ಹುತಾತ್ಮ ಯೋಧ ಭೋಜರಾಜಗೆ ವೀರೋಚಿತ ವಿದಾಯ

ಚಿಕ್ಕೋಡಿ : ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ನಿಪ್ಪಾಣಿ ತಾಲೂಕಿನ ಬೂದಿಹಾಳ ಗ್ರಾಮದ ಯೋಧ ಭೋಜರಾಜ ಉರ್ಫ್ ಪ್ರಕಾಶ ಜಾಧವ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ಸ್ವಗ್ರಾಮದಲ್ಲಿ ಗುರುವಾರ ನಡೆಯಿತು. ಕಳೆದ ಮಂಗಳವಾರ ಭಯೋತ್ಪಾದಕರು ಮತ್ತು ಭಾರತೀಯ ಸೈನಿಕರ ನಡುವೆ ಗುಂಡಿನ ಚಕಮಕಿಯಲ್ಲಿ ಭೋಜರಾಜ ಉರ್ಫ್ ಪ್ರಕಾಶ ಜಾಧವ ವೀರಮರಣ ಹೊಂದಿದ್ದರು.

ಬೆಳಗಾವಿಯ ಮರಾಠಾ ಲೈಫ್ ಇನಫೆಂಟ್ರಿ ಮೂಲಕ 2007ರಲ್ಲಿ ಸೈನ್ಯ ಸೇರಿದ ಭೋಜರಾಜಉರ್ಫ್ ಪ್ರಕಾಶ ಜಾಧವ ಕಳೆದ 11 ವರ್ಷಗಳಿಂದ ಸೈನ್ಯದಲ್ಲಿ ನಾನಾ ಕಡೆ ಸೇವೆ ಸಲ್ಲಿಸಿ ಈಚೆಗೆ ಜಮ್ಮುವಿನ ಅನಂತನಾಗ್‌ಗೆ ವರ್ಗಾವಣೆಗೊಂಡಿದ್ದರು. ಯೋಧನ ಪಾರ್ಥಿವ ಶರೀರ ಗುರುವಾರ ದೆಹಲಿಯಿಂದ ಪುಣೆ,ಬೆಳಗಾವಿ ಮಾರ್ಗವಾಗಿ ಸ್ವಗ್ರಾಮಕ್ಕೆ ಆಗಮಿಸಿತು. ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತಾದರೂ ರಸ್ತೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಯುವಕರು ಮತ್ತು ಶಾಲೆಯ ವಿದ್ಯಾರ್ಥಿಗಳು ನಿಂತು ಹುತಾತ್ಮ ಯೋಧನ ಪರ ಜಯೋಷ ಮೊಳಗಿಸಿದರು. ಅಮರ ರಹೇ..ಅಮರ ರಹೇ.. ವೀರ ಜವಾನ್ ಪ್ರಕಾಶ ದಾದಾ ಅಮರ ರಹೇ.. ಜವಾನ್ ಪ್ರಕಾಶ ಜಿಂದಾಬಾದ್.. ಭಾರತ ಮಾತಾಕೀ ಜಯ್ ಜಯ ಘೋಷಗಳು ಮುಗಿಲು ಮುಟ್ಟಿದವು.

ಪಾರ್ಥಿವ ಶರೀರವನ್ನು ಸ್ವಗ್ರಾಮದ ಅವರ ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೊರಟು ಯೋಧನ ಕೃಷಿ ಭೂಮಿ ಇರುವ ಸುಮಾರು 4 ಕಿ.ಮೀ ಅಂತರದವರೆಗೆ ಮೆರವಣಿಗೆ ನಡೆಸಲಾಯಿತು. ಯೋಧನ ಕೃಷಿ ಭೂಮಿಯಲ್ಲಿ ನಿರ್ಮಿಸಿದ ಭವ್ಯ ವೇದಿಕೆಯಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಬೆಳಗಾವಿಯ ಮರಾಠಾ ಲೈಟ್ ಇನಫೆಂಟ್ರಿ ಹಿರಿಯ ಅಧಿಕಾರಿಗಳು ಹಾಗೂ ಯೋಧರು, ಸಾರ್ವಜನಿಕರು , ಕುಟುಂಬಸ್ಥರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಜನ ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಹರಿದು ಬಂದ ಜನಸಾಗರ: ಯೋಧನ ಅಂತಿಮ ದರ್ಶನಕ್ಕೆ ಬೆಳಗ್ಗೆಯಿಂದಲೇ ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ವಿವಿಧೆಡೆಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.

ಯೋಧನ ಕುಟುಂಬಕ್ಕೆ ಪರಿಹಾರ ೋಷಣೆ : ಯೋಧನ ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಎಸ್.ಪಿ.ಬೊಮ್ಮನಹಳ್ಳಿ ಮೃತ ಯೋಧನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ., ಮನೆ ನಿರ್ಮಾಣಕ್ಕೆ 15 ಲಕ್ಷ ರೂ. ಮತ್ತು ಜೀವನೋಪಾಯಕ್ಕೆ 5 ಲಕ್ಷ ಹೀಗೆ ಒಟ್ಟು 45 ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದು ಪ್ರಕಟಿಸಿದರು.

ಕಣ್ಣೀರಿಟ್ಟ ಶಾಸಕಿ: ವೀರಯೋಧನ ಅಂತಿಮ ದರ್ಶನದಲ್ಲಿ ಪಾಲ್ಗೊಂಡ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಯೋಧನ ಪತ್ನಿ ನೀತಾ ಮತ್ತು 3 ತಿಂಗಳ ಮಗು ಶ್ರಾವಣಿ ಹಾಗೂ ಕುಟುಂಬಸ್ಥರನ್ನು ನೋಡಿ ಕಣ್ಣೀರಿಟ್ಟರು. ಬಳಿಕ ಅವರು ಯೋಧನ ಕುಟುಂಬಕ್ಕೆ ಸರ್ಕಾರದ ಪರಿಹಾರ ಕೊಡಿಸಲು ಮತ್ತು ಜೊಲ್ಲೆ ಉದ್ಯೋಗ ಸಮೂಹದಿಂದ ಸಹಾಯ ಹಸ್ತದ ಭರವಸೆ ನೀಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಕಾಕಾಸಾಹೇಬ ಪಾಟೀಲ, ನಿಪ್ಪಾಣಿ ಹಾಲಶುಗರ್ ಚೇರಮನ್ ಚಂದ್ರಕಾಂತ ಕೋಟಿವಾಲೆ, ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ಜಿಲ್ಲಾ ಪಂಚಾಯಿತಿ, ತಾ.ಪಂ. ಸದಸ್ಯರು,ಸಕ್ಕರೆ ಕಾರ್ಖಾನೆಗಳ ನಿರ್ದೇಶಕರು ಒಳಗೊಂಡು ಸಹಸ್ರಾರು ಜನ ಅಂತಿಮ ನಮನ ಸಲ್ಲಿಸಿದರು. ಚಿಕ್ಕೋಡಿ ಎಎಸ್‌ಪಿ ಮಿಥುನಕುಮಾರ್, ಸಿಪಿಐಗಳಾದ ಮಲ್ಲನಗೌಡ ನಾಯ್ಕರ್, ಸತ್ಯಾನಾಯಕ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.