More

    ಅಪಘಾತಗಳಲ್ಲಿ ಸಂತ್ರಸ್ತರಿಗೆ ಪರಿಹಾರ; ಆಯುಕ್ತರ ಕ್ರಮಕ್ಕೆ ಹೈಕೋರ್ಟ್ ಕಿಡಿ

    ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ನೀಡಿದ್ದ ಆದೇಶ ಪಾಲಿಸುವ ಬದಲಾಗಿ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ರ್ಚಚಿಸಿದ ಪಾಲಿಕೆ ಆಯುಕ್ತರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸಭೆಯಲ್ಲಿ ಭಾಗವಹಿಸಿದ್ದವರ ಹೆಸರು ಮತ್ತು ವಿಳಾಸದ ವಿವರಗಳನ್ನು ಒದಗಿಸುವಂತೆ ತಾಕೀತು ಮಾಡಿದೆ.

    ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 2015ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯಪೀಠ ಸೋಮವಾರ ವಿಚಾರಣೆ ನಡೆಸಿತು.

    ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು, ಈ ಸಂಬಂಧ ಜಾಹೀರಾತು ನೀಡಬೇಕು ಎಂದು 2019ರ ಸೆಪ್ಟೆಂಬರ್​ನಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್​ನಲ್ಲಿ ಬಿಬಿಎಂಪಿ ಪ್ರಶ್ನಿಸಿತ್ತು. ಬಿಬಿಎಂಪಿಯ ಅರ್ಜಿಯನ್ನು 2020ರ ಜ.7ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

    ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿದ ನಂತರವೂ ಹೈಕೋರ್ಟ್ ಆದೇಶ ಜಾರಿ ಮಾಡುವ ಸಂಬಂಧ ಪಾಲಿಕೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕನಿಷ್ಠ ಪಕ್ಷ ನ್ಯಾಯಾಲಯಕ್ಕೆ ಕ್ಷಮೆ ಕೋರುವ ಸೌಜನ್ಯವೂ ಇಲ್ಲ. ನ್ಯಾಯಾಲಯದ ಆದೇಶ ಪಾಲನೆ ಬಿಬಿಎಂಪಿಯ ಕರ್ತವ್ಯವಾಗಿದೆ. ಕೋರ್ಟ್ ಆದೇಶ ಜಾರಿ ಮಾಡದೆ ಸಭೆ ನಡೆಸಿ ರ್ಚಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

    ಹೈಕೋರ್ಟ್ ಆದೇಶ ಧಿಕ್ಕರಿಸಲು ಸಭೆ ನಡೆಸಿ ರ್ಚಚಿಸಿಲ್ಲ. ಬದಲಾಗಿ ಎಲ್ಲ ಚುನಾಯಿತ ಸದಸ್ಯರ ಗಮನಕ್ಕೆ ತರಲು ಮತ್ತು ಆದೇಶ ಜಾರಿಗೆ ಮಾರ್ಗಸೂಚಿ ರಚನೆ ಮಾಡಲು ಆಯುಕ್ತರು ಸಭೆ ನಡೆಸಿದ್ದರು ಎಂದು ಬಿಬಿಎಂಪಿ ಪರ ವಕೀಲರು ಸಮಜಾಯಿಷಿ ನೀಡಿದರು. ಅದನ್ನೊಪ್ಪದ ಪೀಠ, ಕೋರ್ಟ್ ಆದೇಶ ಪಾಲನೆ ಧಿಕ್ಕರಿಸುವ ಉದ್ದೇಶ ನಿಮ್ಮದಲ್ಲ ಎಂದಾದರೆ, ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿದ ಕೂಡಲೇ ಹೈಕೋರ್ಟ್ ಆದೇಶ

    ಜಾರಿಗೆ ತರಬಹುದಿತ್ತು. ಆದರೆ, ಆಯುಕ್ತರು ಆ ಕೆಲಸ ಮಾಡಿಲ್ಲ. ರಾಜಕಾರಣಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ನೀಡುವುದಕ್ಕೆ ಇದು ಸರಿಯಾದ ಸಮಯ ಎಂದು ತೀಕ್ಷ್ಣವಾಗಿ ಹೇಳಿತು.

    ಸಭೆ ನಡೆಸಿದ ಉದ್ದೇಶವೇನು, ಯಾರೆಲ್ಲ ಅದರಲ್ಲಿ ಭಾಗಹಿಸಿದ್ದರು ಎಂಬುದನ್ನು ಅವರ ಹೆಸರು ಮತ್ತು ವಿಳಾಸದೊಂದಿಗೆ ಜ.30ರೊಳಗೆ ವಿವರ ಸಲ್ಲಿಸಬೇಕು. ಅದನ್ನು ಪರಿಗಣಿಸಿ, ಕೋರ್ಟ್ ಆದೇಶ ಉಲ್ಲಂಘಿಸಿದವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗುವುದು. ಈ ಕೆಲಸ ಮಾಡದೆ ಹೋದರೆ ಸಂವಿಧಾನಬದ್ಧವಾಗಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ನಿರ್ವಹಿಸಲು ನ್ಯಾಯಾಲಯ ವಿಫಲವಾದಂತಾಗುತ್ತದೆ ಎಂದು ಹೇಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts