ಬ್ಯಾಡಗಿ: ಹಳೇ ಪೊಲೀಸ್ ಠಾಣೆ ಪಕ್ಕದ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಆವರಣದ ಸುಮಾರು 2 ಎಕರೆ ವ್ಯಾಪ್ತಿಯಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಸುಮಾರು 50 ಸಾವಿರ ಕ್ಕೂ ಹೆಚ್ಚು ಜನಸಂಖ್ಯೆಯಿರುವ ಪಟ್ಟಣದಲ್ಲಿ ಸಣ್ಣದಾದ ಬಸ್ ನಿಲ್ದಾಣವಿದ್ದು, ಮೆಣಸಿನಕಾಯಿ ಮಾರಾಟಕ್ಕೆ ಇಲ್ಲಿಗೆ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಹೈಟೆಕ್ ಬಸ್ ನಿಲ್ದಾಣಕ್ಕೆ ದಶಕಗಳಿಂದ ಬೇಡಿಕೆಯಿದೆ. ಹೊಸ ಬಸ್ ನಿಲ್ದಾಣ ನಿರ್ಮಾಣದ ಜತೆಗೆ ಹಳೆಯ ಬಸ್ ನಿಲ್ದಾಣ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೇಷ್ಮೆ ಸಹಾಯಧನದಲ್ಲಿ ತಾರತಮ್ಯ: ತಾಲೂಕಿನಲ್ಲಿ 500 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಅಧಿಕಾರಿಗಳು ಸಹಾಯಧನ, ಇತರ ಯೋಜನೆ ಜಾರಿಗೊಳಿಸುವಾಗ ಮುಖಂಡರು ಹಾಗೂ ಕೆಲವರ ಶಿಫಾರಸಿಗೆ ಮಣೆ ಹಾಕುತ್ತಿರುವುದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಸಹಿಸಲ್ಲ. ಅರ್ಹರಿಗೆ ಜೇಷ್ಠತೆ ಆಧಾರದ ಮೇಲೆ ಯೋಜನೆ ಸೌಲಭ್ಯ ತಲುಪಿಸಬೇಕು ಎಂದು ರೇಷ್ಮೆ ಇಲಾಖೆ ವಿಸ್ತರ್ಣಾಧಿಕಾರಿ ಎನ್.ಎ. ಅಂಗಡಿಗೆ ಶಾಸಕರು ಶಿವಣ್ಣನವರ ಖಡಕ್ಕಾಗಿ ಸೂಚಿಸಿದರು.
ಹೂಲಿಹಳ್ಳಿ ಬಳಿ ಮೆಗಾ ಮಾರ್ಕೆಟ್ ಸಿದ್ಧಗೊಂಡಿದ್ದು, ಅಲ್ಲಿ ರೇಷ್ಮೆ ಗೂಡು ಮಾರಾಟ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಜಾಗ ಗುರುತಿಸಿ, ಕಟ್ಟಡಕ್ಕೆ ಮಂಜೂರಾತಿ ಸಿಕ್ಕಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇಷ್ಟರಲ್ಲೆ ಕಾಮಗಾರಿ ಆರಂಭಿಸಲಾಗುವುದು. ಆದರೆ, ಅಧಿಕಾರಿಗಳಿಗೆ ಇದ್ಯಾವುದು ತಿಳಿದಿಲ್ಲವೆಂದರೆ, ಇಲಾಖೆ ಕೆಲಸಗಳಲ್ಲಿ ತಾವು ನಿರ್ಲಕ್ಷ್ಯ ತೋರುತ್ತಿದ್ದೀರಿ ಎಂದೇ ಅರ್ಥ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕೆಲ ಕುಟುಂಬಗಳ ವ್ಯಕ್ತಿಗಳಿಗೆ ಸರ್ಕಾರಿ ನೌಕರಿ ಸಿಕ್ಕ ವೇಳೆ ಬೇರೆಡೆ ಕೆಲಸದಲ್ಲಿರುತ್ತಾರೆ. ಅಂತಹ ಕುಟುಂಬಗಳ ಕಾರ್ಡ್ ರದ್ದು ಮಾಡುವಾಗ ನೌಕರಿ ಸಿಕ್ಕ ದಿನದಿಂದ ದಂಡ ತುಂಬಿಸಿಕೊಳ್ಳಲಾಗುತ್ತಿದೆ. ಆದರೆ, ಮನೆಯ ಯಜಮಾನಿಗೆ ನೋಟಿಸ್ ಜಾರಿಗೊಳಿಸಿ ಮಾನಸಿಕ ಹಿಂಸೆ ನೀಡುವ ಬದಲು, ಕಚೇರಿಗೆ ಕರೆಸಿ ದಂಡಕ್ಕೆ ಸೂಚಿಸಿ. ನಿಯಮ ಪಾಲಿಸದಿದ್ದಲ್ಲಿ ನೋಟಿಸ್ ಇತ್ಯಾದಿ ಅನುಸರಿಸಿ ಎಂದು ಆಹಾರ ನಿರೀಕ್ಷಕ ಎಂ.ಸಿ. ಮೇಗಲಮನಿಗೆ ಶಾಸಕರು ಸೂಚಿಸಿದರು.
ತಪ್ಪು ಮಾಹಿತಿ ಕೊಟ್ಟಿದ್ದಕ್ಕೆ ಗರಂ: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ವಾಲ್ಮೀಕಿ ನಿಗಮದ ಅಧಿಕಾರಿಗಳು ಪ್ರಗತಿ ವರದಿಯಲ್ಲಿ ವಿವಿಧ ಯೋಜನೆಗಳ ಆಯ್ಕೆ ಪಟ್ಟಿಯನ್ನು ಶಾಸಕರು ನೀಡಿಲ್ಲವೆಂದು ನಮೂದಿಸಿದ್ದೀರಿ. ಆಯ್ಕೆ ಪಟ್ಟಿ ನಿಮಗೆ ಕಳುಹಿಸಿದ್ದು, ಅನುಮೋದನೆ ಪತ್ರಕ್ಕೆ ಶಾಸಕರ ಸಹಿ ಮಾಡಿಸಿಕೊಳ್ಳುವುದು ಯಾರ ಕೆಲಸ. ಏನಾದರೂ ಹೇಳುವುದನ್ನು ಬಿಡಿ, ಸಭೆಗೆ ತಪ್ಪು ಮಾಹಿತಿ ನೀಡಬೇಡಿ ಎಂದು ಅಂಬೇಡ್ಕರ್ ನಿಗಮದ ಅಧಿಕಾರಿ ಜಿ.ಆರ್. ಕೃಷ್ಣಮೂರ್ತಿ ಮೇಲೆ ಶಾಸಕರು ಹರಿಹಾಯ್ದರು.
ಮೂರು ತಿಂಗಳಲ್ಲಿ ಡೆಂಘೆ ಪ್ರಕರಣಗಳ ಸಂಖ್ಯೆ 90 ದಾಟಿದೆ. ನಾಲ್ವರು ಮೃತಪಟ್ಟಿದ್ದು, ಒಬ್ಬರಿಗೆ ಡೆಂಘೆ ಖಚಿತವಾಗಿದೆ. ಆರೋಗ್ಯ ಇಲಾಖೆ ಹಾಗೂ ವೈದ್ಯ ಸಿಬ್ಬಂದಿ ಇನ್ನಷ್ಟು ಜಾಗ್ರತೆ ವಹಿಸಬೇಕು. ರೋಗ ಉಲ್ಬಣಿಸದಂತೆ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದಲ್ಲಿ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಫಿರೋಜ್‌ಷಾ ಸೋಮನಕಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್. ತಿಮ್ಮಾರೆಡ್ಡಿ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಹೆಸ್ಕಾಂ ಇಂಜಿನಿಯರ್ ರಾಜು ಅರಳಿ, ಇತರರಿದ್ದರು.