ಮಂಗಳೂರು: ಭಾರತದಲ್ಲೇ ಮಾರಣಾಂತಿಕ ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹು ಸಂಪರ್ಕ ಕೇಂದ್ರಗಳನ್ನು ಹೊಂದಿರುವ ಕರಾವಳಿಯಲ್ಲಿ, ವಿಶೇಷವಾಗಿ ಮಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ವಿ.ವೆಂಕಟೇಶ್ವರ ರಾವ್ ಮಂಗಳವಾರ ಬೆಳಗ್ಗೆ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಕೆಲ ನಿರ್ದೇಶನಗಳನ್ನು ನೀಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಹೆಚ್ಚು ಓಡಾಟಕ್ಕೆ ಅವಕಾಶವಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವಮಂಗಳೂರು ಬಂದರಿನಲ್ಲಿ ಕರೋನಾ ಭೀತಿ ಎದುರಾದ ದಿನದಿಂದ, ಅಂದರೆ ಒಂದು ತಿಂಗಳಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ.
ಮಂಗಳೂರಲ್ಲೂ ಸ್ಕ್ರೀನಿಂಗ್: ಕೊಲ್ಲಿ ರಾಷ್ಟ್ರಗಳು ಹೊರತುಪಡಿಸಿದರೆ ಮಂಗಳೂರಿನಿಂದ ಇತರ ರಾಷ್ಟ್ರಗಳಿಗೆ ನೇರ ವಿಮಾನವಿಲ್ಲ. ಸಂಪರ್ಕ ವಿಮಾನಗಳ ಮೂಲಕ ಮಂಗಳೂರಿನಲ್ಲಿ ಬಂದಿಳಿಯುವ ವಿದೇಶಿ ಪ್ರಯಾಣಿಕರ ಪೂರ್ಣ ತಪಾಸಣೆ ಅವರು ವಿದೇಶದಿಂದ ಮೊದಲು ಬಂದಿಳಿಯುವ ಭಾರತದ ವಿಮಾನ ನಿಲ್ದಾಣದಲ್ಲೇ ಆಗಿರುತ್ತದೆ. ಆದರೂ, ಮಂಗಳೂರಿನಲ್ಲಿ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗುತ್ತಿದೆೆ ಎಂದು ವಿಮಾನ ನಿಲ್ದಾಣ ನಿರ್ದೇಶಕರ ಆಪ್ತ ಸಹಾಯಕ ಹಜೆಲ್ ಡಿಸೋಜ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ನಿರ್ದೇಶಕರ ಅಧೀನದಲ್ಲೇ ಇರುವ ಏರ್‌ಪೋರ್ಟ್ ಹೆಲ್ತ್ ಯುನಿಟ್ ಪ್ರಯಾಣಿಕರಲ್ಲಿ ಸೋಂಕು ಸಾಧ್ಯತೆ ಹಚ್ಚುವ ಜವಾಬ್ದಾರಿ ನಿರ್ವಹಿಸುತ್ತಿದೆ.
ಬಂದರಿನಲ್ಲಿ ವೈದ್ಯಾಧಿಕಾರಿ: ಪಣಂಬೂರು ನವಮಂಗಳೂರು ಬಂದರಿಗೆ ಒಂದು ತಿಂಗಳಲ್ಲಿ ಮೂರು ಪ್ರವಾಸಿ ಹಡಗುಗಳು ಬಂದಿವೆ. ಸರಕು ಹಡಗು ದಿನನಿತ್ಯ ಬರುತ್ತಿದ್ದು, ಎಲ್ಲ ಹಡಗು ಸಿಬ್ಬಂದಿ ಹಾಗೂ ಪ್ರಯಾಣಿಕರಲ್ಲಿ ಸೋಂಕು ಪತ್ತೆಗೆ ನಿರಂತರ ಸ್ಕ್ರೀನಿಂಗ್ ನಡೆಯುತ್ತಿದೆ. ಓರ್ವ ಬಂದರು ಆರೋಗ್ಯ ಅಧಿಕಾರಿ ಹಾಗೂ ನಿವಾಸಿ ವೈದ್ಯಾಧಿಕಾರಿ ಸ್ಥಳದಲ್ಲೇ ಇದ್ದು, ಇವರು ಸ್ಕ್ರೀನಿಂಗ್ ಹಾಗೂ ಅಗತ್ಯ ವೈದ್ಯಕೀಯ ತಪಾಸಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಬಂದರು ಸಾರ್ವಜನಿಕ ಸಂಪರ್ಕ ಅಧಿಕಾರಿ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ.
ದ.ಕ.ಸಜ್ಜು, ಆತಂಕ ಅನಗತ್ಯ: ಮಂಗಳೂರು ವೆನ್ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ 10 ಬೆಡ್‌ಗಳ ಪ್ರತ್ಯೇಕ ವಾರ್ಡೊಂದನ್ನು ಕರೊನಾ ಶಂಕಿತ ರೋಗಿಗಳ ಚಿಕಿತ್ಸೆಗೆ ಕಾದಿರಿಸಲಾಗಿದೆ. ಕರೊನಾ ಸೋಂಕು ಬಗ್ಗೆ ದಕ್ಷಿಣ ಕನ್ನಡದಲ್ಲಿ ಆತಂಕಪಡುವ ಅಗತ್ಯವೇ ಇಲ್ಲ. ಆದರೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ದ.ಕ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ದಿನಂಪ್ರತಿ 500ರಿಂದ 600 ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಈವರೆಗೆ 25ಸಾವಿರ ಮಂದಿಯನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ.
ಸಿಂಧೂ.ಬಿ.ರೂಪೇಶ್ ಜಿಲ್ಲಾಧಿಕಾರಿ, ದ.ಕ.
ವಿದೇಶದಿಂದ ಬಂದವರ ಮೇಲೆ ನಿಗಾ
ಉಡುಪಿ: ಕರೊನಾ ವೈರಸ್ ಸಂಬಂಧಿಸಿ ಜಿಲ್ಲಾ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ವಿದೇಶದಿಂದ ಬಂದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂಥವರ ಮೇಲೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ವಿದೇಶಗಳಿಂದ ಜಿಲ್ಲೆಗೆ ಮರಳುವ ವ್ಯಕ್ತಿಗಳ ಪಟ್ಟಿ, ಸಂಪರ್ಕ, ವಿಳಾಸ ವಿವರವನ್ನು ಒಳಗೊಂಡ ಮಾಹಿತಿ ಬೆಂಗಳೂರು ಆರೋಗ್ಯ ನಿರ್ದೇಶನಾಲಯ ಕಚೇರಿಗೆ ತಲುಪತ್ತದೆ. ಅಲ್ಲಿಂದ ಸಂಬಂಧಪಟ್ಟ ಜಿಲ್ಲಾ ಆರೋಗ್ಯಧಿಕಾರಿ ಕಚೇರಿಗೆ ಮಾಹಿತಿ ರವಾನೆಯಾಗುತ್ತದೆ. ಇತ್ತೀಚೆಗೆ ವಿದೇಶದಿಂದ ಜಿಲ್ಲೆಗೆ ಆಗಮಿಸಿದವರ ಬಗ್ಗೆ ಮಾಹಿತಿ ಆಧರಿಸಿ ನಿಗಾ ಇರಿಸಲಾಗಿದೆ. ಹೊರದೇಶದಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಮಾಹೆ ವಿವಿಯೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಕರೊನಾ ವೈರಸ್ ಸೋಂಕಿತರು ಪತ್ತೆಯಾಗಿಲ್ಲ, ಸಾರ್ವಜನಿಕರು ವದಂತಿಗಳಿಗೆ ಭಯಪಡಬಾರದು ಎಂದು ಅಧಿಕಾರಿಗಳು ಕೋರಿದ್ದಾರೆ.
ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗ ಶಾಲೆಯಲ್ಲಿ ಶಂಕಿತ ರೋಗಿಗಳ ಥ್ರೋಟ್ ಸ್ವಾಬ್‌ಗಳ ಮಾದರಿ ಸಂಗ್ರಹಣೆ, ಪ್ಯಾಕಿಂಗ್ ಮತ್ತು ಸಾಗಾಣಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು, ಶುಚಿತ್ವಕ್ಕೆ ಪ್ರಾಮುಖ್ಯ ನೀಡಲು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಕರಪತ್ರ ಹಂಚುವುದು, ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಸಾಂಕ್ರಾಮಿಕ ರೋಗ ತಡೆ ಮತ್ತು ಮುಂಜಾಗ್ರತಾ ವಹಿಸಲು ವಿಶೇಷವಾಗಿ ಕರೊನಾ ವೈರಸ್‌ಗೆ ಸಂಬಂಧಿಸಿ ಪ್ರತಿವಾರ ಜಿಲ್ಲಾ ಆರೋಗ್ಯಾಧಿಕಾರಿ ಮಟ್ಟದಲ್ಲಿ ಸಭೆ ನಡೆಯುತ್ತಿದೆ.
ಪ್ರತ್ಯೇಕ ವಾರ್ಡ್ ವ್ಯವಸ್ಥೆ: ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಸರ್ವ ಸನ್ನದ್ಧವಾಗಿರಿಸಲಾಗಿದೆ. ಈ ವಾರ್ಡ್‌ಗೆ ಯಾರಿಗೂ ಪ್ರವೇಶ ಇಲ್ಲ. ಈ ವಾರ್ಡ್‌ನಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗಿತ್ತು. ಎಲ್ಲ ವರದಿಗಳು ನೆಗೆಟಿವ್ ಬಂದಿದ್ದವು. ವೈರಸ್ ಪೀಡಿತ ರೋಗಿಗಳನ್ನು ಆರೈಕೆ ಮಾಡಲು ಆಸ್ಪತ್ರೆಯಲ್ಲಿ 5 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಮತ್ತು ವೆಂಟಿಲೇಟರ್ ಸಹಿತ 2 ಐಸಿಯುಗಳ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆ ವೈದ್ಯರೂ, ದಾದಿಯರು ಮುಂಜಾಗ್ರತಾ ಕ್ರಮವಾಗಿ ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‌ಮೆಂಟ್) ಧರಿಸಿ ಚಿಕಿತ್ಸೆ ನೀಡಬೇಕು. ಸೋಂಕು ತಗುಲದಂತೆ ತಯಾರಿಸಲಾದ ಗ್ಲೌಸ್, ಕನ್ನಡಕ, ಮಾಸ್ಕ್, ಕೋಟ್‌ನ್ನು ಒಳಗೊಂಡ ಪರಿಕರ ಇದಾಗಿದೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಎನ್-95 ಮಾಸ್ಕ್ ದಾಸ್ತಾನು ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಗೊಂದಲಗಳಿದ್ದಲ್ಲಿ ಸಂಪರ್ಕಿಸಿ: ಉಡುಪಿ ಜಿಲ್ಲೆಯಲ್ಲಿ ಕರೊನಾ ಬಗ್ಗೆ ಎಲ್ಲಾ ಸಮುದಾಯ ಅರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳ ಫಿಜಿಷಿಯನ್, ತಜ್ಞ ವೈದ್ಯರಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಸಭೆ ನಡೆಸಿ, ಸೂಚನೆ ನೀಡಲಾಗಿದೆ. ವೈರಸ್ ಕುರಿತಂತೆ ಶಂಕೆ, ಸಮಸ್ಯೆ ಇದ್ದಲ್ಲಿ 104 ಅಥವಾ 080-2228541, 22374658, ಜಿಲ್ಲಾ ಸರ್ವೇಕ್ಷಣಾ ಘಟಕ 0820-2525561 ಸಂಪರ್ಕಿಸಲು ಅಧಿಕಾರಿಗಳು ಕೋರಿದ್ದಾರೆ.
ಜಿಲ್ಲೆಯಲ್ಲಿ ಕರೊನಾ ವೈರಸ್ ಮತ್ತು ಇತರೆ ಸಾಂಕ್ರಾಮಿಕ ರೋಗ ತಡೆಗೆ ಸಂಬಂಧಿಸಿ ಮುಂಜಾಗ್ರತಾ ಕ್ರಮ ತೆಗದುಕೊಂಡಿದ್ದೇವೆ. ಅದು ಮುಂದುವರಿದಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಕರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ವಿದೇಶದಿಂದ ಆಗಮಿಸುವರ ಮೇಲೆ ಇಲಾಖೆ ನಿಗಾ ವಹಿಸಿದೆ.
ಡಾ.ಸುಧೀರ್ ಚಂದ್ರ ಸೂಡ ಜಿಲ್ಲಾ ಆರೋಗ್ಯ ಅಧಿಕಾರಿ, ಉಡುಪಿ
ಕಾಸರಗೋಡಿನಲ್ಲಿಯೂ ತೀವ್ರ ನಿಗಾ: ಕೊಲ್ಲಿ ರಾಷ್ಟ್ರಗಳಲ್ಲೂ ಕರೊನಾ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ ಕಚೇರಿ ಹೆಚ್ಚಿನ ನಿಗಾ ಇರಿಸಿದೆ. ವಿದೇಶಗಳಿಂದ ಆಗಮಿಸುವ ಮಂದಿ 14 ದಿನಗಳ ಕಾಲ ಮನೆಗಳಲ್ಲಿ ನಿಗಾದಲ್ಲೇ ಮುಂದುವರಿಯಬೇಕು ಮತ್ತು ಕರೊನಾ ನಿಯಂತ್ರಣ ಘಟಕದೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಸಂಪರ್ಕ ದೂರವಾಣಿ ಸಂಖ್ಯೆ: 9946000493.