ಕೇಂದ್ರದಿಂದ ಹೆಚ್ಚುವರಿ ಹೆಸರು ಖರೀದಿ

ಹುಬ್ಬಳ್ಳಿ:  ರಾಜ್ಯದ ರೈತರು ಬೆಳೆದಿರುವ ಹೆಸರು ಕಾಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಕೇಂದ್ರ ಸಿದ್ಧವಿದೆ ಎಂದು ಕೃಷಿ ಸಚಿವ ರಾಧಾಮೋಹನ ಸಿಂಗ್ ಭರವಸೆ ನೀಡಿದ್ದಾರೆ.

ಸಂಸದ ಪ್ರಲ್ಹಾದ ಜೋಶಿ ನೇತೃತ್ವದ ರಾಜ್ಯದ ನಿಯೋಗ ದೆಹಲಿಯ ಕೃಷಿ ಭವನದಲ್ಲಿ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು, ತಕ್ಷಣ ಹೆಚ್ಚುವರಿಯಾಗಿ 14,500 ಟನ್ ಹೆಸರು ಖರೀದಿಗೆ ಅನುಮತಿ ನೀಡಿದರು. ಕರ್ನಾಟಕ ಸರ್ಕಾರ ತನ್ನ ಮೊದಲ ಪ್ರಸ್ತಾವನೆಯಲ್ಲಿ 73 ಸಾವಿರ ಮೆಟ್ರಿಕ್ ಟನ್ ಹೆಸರು ಬೆಳೆ ನಿರೀಕ್ಷಿಸಿದ್ದು, ಅದರಲ್ಲಿ ಈಗಾಗಲೇ 18 ಸಾವಿರ ಮೆಟ್ರಿಕ್ ಟನ್ ಹೆಸರು ಮುಕ್ತ ಮಾರುಕಟ್ಟೆಯಲ್ಲಿ ರೈತರು ಮಾರಾಟ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಅದರನ್ವಯ 23250 ಟನ್ ಎಂಎಸ್​ಪಿ ಅಡಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ನಂತರ ಹೆಸರು ಉತ್ಪಾದನೆ ಹೆಚ್ಚಾಗಿದೆ. ಈಗ 1.38 ಲಕ್ಷ ಟನ್ ಎಂದು ನಮೂದಿಸಿ ಎಂಎಸ್​ಪಿ ಅಡಿ ಖರೀದಿಗೆ ಮರು ಪ್ರಸ್ತಾವನೆ ಸಲ್ಲಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಆದರೂ, ಕೇಂದ್ರ ಸರ್ಕಾರ ಕರ್ನಾಟಕದ ರೈತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಕೇಂದ್ರ ಸಚಿವರು ನಿಯೋಗಕ್ಕೆ ತಿಳಿಸಿದ್ದಾರೆ.

ಈ ಹಿಂದೆ ನೀಡಿದ ಅನುಮತಿಯನ್ವಯ ಖರೀದಿ ಮಾಡದ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಕೇಂದ್ರ ಸಚಿವರು ಅಸಮಾಧಾನ ವ್ಯಕ್ತಪಡಿಸಿ ಈ ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಿ ವಿವರ ಸಲ್ಲಿಸಬೇಕು. ಇನ್ನೂ ಹೆಚ್ಚಿನ ಪ್ರಮಾಣದ ಹೆಸರು ಖರೀದಿಸಲು ಅವಕಾಶ ಕಲ್ಪಿಸಲು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಕಮಿಟಿಗೆ ಅಧಿಕಾರವಿದೆ. ತಮ್ಮಿಂದ ಪುನರ್ ಪ್ರಸ್ತಾವನೆ ಸಲ್ಲಿಕೆಯಾದರೆ ಅದನ್ನೂ ಸಹ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ಜೋಶಿ ಹೇಳಿದ್ದಾರೆ. ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವರಾದ ಬಂಡೆಪ್ಪ ಕಾಶಂಪುರ, ಪ್ರಿಯಾಂಕ ಖರ್ಗೆ, ಸಂಸದ ಭಗವಂತ ಖೂಬಾ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ಇತರರು ಇದ್ದರು.

ದೆಹಲಿಯಲ್ಲಿ ಸಭೆ

ಹೆಸರು ಖರೀದಿಯಲ್ಲಿನ ಗೊಂದಲ ನಿವಾರಣೆಗಾಗಿ ದೆಹಲಿಯಲ್ಲಿ ರಾಜ್ಯದ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸೆ. 27ರಂದು ಸಭೆ ನಡೆಯಲಿದೆ.

ರೈತರಲ್ಲಿ ಆತಂಕ

ಹೆಸರು ಖರೀದಿ ಕೇಂದ್ರಗಳಲ್ಲಿ ಸರ್ಕಾರ ಖರೀದಿ ಪ್ರಕ್ರಿಯೆ ನಡೆಸದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ ಎಂದು ಚಿಂತಕ ಬಿ.ಎಸ್. ದುಂದೂರ ದೂರಿದ್ದಾರೆ.