ಹಿಡನ್ ಕ್ಯಾಮರಾ ಧರಿಸಲು ಹಿಂದೇಟೇಕೆ?

|ರವಿ ಗೋಸಾವಿ ಬೆಳಗಾವಿ

ಸಂಚಾರ ಪೊಲೀಸರ ರಕ್ಷಣೆ ಮತ್ತು ಪಾರದರ್ಶಕ ನಿಯಮ ಪಾಲನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಚಾರ ನಿರೀಕ್ಷಕರು ಕರ್ತವ್ಯದ ವೇಳೆ ಹಿಡನ್ ಕ್ಯಾಮರಾ ಕಡ್ಡಾಯವಾಗಿ ಬಳಸುವಂತೆ ಸರ್ಕಾರ ಸೂಚಿಸಿದೆ. ಆದರೆ, ಸೂಚನೆ ಪಾಲಿಸದ ಪರಿಣಾಮ ಟ್ರಾಫಿಕ್ ಸಿಬ್ಬಂದಿ ಹಲವು ಆರೋಪಗಳಿಗೆ ಗುರಿಯಾಗುತ್ತಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಆರೋಪಗಳು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಹಿಡನ್ ಕ್ಯಾಮರಾ ಧರಿಸಿದ್ದರೆ ಸ್ಪಷ್ಟವಾಗುತ್ತಿತ್ತು. ಆದರೆ, ಈ ಬಗ್ಗೆ ಸಂಚಾರ ನಿರೀಕ್ಷಕರಲ್ಲಿನ ನಿರ್ಲಕ್ಷೃವೇ ಆರೋಪಗಳಿಗೆ ಆಸ್ಪದ ನೀಡುತ್ತಿದೆ. ದಿನವೂ ಸಾರ್ವಜನಿಕರ ಮೇಲೆ ಕೆಲ ಸಿಬ್ಬಂದಿ ದರ್ಪ ತೋರುತ್ತಲೇ ಇರುತ್ತಾರೆ.

ಇದ್ದೂ ಇಲ್ಲದಂತಾದ ಕ್ಯಾಮರಾ: ಆಯುಕ್ತಾಲಯದ ವ್ಯಾಪ್ತಿಯಲ್ಲಿ ಒಟ್ಟು 14 ಹಿಡನ್ ಕ್ಯಾಮರಾ ನೀಡಲಾಗಿದೆ. ದಕ್ಷಿಣ, ಉತ್ತರ ಸಂಚಾರ ಪೊಲೀಸ್ ಠಾಣೆಗಳ ಎಸ್‌ಐಗಳು ಈ ಕ್ಯಾಮರಾಗಳನ್ನು ತಮ್ಮ ಸಮವಸ್ತ್ರದ ಜತೆಗೆ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎನ್ನುವುದು ಇಲಾಖೆಯ ಸೂಚನೆ. ಆದರೆ, ಸದ್ಯಕ್ಕೆ ಎರಡೂ ಠಾಣೆಗಳಿಂದ ತಲಾ ಇಬ್ಬರು ಮಾತ್ರ ಕ್ಯಾಮರಾ ಧರಿಸುತ್ತಿದ್ದಾರೆ. ಇನ್ನೂ ಹಲವು ಸಬ್‌ಇನ್‌ಸ್ಪೆಕ್ಟರ್‌ಗಳ ಕೊರತೆ ಇದ್ದು, ಅವರು ಮಾತ್ರವೇ ಧರಿಸಬೇಕು ಎಂಬ ನಿಯಮದಿಂದ ಇದ್ದೂ ಇಲ್ಲದಂತಾಗಿದೆ.

ಹಲ್ಲೆ ಸಂದರ್ಭ: ಅನೇಕ ಸನ್ನಿವೇಶಗಳಲ್ಲಿ ಸಿಬ್ಬಂದಿ ಮೇಲೆಯೇ ಸವಾರರು ಹಾಗೂ ಕೆಲ ವಾಹನ ಮಾಲಕರು ಆಕ್ರೋಶ ವ್ಯಕ್ತಪಡಿಸಿ, ತಾಳ್ಮೆ ಕಳೆದುಕೊಂಡು ಹಲ್ಲೆಗೆ ಯತ್ನಿಸುತ್ತಾರೆ. ಇಂತಹದ್ದೊಂದು ಘಟನೆ ಇತ್ತೀಚೆಗಷ್ಟೇ ಚನ್ನಮ್ಮ ವೃತ್ತದಲ್ಲಿ ಜರುಗಿತ್ತು. ಆ ಸಂದರ್ಭದಲ್ಲೂ ಕ್ಯಾಮರಾ ಇಲ್ಲದ್ದರಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸಾಧ್ಯವಾಗಲಿಲ್ಲ.

ವರ್ತನೆ ಬಹಿರಂಗ ಭೀತಿ

ಸಂಚಾರ ಪೊಲೀಸರು, ವಾಹನ ಸವಾರರ ನಡುವಿನ ವಾಗ್ವಾದ, ರಂಪಾಟ ಚಿತ್ರೀಕರಿಸುವ ಸ್ಥಳೀಯರು ಅದನ್ನೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕುತ್ತಾರೆ. ಅಂತಹ ಸಂದರ್ಭದಲ್ಲಿ ಆ ಸಿಬ್ಬಂದಿ ಹತ್ತಿರ ಹಿಡನ್ ಕ್ಯಾಮರಾ ಇದ್ದಿದ್ದರೆ ಯಾರು ಅಸಭ್ಯವಾಗಿ ವರ್ತಿಸಿದ್ದು? ಯಾರದು ಸರಿ-ತಪ್ಪು ಎನ್ನುವುದಕ್ಕೆ ಸಾಕ್ಷೃ ಲಭಿಸುತ್ತಿತ್ತು. ಬಹುತೇಕ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸಂಚಾರ ಸಿಬ್ಬಂದಿ ದಂಡದ ಬದಲು ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಒಪ್ಪದ ಸಾರ್ವಜನಿಕರ ಮೇಲೆ ಪೊಲೀಸರೇ ದರ್ಪ ತೋರಿರುತ್ತಾರೆ. ಹೀಗಾಗಿ ಅವರು ಕ್ಯಾಮರಾ ಧರಿಸದಿರಲು ಕಾರಣ ಎನ್ನುತ್ತಾರೆ ವಕೀಲರಾದ ಎ.ಜಿ. ಕುಲಕರ್ಣಿ.

ಪೊಲೀಸರು ಜನಸ್ನೇಹಿಯಾಗಿ ಹಾಗೂ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ಪಾರದರ್ಶಕತೆಯಿಂದ ಕಾರ್ಯನಿರ್ವಸಬೇಕು ಎಂಬ ಕಾರಣಕ್ಕೆ ಸಬ್‌ಇನ್ಸ್‌ಪೆಕ್ಟರ್‌ಗಳಿಗೆ ಹಿಡನ್ ಕ್ಯಾಮರಾ ನೀಡಲಾಗಿದೆ. ಸಂಚಾರ ವಿಭಾಗದ ಎಲ್ಲ ಪೇದೆಗಳಿಗೂ ನೀಡುವಲ್ಲಿ ಚಿಂತನೆ ನಡೆದಿದೆ. ಶೀಘ್ರ ಈ ಬಗ್ಗೆ ಕ್ರಮ ಜರುಗಿಸಲಾಗುವುದು.
|ಬಿ.ಎಸ್. ಲೋಕೇಶಕುಮಾರ ಪೊಲೀಸ್ ಆಯುಕ್ತ.

Leave a Reply

Your email address will not be published. Required fields are marked *