ಬೈರುತ್: ಹಿಜ್ಬುಲ್ಲಾ ಉಗ್ರರ ಭದ್ರಕೋಟೆಯಾಗಿರುವ ಲೆಬನಾನ್ ಆದ್ಯಂತ ಕಳೆದ ಎರಡು ದಿನಗಳಲ್ಲಿ ವಾಕಿ-ಟಾಕಿಗಳು ಮತ್ತು ಪೇಜರ್ಗಳು ದಿಢೀರ್ ಸ್ಪೋಟಗೊಂಡ ಪರಿಣಾಮ ಮೃತರ ಸಂಖ್ಯೆ ಕನಿಷ್ಠ 32ಕ್ಕೆ ಏರಿಕೆ ಕಂಡಿದ್ದು, 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಲೆಬನಾನ್ ನೀಡಿರುವ ಅಂಕಿ-ಅಂಶ ಸುಳ್ಳು. ನಿಜವಾಗಿ ಮೃತರ ಸಂಖ್ಯೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಇಸ್ರೇಲ್ನ ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇಸ್ರೇಲ್ ಮೇಲೆ ಸೇಡು ತೀರಿಸಿಕೊಳ್ಳಲು ಹಿಜ್ಬುಲ್ಲಾ ಸಂಘಟನೆ ಮುಂದಾಗಿದ್ದು, ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಯೂ ಗೋಚರಿಸಿದೆ.
ಈ ಕ್ರಿಮಿನಲ್ ಆಕ್ರಮಣಕ್ಕೆ ಇಸ್ರೇಲ್ ಸಂಪೂರ್ಣ ಹೊಣೆಯಾಗಿದೆ. ಇದಕ್ಕೆ ಸೂಕ್ತ ಪ್ರತೀಕಾರ ತೀರಿಸಿ ಕೊಳ್ಳುವುದಾಗಿ ಹಿಜ್ಬುಲ್ಲಾ ಹೇಳಿದೆ. ಆದರೆ ಸ್ಪೋಟದ ಬಗ್ಗೆ ಇಸ್ರೇಲ್ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಘಟನೆಯಿಂದ ಅಂತರ ಕಾಯ್ದುಕೊಂಡಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಹೆಜ್ಬೊಲ್ಲಾ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನವೂ ಹೆಚ್ಚುತ್ತಿದೆ.
ಸೋಲಾರ್ ಸ್ಪೋಟ: ಪೇಜರ್, ವಾಕಿ-ಟಾಕಿ ಜತೆಗೆ ಬುಧವಾರದಿಂದ ಲೆಬನಾನ್ನಲ್ಲಿ ಸೋಲಾರ್ ಉಪಕರಣ ಗಳು ಕೂಡ ಸ್ಪೋಟಗೊಳ್ಳುತ್ತಿವೆ. ಮನೆ ಮೇಲಿನ ಛಾವಣಿ, ವಿವಿಧ ಸೌರ ವಿದ್ಯುತ್ ಉಪಕರಣಗಳು ದಿಢೀರ್ ಸ್ಫೋಟ ಗೊಳ್ಳುತ್ತಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಘಟನೆಯಲ್ಲಿ ಎಷ್ಟು ಜನರಿಗೆ ಗಾಯವಾಗಿದೆ? ಯಾರಾದರೂ ಮೃತಪಟ್ಟಿದ್ದಾರೆಯೇ? ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಬೇರುತ್ ಪಟ್ಟಣ ಸಹಿತ ಹಲವು ಪ್ರದೇಶಗಳ ಮನೆಗಳಲ್ಲಿ ಸ್ಪೋಟದಿಂದ ಹೊಗೆ ಬರುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇಸ್ರೇಲ್ ಪ್ರಧಾನಿ ಹತ್ಯೆ ಯತ್ನ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಥನ್ಯಾಹು ಸೇರಿ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಇರಾನ್ ಬೆಂಬಲಿತ ದುಷ್ಕರ್ವಿುಗಳು ಹತ್ಯೆಗೆ ಸಂಚು ರೂಪಿಸಿದ್ದು, ಈ ಸಂಚಿನಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಒಬ್ಬನನ್ನು ಬಂಧಿಸಿರುವುದಾಗಿ ಇಸ್ರೇಲ್ ಭದ್ರತಾ ಸಂಸ್ಥೆಗಳು ತಿಳಿಸಿವೆ. ಶಂಕಿತನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಈತ ಇಸ್ರೇಲ್ ಪ್ರಜೆಯಾಗಿದ್ದು ಎರಡು ಬಾರಿ ಇರಾನ್ಗೆ ಭೇಟಿ ನೀಡಿದ್ದ. ಹತ್ಯೆ ನಡೆಸಲು ಈತನಿಗೆ ದೊಡ್ಡ ಮೊತ್ತದ ಹಣ ಪಾವತಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯು ಟರ್ಕಿಯಲ್ಲಿ ಉದ್ಯಮವನ್ನೂ ನಡೆಸುತ್ತಿದ್ದು, ಅಲ್ಲಿಂದಲೇ ಇರಾನ್ ಪ್ರಜೆಗಳೊಂದಿಗೆ ಸಂಪರ್ಕ ಬೆಳೆಸಿದ್ದ.
ಅಮೆರಿಕ ಪ್ರತಿಕ್ರಿಯೆ: ಪರಿಸ್ಥಿತಿ ಇನ್ನಷ್ಟು ಉಲ್ಬಣವಾಗುವುದನ್ನು ನೋಡಲು ನಾವು ಬಯಸುವುದಿಲ್ಲ. ಹೆಚ್ಚುವರಿ ಮಿಲಿಟರಿ ಕಾರ್ಯಾಚರಣೆಗಳ ಮೂಲಕ ಬಿಕ್ಕಟ್ಟು ಪರಿಹಾರ ಆಗುವುದಿಲ್ಲ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ರ್ಕಿಬಿ ಹೇಳಿದ್ದಾರೆ. ಈ ನಡುವೆ, ಲೆಬನಾನ್ನಲ್ಲಿ ನಡೆದ ಪೇಜರ್ ಸ್ಪೋಟಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶುಕ್ರವಾರ ಸಭೆ ಸೇರಲಿದೆ. ಲೆಬನಾನ್ ಘಟನೆ ಗಂಭೀರ ಅಪಾಯವನ್ನು ಸೂಚಿಸುತ್ತವೆ. ಇದನ್ನು ತಪ್ಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕರೆ ನೀಡಿದ್ದಾರೆ.
ವಿಮಾನದಲ್ಲಿ ಪೇಜರ್ ನಿಷೇಧ: ಸ್ಪೋಟದ ಹಿನ್ನೆಲೆಯಲ್ಲಿ ಬೈರುತ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ವಿಮಾನಗಳಲ್ಲಿ ಪೇಜರ್ಗಳು ಮತ್ತು ವಾಕಿ-ಟಾಕಿಗಳನ್ನು ನಿಷೇಧಿಸಿ ಲೆಬನಾನ್ನ ನಾಗರಿಕ ವಿಮಾನಯಾನ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮುಂದಿನ ಸೂಚನೆವರೆಗೆ ವಿಮಾನಗಳಲ್ಲಿ ಪೇಜರ್ಗಳು ಮತ್ತು ವಾಕಿ-ಟಾಕಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಪ್ರಯಾಣಿಕರ ಬಳಿ ಅಂತಹ ಸಾಧನಗಳು ಕಂಡುಬಂದರೆ ಅದನ್ನು ವಶಪಡಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಯುದ್ಧದ ಹೊಸ ಹಂತ: ನಾವು ಯುದ್ಧದ ಹೊಸ ಹಂತವನ್ನು ಪ್ರಾರಂಭದಲ್ಲಿದ್ದೇವೆ. ಇದಕ್ಕೆ ಧೈರ್ಯ, ದೃಢತೆ ಮತ್ತು ಪರಿಶ್ರಮದ ಅಗತ್ಯವಿದೆ ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅಲ್ಲಿನ ಸೇನೆಗೆ ಸಂದೇಶ ನೀಡಿದ್ದಾರೆ. ಇಸ್ರೇಲ್ ಸೈನ್ಯ ಮತ್ತು ಭದ್ರತಾ ಏಜೆನ್ಸಿಗಳ ಕೆಲಸವನ್ನು ಅವರು ಶ್ಲಾಘಿಸಿದರು. ನಮ್ಮ ಕೆಲಸದ ಫಲಿತಾಂಶಗಳು ಬಹಳ ಪ್ರಭಾವಶಾಲಿಯಾಗಿವೆ ಎಂದು ಹೇಳಿದರು. ಆದರೆ ಪೇಜರ್, ವಾಕಿ-ಟಾಕಿ ಸ್ಪೋಟದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.
ಭಾರತಕ್ಕೆ ಚೀನಾ ಆಮದು ಆತಂಕ: ಲೆಬನಾನ್ ಮೇಲೆ ಇಸ್ರೇಲ್ ನಡೆಸಿದೆ ಎನ್ನಲಾದ ಪೇಜರ್ ದಾಳಿಯು ಭಾರತದಲ್ಲೂ ಭದ್ರತಾ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಭಾರತದ ಪ್ರಮುಖ ಶತ್ರು ರಾಷ್ಟ್ರವಾಗಿರುವ ಚೀನಾ ಗೂಢಚಾರಿಕೆ ನಡೆಸಲು ಅನೇಕ ಅತ್ಯಾಧುನಿಕ ಮಾರ್ಗಗಳನ್ನು ಅನ್ವೇಷಣೆ ಮಾಡುತ್ತಿದೆ. ಇತ್ತೀಚೆಗೆ ಚೀನಾ ಬೆಂಬಲಿತ ಹ್ಯಾಕರ್ಗಳು ಭಾರತದ ಅನೇಕ ಮಹತ್ವದ ಡೇಟಾಗಳನ್ನು ಕಳವು ಮಾಡಲು ಯತ್ನಿಸಿದ ಉದಾಹರಣೆ ಇದೆ. ಹೀಗಾಗಿ ಇಸ್ರೇಲ್ ಮಾದರಿಯಲ್ಲೇ ಚೀನಾ ಕೂಡ ಭಾರತದ ಮೇಲೆ ಕಾರ್ಯಾಚರಣೆ ನಡೆಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಚೀನಾವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದ್ದು, ಚೀನಾದ ಆಮದಿನ ಮೇಲಿನ ಅವಲಂಬನೆಯು ಗಣನೀಯವಾಗಿ ಹೆಚ್ಚುತ್ತಲೇ ಇದೆ. 2022ರಲ್ಲಿ 102 ಶತಕೋಟಿ ಡಾಲರ್ ಇದ್ದ ಆಮದು ಪ್ರಮಾಣ 2023ರಲ್ಲಿ 121.97 ಶತಕೋಟಿಗೆ ಏರಿಕೆ ಕಂಡಿದೆ. ಇದು ಭಾರತದ ಹಿತಾಸಕ್ತಿಗೆ ಮಾರಕ ಎಂದೇ ಪರಿಗಣಿಸಲಾಗುತ್ತದೆ.
ಚೀನಾದಿಂದ ಪ್ರಮುಖವಾಗಿ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು, ಯಂತ್ರೋಪಕರಣಗಳು, ಪರಮಾಣು ರಿಯಾಕ್ಟರ್ಗಳು ಮತ್ತು ರಾಸಾಯನಿಕಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಇವು ಭಾರತೀಯ ಕೈಗಾರಿಕೆಗಳಿಗೆ ಅವಶ್ಯಕವಾಗಿದೆ. ಕಳೆದ 15 ವರ್ಷಗಳಲ್ಲಿ ಈ ಆಮದುಗಳ ಮೇಲಿನ ಭಾರತದ ಅವಲಂಬನೆ 21%ರಿಂದ 30%ಕ್ಕೆ ಏರಿದೆ. ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು, ಯಂತ್ರೋಪಕರಣಗಳ ಮೂಲಕ ಭಾರತವನ್ನು ಚೀನಾ ಟಾರ್ಗೆಟ್ ಮಾಡುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ.
ಲೈಂಗಿಕ ಕಿರುಕುಳ ಪ್ರಕರಣ: ನಿರ್ದೇಶಕ ವಿ.ಕೆ ಪ್ರಕಾಶ್ಗೆ ಜಾಮೀನು ಮಂಜೂರು