ರಾಷ್ಟ್ರಪತಿ ಭದ್ರತೆಗಾಗಿ ಉಡುಪಿಯಲ್ಲಿ ಖಾಕಿ ಕೋಟೆ, ಇಂದು ಪೇಜಾವರ ಶ್ರೀಗಳನ್ನು ಅಭಿನಂದಿಸಲಿರುವ ರಾಮನಾಥ್ ಕೋವಿಂದ್

ಉಡುಪಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಡಿ.27ರಂದು ಉಡುಪಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಾವಿರಾರು ಪೊಲೀಸರು, ಭದ್ರತಾ ಸಿಬ್ಬಂದಿ ಬೀಡುಬಿಟ್ಟಿದ್ದು, ನಗರ ಅಭೇದ್ಯ ಕೋಟೆಯಾಗಿ ಮಾರ್ಪಟ್ಟಿದೆ. ಆದಿ ಉಡುಪಿಯಿಂದ ಶ್ರೀಕೃಷ್ಣಮಠ ಹಾಗೂ ಮಂಗಳೂರಿನಿಂದ ಉಡುಪಿ ನಡುವೆ ಭದ್ರತಾ ವ್ಯವಸ್ಥೆ ಬಗ್ಗೆ ಬುಧವಾರ ಪೊಲೀಸ್ ಪಡೆಗಳಿಂದ ರಿಹರ್ಸಲ್ ನಡೆಯಿತು.

ಉಡುಪಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ.ನಿಂಬರಗಿ ನೇತೃತ್ವದಲ್ಲಿ ನಡೆದ ರಿಹರ್ಸಲ್‌ನಲ್ಲಿ ರಾಷ್ಟ್ರಪತಿ ಆಗಮಿಸುವ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಝ್ ಕಾರು, 30ಕ್ಕೂ ಹೆಚ್ಚು ಇನ್ನೋವಾ ಕಾರುಗಳು, ಆಂಬ್ಯುಲೆನ್ಸ್, ತುರ್ತುಸೇವೆ ವಾಹನಗಳು ಭಾಗವಹಿಸಿದ್ದವು. ರಾಷ್ಟ್ರಪತಿಗಳು ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಕರಾವಳಿ ಬೈಪಾಸ್, ಬನ್ನಂಜೆ, ಕಲ್ಸಂಕ ವೃತ್ತ ಮಾರ್ಗವಾಗಿ ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಕಾರ್ಯಕ್ರಮ ಮುಗಿಸಿ ಪುನಃ ಕಲ್ಸಂಕ, ಬನ್ನಂಜೆ ಮಾರ್ಗವಾಗಿ ಸರ್ಕಾರಿ ಪ್ರವಾಸಿ ಮಂದಿರಕ್ಕೆ ತೆರಳುವ ಸಾಧ್ಯತೆ ಇದೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ, ರಥಬೀದಿ ಸಂಪರ್ಕಿಸುವ ರಸ್ತೆಗಳಲ್ಲಿ ರಾಷ್ಟ್ರಪತಿ ಉಡುಪಿಯಿಂದ ನಿರ್ಗಮಿಸುವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದ್ದು, ಜೀರೊ ಟ್ರಾಫಿಕ್ ಮಾಡಲಾಗುತ್ತದೆ.

ಭಾರಿ ಭದ್ರತೆ: ಪ್ರಥಮ ಪ್ರಜೆ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಭದ್ರತಾ ಕೋಟೆಯಾಗಿದೆ. ಶ್ರೀಕೃಷ್ಣಮಠ ಮತ್ತು ಪೇಜಾವರ ಮಠಕ್ಕೆ ಬಿಗು ಭದ್ರತೆ ಒದಗಿಸಲಾಗಿದೆ. ರಾಷ್ಟ್ರಪತಿ ಸಂಚರಿಸುವ ರಸ್ತೆಗಳ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ರಾಷ್ಟ್ರಪತಿಗಳ ವಿಶೇಷ ಭದ್ರತಾ ಪಡೆ, ರಾಷ್ಟ್ರೀಯ ಅತಿ ಗಣ್ಯ ಭದ್ರತಾ ವಿಭಾಗ, ಕೇಂದ್ರೀಯ ಗುಪ್ತಚರ ಸಂಸ್ಥೆಗಳು ನಗರದಲ್ಲಿ ಹದ್ದಿನ ಕಣ್ಣಿಟ್ಟಿವೆ. ವಿಶೇಷ ಭದ್ರತೆ ವ್ಯವಸ್ಥೆಗಳನ್ನು ಮೇಲಿಂದ ಮೇಲೆ ಪರಿಶೀಲನೆ ನಡೆಸಲಾಗುತ್ತಿದೆ. ನಗರದ ಪ್ರಮುಖ ರಸ್ತೆ ಇಕ್ಕೆಲಗಳಲ್ಲಿ 3-4 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ, ಡಿಎಆರ್, ಸಿವಿಲ್ ಸಹಿತ ಸಾವಿರಕ್ಕೂ ಅಧಿಕ ಮಂದಿ ಪೊಲೀಸರು ಭದ್ರತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

4 ಜಿಲ್ಲೆಯ ಶ್ವಾನದಳ:
ಉಡುಪಿ, ಕಾರವಾರ, ದ.ಕ, ಚಿಕ್ಕಮಗಳೂರಿನ 4 ಶ್ವಾನಗಳ ವಿಶೇಷ ತಂಡ ರಾಷ್ಟ್ರಪತಿಗಳ ಭದ್ರತೆಗೆ ನಿಯೋಜನೆಗೊಂಡಿದೆ. ಬಾಂಬ್ ಪತ್ತೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಉಡುಪಿ ಕ್ಯಾಪ್ಟನ್ ಶ್ವಾನದ ನೇತೃತ್ವದಲ್ಲಿ ಶ್ವಾನಪಡೆಗಳು ಭದ್ರತೆ ನಿರ್ವಹಿಸುತ್ತಿದೆ. ಆದಿ ಉಡುಪಿ ಶ್ರೀಕೃಷ್ಣಮಠ, ಪೇಜಾವರ ಮಠ, ಸರ್ಕಿಟ್ ಹೌಸ್‌ನಲ್ಲಿ ಶ್ವಾನಪಡೆಯಿಂದ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರು ಮತ್ತು ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಎರಡು ತಂಡಗಳು ನಗರದಲ್ಲಿ ಬೀಡುಬಿಟ್ಟಿವೆ.
ನಗರದ ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಪೂರ್ಣ ರಥಬೀದಿಯ ಸುತ್ತ ಹಾಗೂ ರಾಜಾಂಗಣದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಡಿ.26ರ ಮಧ್ಯಾಹ್ನ 12 ಗಂಟೆಯಿಂದ 27ರ ಸಾಯಂಕಾಲ 4 ಗಂಟೆಯವರೆಗೆ ಮುಚ್ಚುವಂತೆ ಹಾಗೂ ಬೆಳಗ್ಗೆ 6ರಿಂದ ಸಾಯಂಕಾಲ 4 ಗಂಟೆವರೆಗೆ ಸಾರ್ವಜನಿಕರಿಗೆ ಕೃಷ್ಣ ಮಠ ಭೇಟಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೃಷ್ಣಮಠದ ಹತ್ತಿರದಲ್ಲಿರುವ ಮುಕುಂದಕೃಪ ಶಾಲೆ ಮತ್ತು ವಿದ್ಯೋದಯ ಕಾಲೇಜಿಗೆ ರಜೆ ನೀಡಲಾಗಿದೆ.

ರಾಷ್ಟ್ರಪತಿಗಳ ಕಾರ್ಯಕ್ರಮ: ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸನ್ಯಾಸತ್ವ ಸ್ವೀಕರಿಸಿ 80 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಡುಪಿಗೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ, ಅಲ್ಲಿಂದ ಉಡುಪಿಗೆ ವಿಶೇಷ ವಾಯುಪಡೆ ಹೆಲಿಕಾಪ್ಟರ್‌ನಲ್ಲಿ 11.45ಕ್ಕೆ ಆಗಮಿಸುವರು. ವಿಶ್ರಾಂತಿಗೆ ಬನ್ನಂಜೆ ಸರ್ಕಿಟ್ ಹೌಸ್ ಅಥವಾ ನೇರ ಶ್ರೀಕೃಷ್ಣಮಠ ರಥಬೀದಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ರಥಬೀದಿಯಲ್ಲಿರುವ ಪೇಜಾವರ ಮಠಕ್ಕೆ ತೆರಳಿ ಸ್ವಾಮೀಜಿಯವರೊಂದಿಗೆ ಉಭಯ ಕುಶಲೋಪರಿ ನಡೆಸಿ ಅಭಿನಂದಿಸಿ ಪ್ರಸಾದ ಸ್ವೀಕರಿಸುವರು. ಬಳಿಕ ಶ್ರೀಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ಪಡೆದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ ಅವರಿಂದ ಮಂತ್ರಾಕ್ಷತೆ ಪಡೆದು ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ನಿರ್ಗಮಿಸಲಿದ್ದಾರೆ.

ಆಂಬುಲೆನ್ಸ್‌ಗೆ ತಡೆ: ರಿಹರ್ಸಲ್ ವೇಳೆ ಕಲ್ಸಂಕ ವೃತ್ತದಲ್ಲಿ ಪೊಲೀಸರು ಆಂಬುಲೆನ್ಸನ್ನೇ ಹಿಂದಕ್ಕೆ ಕಳುಹಿಸಿದ ಘಟನೆ ನಡೆಯಿತು. ಆಂಬುಲೆನ್ಸ್ ಕಡಿಯಾಳಿಗೆ ತೆರಳಿ ಯುಟರ್ನ್ ಪಡೆದುಕೊಂಡು ಕಲ್ಸಂಕಕ್ಕೆ ಬಂದು ಉಡುಪಿ ಕಡೆಗೆ ತೆರಳಿತು. ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಿಟಿ ಬಸ್‌ನಿಲ್ದಾಣ, ಬನ್ನಂಜೆ, ವಾದಿರಾಜ ಮಾರ್ಗದಲ್ಲಿ ವಾಹನ ತಡೆ ಹಿಡಿದು ಗಂಟೆಗಟ್ಟಲೆ ಸಾರ್ವಜನಿಕರನ್ನು ಸತಾಯಿಸಲಾಯಿತು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಿಂದ ಊಟ: ರಾಷ್ಟ್ರಪತಿಗಳು ಮಂಗಳೂರಿನಿಂದ ದೆಹಲಿಗೆ ನಿರ್ಗಮನ ವೇಳೆ ವಿಮಾನದಲ್ಲೇ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಮಂಗಳೂರಿನಲ್ಲಿ ತಯಾರಿ ನಡೆದಿದೆ. ರಾಷ್ಟ್ರಪತಿಗಳ ಅಡುಗೆ ಸಿಬ್ಬಂದಿ ನಗರಕ್ಕೆ ಆಗಮಿಸಿದ್ದು, ಅವರ ಸೂಚನೆಯಂತೆ ಹೊಟೇಲ್ ಓಶಿಯನ್ ಪರ್ಲ್‌ನಲ್ಲಿ ಊಟ ತಯಾರಾಗಲಿದೆ. ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ ಬಳಿಕ ವಿಮಾನ ನಿಲ್ದಾಣಕ್ಕೆ ಊಟ ರವಾನೆಯಾಗಲಿದೆ.

ರಾಷ್ಟ್ರಪತಿಗೆ ಪುಸ್ತಕಗಳ ಭಂಡಾರ ಕೊಡುಗೆ: ಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ 75ಕ್ಕೂ ಧಾರ್ಮಿಕ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ಪರ್ಯಾಯ ಪಲಿಮಾರು ಮಠ ತೀರ್ಮಾನಿಸಿದೆ. ಬುಧವಾರ ಸಂಜೆ 3 ಬಾಕ್ಸ್‌ಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸಿ, ಭದ್ರತಾ ತಪಾಸಣೆಗೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್‌ನಿಂದ ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್‌ನಲ್ಲಿ ಪ್ರಕಟವಾದ ಭಾಗವತ, ಸ್ತ್ರೋತ್ರಗಳು, ಮಹಾಭಾರತ, ಯಕ್ಷಗಾನ ಪ್ರಸಂಗದ ಪುಸ್ತಕಗಳನ್ನು ನೀಡಲಾಗುತ್ತದೆ. ಮಹಾಭಾರತದ ಮೂಲ ಶ್ಲೋಕ, ಕನ್ನಡ ಅರ್ಥ ಸಹಿತ ಸಮಗ್ರ ಸಂಪುಟ ಪ್ರಕಾಶನ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಕನಸಿನ ಯೋಜನೆಯಾಗಿದ್ದು, ಈಗಾಗಲೇ 19 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ ಮಹಾಭಾರತ ಸಂಸ್ಕೃತ ಭಾಷೆಯ 24 ಸಂಪುಟಗಳ ಇ-ಬುಕ್ ಅನ್ನು ರಾಷ್ಟ್ರಪತಿಗಳು ಕೃಷ್ಣ ಮಠದಲ್ಲೇ ಗುರುವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಇವೆರಡನ್ನೂ ರಾಷ್ಟ್ರಪತಿಗಳಿಗೆ ನೀಡಲು ನಿರ್ಧರಿಸಲಾಗಿದೆ.

ಯಾವೆಲ್ಲ ಪುಸ್ತಕಗಳು?: ಹಿಂದಿ ಅವತರಣಿಕೆಯ ಭಾಗವತ ಪ್ರಕಾಶ, ಸ್ತ್ರೋತ್ರ ಪ್ರಸ್ತಾನ, ಹರಿಕಥಾಮೃತಸಾರ, ಪೂರ್ಣಪ್ರಜ್ಞ ವಿಜಯ ಯಕ್ಷಗಾನ ಪ್ರಸಂಗ, ಸಂಸ್ಕೃತ ಅವತರಣಿಕೆಯ ಪ್ರಾಣಾಗ್ನಿ ಸೂಕ್ತ, ಮಹಾಭಾರತ ತಾತ್ಪರ್ಯ ನಿರ್ಣಯ, ವಿಷ್ಣು ಸಹಸ್ರನಾಮ, ಉಪನಿಷತ್ ಚಂದ್ರಿಕಾ, ಸಂಗ್ರಹಾರ್ಥ ಸಂಗ್ರಹ, ವಾಯುಸ್ತುತಿ, ಶತರುದ್ರೀಯಂ, ನ್ಯಾಯಾಮೃತ ಕುಲ್ಯ ಹಾಗೂ ಇಂಗ್ಲಿಷ್ ಅವತರಣಿಕೆಯ ಆಭರಣ, ಭಾಗವತ ಪುಸ್ತಕಗಳ ಜತೆಗೆ ಕನ್ನಡದಲ್ಲಿ ಮುದ್ರಿತವಾಗಿರುವ ರುಕ್ಮಿಣೀಶ ವಿಜಯ, ದ್ವಾರಕಾ ಮಹಾತ್ಮೆೃ, ಉದ್ಧವ ಗೀತಾ, ಬ್ರಹ್ಮಸೂತ್ರ ಭಾಷ್ಯ, ಋಗ್‌ಭಾಷ್ಯ, ಮಂಗಳಾಷ್ಟಕ ಸಹಿತ ಕನ್ನಡದ 50ಕ್ಕೂ ಅಧಿಕ ಪುಸ್ತಕಗಳು ರಾಷ್ಟ್ರಪತಿ ಭವನ ಸೇರಲಿವೆ. ತತ್ವಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ವಂಶೀಕೃಷ್ಣ ಆಚಾರ್ಯ ಅವರು ಪುಸ್ತಕಗಳ ಭಂಡಾರವನ್ನು ರಾಷ್ಟ್ರಪತಿಗಳಿಗೆ ನೀಡಲಿದ್ದಾರೆ. 1.5 ಅಡಿ ಎತ್ತರದ ಬಂಗಾರಲೇಪಿತ ಕಡಗೋಲು ಕೃಷ್ಣನ ಮೂರ್ತಿ ಹಾಗೂ ಸ್ವರ್ಣಗೋಪುರದ ಆಕೃತಿಯನ್ನು ಪರ್ಯಾಯ ಪಲಿಮಾರು ಶ್ರೀಗಳು ದೇಶದ ಪ್ರಥಮ ಪ್ರಜೆಗೆ ನೀಡಿ ಗೌರವಿಸಲಿದ್ದಾರೆ.

ಮಂಗಳೂರಿನಲ್ಲೂ ಭದ್ರತೆ-ಸಿದ್ಧತೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಡುಪಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಶಿಷ್ಟಾಚಾರದ ಪ್ರಕಾರ ಮಂಗಳೂರಿನಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.
ಕದ್ರಿ ಹಿಲ್ಸ್‌ನಲ್ಲಿರುವ ಎರಡು ಸರ್ಕಿಟ್ ಹೌಸ್‌ಗಳನ್ನು ಕಾಯ್ದಿರಿಸಲಾಗಿದ್ದು, ಭದ್ರತಾ ಅಧಿಕಾರಿಗಳು ಸುಪರ್ದಿಗೆ ಪಡೆದಿದ್ದಾರೆ. ತುರ್ತು ಸಂದರ್ಭ ರಾಷ್ಟ್ರಪತಿಯವರಿಗೆ ವಾಸ್ತವ್ಯ ಹೂಡಲು ಅನುಕೂಲವಾಗುವಂತೆ ಹೊಸ ಸರ್ಕಿಟ್ ಹೌಸ್ ಕಾಯ್ದಿರಿಸಲಾಗಿದೆ. ಹಳೆಯ ಸರ್ಕಿಟ್ ಹೌಸ್‌ನಲ್ಲಿ ರಾಷ್ಟ್ರಪತಿ ಕಚೇರಿಯ ಸಿಬ್ಬಂದಿ, ಸಹಾಯಕರು ಮತ್ತು ಭದ್ರತಾ ಅಧಿಕಾರಿಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಷ್ಟ್ರಪತಿಯವರ ಭದ್ರತಾ ಸಿಬ್ಬಂದಿ ಮೂರು ದಿನ ಹಿಂದೆಯೇ ಮಂಗಳೂರಿಗೆ ಆಗಮಿಸಿದ್ದು, ಸರ್ಕಿಟ್ ಹೌಸ್ ಮತ್ತು ವಿಮಾನ ನಿಲ್ದಾಣ ರಸ್ತೆಯನ್ನು ಪರಿಶೀಲಿಸಿದ್ದಾರೆ. ನಗರ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ. ಸರ್ಕಿಟ್ ಹೌಸ್ ಮತ್ತು ವಿಮಾನ ನಿಲ್ದಾಣದಲ್ಲೂ ಹೆಚ್ಚುವರಿ ಬಿಗು ಭದ್ರತೆ ಕಲ್ಪಿಸಲಾಗಿದೆ.
ಪ್ರತಿಕೂಲ ಹವಾಮಾನ ಉಂಟಾಗಿ ರಾಷ್ಟ್ರಪತಿಯವರು ಮಂಗಳೂರು-ಉಡುಪಿ ಮಧ್ಯೆ ರಸ್ತೆ ಮೂಲಕ ಸಂಚರಿಸುವ ಅನಿವಾರ್ಯತೆ ಎದುರಾದರೆ ಪರಿಸ್ಥಿತಿ ನಿಭಾಯಿಸುವ ಬಗ್ಗೆಯೂ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಬುಧವಾರ ವಿಮಾನ ನಿಲ್ದಾಣ ರಸ್ತೆ ಹಾಗೂ ಮಂಗಳೂರು ಉಡುಪಿ ಮಧ್ಯೆ ಪೊಲೀಸ್ ವಾಹನಗಳು ಈ ಬಗ್ಗೆ ರಿಹರ್ಸಲ್ ನಡೆಸಿವೆ. ಭದ್ರತೆಯ ದೃಷ್ಟಿಯಲ್ಲಿ ಅಗತ್ಯವಿರುವ ಎಲ್ಲ ರಸ್ತೆ ಬದಿಗಳಲ್ಲಿ ಬೆಳಗ್ಗೆಯಿಂದಲೇ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಯವರನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಭಾಸ್ಕರ ಕೆ, ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್, ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಎಸ್ಪಿ ಡಾ.ಬಿ.ಆರ್.ರವಿಕಾಂತೇ ಗೌಡ, ಜಿಪಂ ಸಿಇಒ ಡಾ.ಸೆಲ್ವಮಣಿ ಆರ್. ಮುಂತಾದವರು ಸ್ವಾಗತಿಸಲಿದ್ದಾರೆ.

ಶ್ರೀಕೃಷ್ಣಮಠ, ಪೇಜಾವರ ಮಠಕ್ಕೆ ಭೇಟಿ ನೀಡುವ ರಾಷ್ಟ್ರಪತಿಗಳ ವೈಯಕ್ತಿಕ ಒಂದು ಗಂಟೆಯ ಕಾರ್ಯಕ್ರಮ ಇದಾಗಿದೆ. ರಾಷ್ಟ್ರಪತಿ ಜತೆ ರಾಜ್ಯಪಾಲ ವಜುಬಾಯಿ ವಾಲಾ, ನಾಗಾಲೆಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ, ಕೇಂದ್ರ ಸಚಿವೆ ಉಮಾ ಭಾರತಿ, ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಇರುತ್ತಾರೆ.
|ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಡುಪಿ ಜಿಲ್ಲಾಧಿಕಾರಿ