್ಞಾನ ಸಂಸ್ಥೆಯ ಪರ ಸಹಿ ಹಾಕಿರುವ ಅರಣ್ಯ ಸಂರಕ್ಷಣಾಧಿಕಾರಿಗೆ ನ್ಯಾಯಾಲಯದ ಆದೇಶ, ಕಾಯ್ದೆಯ ಬಗ್ಗೆ ಅರಿವಿಲ್ಲವೆ ಎಂದು ಪ್ರಶ್ನಿಸಿತು. ಏನೊಂದನ್ನೂ ತಿಳಿದುಕೊಳ್ಳದೆ ಸಹಿ ಮಾಡಿದ್ದಾರಾ ಎಂದು ತರಾಟೆಗೆ ತೆಗೆದುಕೊಂಡಿತು.

    ಪ್ರಮಾಣಪತ್ರ ಸಲ್ಲಿಸಬೇಕು

    ಮರಗಳ ಗಣತಿ ಸಂಬಂಧ ಕೋರ್ಟ್ ನೀಡಿದ್ದ ಗಡುವು, ಬಿಬಿಎಂಪಿ ಹಾಕಿಕೊಂಡಿದ್ದ ಕಾಲಮಿತಿ ಎಲ್ಲವೂ ಈಗ ಅವಧಿ ಮೀರಿದೆ. ಆದರೂ ಈವರೆಗೆ ಮರ ಗಣತಿ ಆರಂಭವಾಗಿಲ್ಲ. ಇದೆಲ್ಲದರ ಮಧ್ಯೆ, ಕಾಯ್ದೆ ಮತ್ತು ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆಲ್ಲ ಕಾರಣವೇನು, ಎಲ್ಲೆಲ್ಲಿ ತಪ್ಪುಗಳಾಗಿವೆ, ಅದಕ್ಕೆ ಯಾರು ಹೊಣೆ, ತಪ್ಪಿತಸ್ಥರ ವಿರುದ್ಧ ಕೈಗೊಳ್ಳುವ ಕ್ರಮವೇನು ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆಗೆ ನ್ಯಾಯಪೀಠ ತಾಕೀತು ಮಾಡಿತು.

    ಇದೇ ವೇಳೆ, ಈ ವಿಚಾರದಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿತು. ಮರಗಳ ಸಂರಕ್ಷಣೆ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ತಜ್ಞರ ಸಮಿತಿ ನೀಡಿರುವ ಯಾವುದೇ ವರದಿ ಮತ್ತು ಶಿಫಾರಸುಗಳನ್ನು ಮುಂದಿನ ಆದೇಶದವರೆಗೆ ಜಾರಿಗೆ ತರದಂತೆ ಸರ್ಕಾರಕ್ಕೆ ನಿರ್ದೇಶಿಸಿ ಫೆ.11ಕ್ಕೆ ವಿಚಾರಣೆ ಮುಂದೂಡಿತು.

    ಮುಚ್ಚಳಿಕೆ ಸಲ್ಲಿಸಿದ್ದ ಪಾಲಿಕೆ

    ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರಗಳ ಗಣತಿಗೆ ಸಂಬಂಧಿಸಿದಂತೆ 2019ರ ಆ.20ರಂದು ಹೈಕೋರ್ಟ್ ವಿವರವಾದ ಆದೇಶ ಮಾಡಿತ್ತು. ಈ ಮಧ್ಯೆ, 1 ತಿಂಗಳಲ್ಲಿ ಗಣತಿ ಕಾರ್ಯ ಆರಂಭಿಸುವುದಾಗಿ ಅ.10ರಂದು ಬಿಬಿಎಂಪಿ ಹೈಕೋರ್ಟ್​ಗೆ ಮುಚ್ಚಳಿಕೆ ಸಲ್ಲಿಸಿತ್ತು. ಆದರೆ, ಈವರೆಗೆ ಗಣತಿ ಕಾರ್ಯ ಆರಂಭವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts