More

    ವೀರರ ಚರಿತ್ರೆ ಎಲ್ಲರಿಗೂ ತಿಳಿಯಲಿ

    ಬೈಲಹೊಂಗಲ: ನಮಗಾಗಿ ತಮ್ಮ ಜೀವ ತ್ಯಾಗ ಮಾಡಿದ ವೀರರ ಜೀವನ ಚರಿತ್ರೆಯನ್ನು ದೇಶದ ಪ್ರತಿಯೊಬ್ಬ ನಾಗರಿಕ ಅರಿತುಕೊಳ್ಳುವುದು ಅವಶ್ಯ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

    ತಾಲೂಕಿನ ಸಂಗೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ- 2020 ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಯಣ್ಣ ಉತ್ಸವವನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತ ಪ್ರತಿವರ್ಷ ಉತ್ಸವ ಆಚರಣೆ ಮಾಡುತ್ತಿರುವುದು ಸಂತಸ ಎಂದರು.

    ಪ್ರವಾಹದಿಂದ ತತ್ತರಿಸಿ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಜೃಂಭಣೆಯಿಂದ ಆಚರಣೆ ಆಗಬೇಕು. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಬಾಂಧವ್ಯದ ಕುರಿತು ದೇಶಾದ್ಯಂತ ಪುಸ್ತಕ ಹೊರತರಬೇಕಾಗಿದೆ ಎಂದರು.

    ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ರಾಯಣ್ಣನ ಇತಿಹಾಸ ಅಜರಾಮರವಾಗುವಂತೆ ಸೈನಿಕ ಶಾಲೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

    ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, 150 ರೂ. ಕೋಟಿ ವೆಚ್ಚದ ಸೈನಿಕ ಶಾಲೆ 2022ಕ್ಕೆ ಪ್ರಾರಂಭವಾಗಲಿದೆ. 47 ರೂ.ಕೋಟಿ ವೆಚ್ಚದ ಬೇವಿನಕೊಪ್ಪ, ಸಂಗೊಳ್ಳಿ ಬ್ರಿಡ್ಜ್ ಕಾಮಗಾರಿ ಶೀಘ್ರ ಪ್ರಾರಂಭಗೊಳ್ಳಲಿದೆ. 2.50 ರೂ.ಕೋಟಿ ವೆಚ್ಚದಲ್ಲಿ ಸಂಗೊಳ್ಳಿ ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ, ವಿವಿಧ ಅಭಿವೃದ್ದಿ ಕಾಮಗಾರಿ ಪ್ರಾರಂಭವಾಗಲಿವೆ ಎಂದರು.

    ಸಂಗೊಳ್ಳಿ ಹಿರೇಮಠದ ಗುರುಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ರಾಯಣ್ಣ ಪ್ರಾಧಿಕಾರದ ಎಚ್.ಮಲ್ಲೇಶಪ್ಪ, ಮೇಜರ್ ಜನರಲ್ ಪ್ರಕಾಶ ಕಲಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಪಂ ಸದಸ್ಯ ಅನಿಲ ಮೇಕಲಮರ್ಡಿ, ತಾಪಂ ಅಧ್ಯಕ್ಷೆ ನೀಲವ್ವ ಫಕೀರನ್ನವರ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ತಾಪಂ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ ಇತರರು ಇದ್ದರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮೇಜರ್ ಜನರಲ್ ಪ್ರಕಾಶ ಕಲಗೌಡ್ರ, ಪತ್ನಿ ಸಂಗೀತಾ ಅವರನ್ನು ಸನ್ಮಾನಿಸಿ ಸಂಗೊಳ್ಳಿ ರಾಯಣ್ಣ-2020 ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶೈಲಾ ಕೊಕ್ಕರಿ, ಬಸವರಾಜ ಕುಪ್ಪಸಗೌಡರ ನಿರೂಪಿಸಿ, ವಂದಿಸಿದರು.

    ಇಂದು ವಿಚಾರ ಸಂಕಿರಣ, ವಿವಿಧ ಸ್ಪರ್ಧೆ ಆಯೋಜನೆ

    ರಾಯಣ್ಣ ಉತ್ಸವ ನಿಮಿತ್ತ ರಾಯಣ್ಣ ಸ್ಮಾರಕ ಭವನದಲ್ಲಿ ಸೋಮವಾರ ಮಧ್ಯಾಹ್ನ 12ಕ್ಕೆ ವಿಚಾರ ಸಂಕಿರಣ ಜರುಗಲಿದೆ. ತಾಪಂ ಅಧ್ಯಕ್ಷೆ ನೀಲವ್ವ ಫಕೀರಣ್ಣವರ ಉದ್ಘಾಟಿಸುವರು. ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸುವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಯಣ್ಣನ ಪಾತ್ರ ಕುರಿತು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರ, ಜನಪದ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ ಕುರಿತು ಧಾರವಾಡ ಜನಪದ ಪರಿಷತ್ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ ಉಪನ್ಯಾಸ ನೀಡುವರು. ಮುಖ್ಯ ಅತಿಥಿಯಾಗಿ ನರಗುಂದ ಸರ್ಕಾರಿ ಕಾಲೇಜು ಪ್ರಾಧ್ಯಾಪಕ ಡಾ. ಎ.ಬಿ. ವಗ್ಗರ ಆಗಮಿಸುವರು. ಮಧ್ಯಾಹ್ನ 12ಕ್ಕೆ ವಾಲಿಬಾಲ್ ಪಂದ್ಯಾವಳಿ ಜರುಗಲಿದೆ. ತಾಪಂ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸುವರು. ಸಂಜೆ 6ರಿಂದ ಭಜನೆ, ತತ್ತ್ವಪದ, ಡೊಳ್ಳಿನ ಹಾಡು, ಸುಗಮ ಸಂಗೀತ, ಭರತನಾಟ್ಯ, ಹಾಸ್ಯ ರಸಮಂಜರಿ, ಕಿರು ಹಾಸ್ಯ ನಾಟಕ ಪ್ರದರ್ಶನ ಜರುಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts