ಇಂಧನ ದರ ಏರಿಕೆ ಮನವರಿಕೆ ಮಾಡಲು ಹೋಗಿ ಟ್ರೋಲ್​​ಗೆ ಗುರಿಯಾದ ಬಿಜೆಪಿ

ನವದೆಹಲಿ: ಗಗನಕ್ಕೇರುತ್ತಿರುವ ಇಂಧನ ದರ ಕುರಿತಾಗಿ ಬಿಸಿ ಬಿಸಿ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಬಿಜೆಪಿ ಬಿಡುಗಡೆ ಮಾಡಿರುವ ದರ ಏರಿಕೆ ಸತ್ಯವನ್ನು ತಿಳಿಸುವ ಗ್ರಾಫಿಕ್ಸ್​ ಮಾಹಿತಿಯೂ ಪಕ್ಷವನ್ನು ಹೊಸ ವಿವಾದಕ್ಕೆ ಸಿಲುಕುವಂತೆ ಮಾಡಿದೆ. ಇದೇ ಅವಕಾಶವನ್ನು ಬಳಸಿಕೊಂಡು ಕಾಂಗ್ರೆಸ್​ ತಮ್ಮದೇ ಗ್ರಾಫಿಕ್​ ಮಾದರಿಯಲ್ಲಿ ಆಡಳಿತ ಪಕ್ಷವನ್ನು ಟ್ರೋಲ್​ ಮಾಡುತ್ತಿದೆ.

ಬಿಜೆಪಿ ತನ್ನ ಅಧಿಕೃತ ಟ್ವಿಟರ್​​ ಖಾತೆಯಲ್ಲಿ ಗ್ರಾಫಿಕ್​ ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ ಕಳೆದ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ, ಹೇಗೆ ಪೆಟ್ರೋಲ್​-ಡೀಸೆಲ್​ ದರ ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ತಿಳಿಸಲಾಗಿದೆ.

ಮೇ 16, 2009 ರಿಂದ ಮೇ 16, 2014ರ ವರೆಗೆ ಪೆಟ್ರೋಲ್ ದರವು ಶೇ. 75 ರಷ್ಟು ಏರಿಕೆಯಾಗಿದೆ ಎಂಬುದನ್ನು ಗ್ರಾಫಿಕ್ಸ್​ ತೋರಿಸುತ್ತಿದ್ದು, ಐದು ವರ್ಷದೊಳಗೆ 40.62 ರೂ. ಇದ್ದ ದರ 71.41 ರೂ.ಗೆ ಮುಟ್ಟಿರುವುದಾಗಿ ತಿಳಿಸಲಾಗಿದೆ.

ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್​ ದರ ಬೆಳವಣಿಗೆ ಶೇ. 13 ಕಡಿಮೆಯಾಗಿದ್ದು, ಪೆಟ್ರೋಲ್​ ದರ 71.41 ರೂ.ನಿಂದ 80.73 ರೂ.ಗೆ ಏರಿಕೆಯಾಗಿದೆ. ಇದು ಕಡಿಮೆ ಪ್ರಮಾಣದ ಏರಿಕೆ ಎಂದು ಬಿಜೆಪಿ ವಾದಿಸಿದೆ.

ಬಿಜೆಪಿಯು ದರ ಏರಿಕೆಯ ಶೇಕಡವಾರು ವ್ಯತ್ಯಾಸವನ್ನು ತಿಳಿಸಲು ಪ್ರಯತ್ನಿಸುತ್ತಿದ್ದರೆ, ನೆಟ್ಟಿಗರು ಸದ್ಯದ ಪರಿಸ್ಥಿತಿಯಲ್ಲಿನ ದರ ಏರಿಕೆಯ ಬಗ್ಗೆ ಉಲ್ಲೇಖಿಸಿ, ಅದನ್ನು 2014ನೇ ವರ್ಷದ ಬೆಲೆಯೊಂದಿಗೆ ಹೋಲಿಕೆ ಮಾಡಿ ಟ್ರೋಲ್​ ಮಾಡುತ್ತಿದ್ದಾರೆ.

ಕಾಂಗ್ರೆಸ್​ ಕೂಡ ಬಿಜೆಪಿ ಟ್ವೀಟ್​ ಅನ್ನು​ ಶೇರ್​ ಮಾಡಿ, ಶೇ. 343 ತೆರಿಗೆಯನ್ನು ಹೆಚ್ಚಳ ಮಾಡಿ ಅದನ್ನು ಮರೆಮಾಚಬೇಕಾದರೆ, ನಾವು ಇದನ್ನು ರೀಟ್ವೀಟ್ ಮಾಡಲೇಬೇಕಲ್ಲವೇ? ಎಂದು ಟೀಕಿಸಿದೆ.​

ಇಂಧನ ದರ ಏರಿಕೆ ಬಗೆಗಿನ ಸರಿಯಾದ ಮಾಹಿತಿ ಎಂದು ಹೇಳಲಾದ ಗ್ರಾಫಿಕ್ಸ್​ ಅನ್ನು ಕಾಂಗ್ರೆಸ್​ ಶೇರ್​ ಮಾಡಿಕೊಂಡಿದೆ. ಇದರಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿನ ವ್ಯತ್ಯಾಸದ ಬಗ್ಗೆಯೂ ತಿಳಿಸಿದ್ದು, ಇದನ್ನು ನಿಮಗೋಸ್ಕರ ಎಂದು ಬಿಜೆಪಿಯ ಕಾಲೆಳೆದಿದೆ.

ಕಾಂಗ್ರೆಸ್​ನ ಕೊನೆಯ ಟ್ವೀಟ್​ನಲ್ಲಿ ಭಾರತದಲ್ಲಿನ ಇಂಧನ ದರ ಹಾಗೂ ಅದೇ ಸಮಯದಲ್ಲಿನ ಕಚ್ಚಾ ತೈಲ ಬೆಲೆ ಮಾಹಿತಿಯನ್ನು ತಿಳಿಸಿದ್ದು, ಭಾರತೀಯರೆ ಉತ್ತಮ ಆರ್ಥಿಕ ವ್ಯವಸ್ಥೆಯ ನಿರ್ವಹಣೆಗೆ ನಾವೇಕೆ ಬೇಕು? ಮತ್ತೆ ಮತ ಹಾಕಿ ನಮ್ಮನ್ನೇಕೆ ಅಧಿಕಾರಕ್ಕೆ ತರಬೇಕು ಎಂಬುದಕ್ಕೆ ಇದು ಉದಾಹರಣೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)