More

    ರಾಜ್ಯದ ದೇಗುಲಗಳಲ್ಲಿ ವೈಕುಂಠ ವೈಭವ: ವೈಕುಂಠ ಏಕಾದಶಿ ಆಚರಣೆ ಕುರಿತ ಕಿರುಚಿತ್ರಣ ಇಲ್ಲಿದೆ…

    ವೈಕುಂಠ ಏಕಾದಶಿ ನಿಮಿತ್ತ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸೋಮವಾರ (ಜ.6) ವೈಕುಂಠಪತಿ ಶ್ರೀನಿವಾಸನ ಆರಾಧನೆ ವಿಜೃಂಭಣೆಯಿಂದ ನಡೆಯಲಿದೆ. ಉಪವಾಸ ವ್ರತಾಚರಣೆ ಈ ದಿನದ ಮಹತ್ವವಾಗಿದೆ. ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುವ ಈ ಹಬ್ಬದಂದು ವೈಕುಂಠ ದ್ವಾರ ತೆರೆದಿರುತ್ತದೆ ಎಂಬುದು ಭಕ್ತರ ನಂಬಿಕೆ. ರಾಜ್ಯದ ಕೆಲ ಪ್ರಮುಖ ದೇವಾಲಯಗಳಲ್ಲಿನ ವೈಕುಂಠ ಏಕಾದಶಿ ಆಚರಣೆ ಕುರಿತ ಕಿರುಚಿತ್ರಣ ಇಲ್ಲಿದೆ.

    ಬೆಂಗಳೂರಲ್ಲಿ ವಿಶೇಷ ರಂಗು

    ಬೆಂಗಳೂರಿನಲ್ಲಿ ಇಸ್ಕಾನ್, ಚಾಮರಾಜಪೇಟೆಯ ಇತಿಹಾಸ ಪ್ರಸಿದ್ಧ ಕೋಟೆ ವೆಂಕಟರಮಣ ದೇವಾಲಯ, ವೈಯಾಲಿಕಾವಲ್ ತಿರುಮಲ ತಿರುಪತಿ ವೆಂಕಟೇಶ್ವರ ಸೇರಿದಂತೆ ವಿವಿಧ ಬಡಾವಣೆಯ ಹಲವು ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಆಚರಣೆ ವಿಜೃಂಭಣೆಯಿಂದ ನೆರವೇರುತ್ತದೆ. ಬೆಳಗ್ಗೆ 5ರಿಂದ ಪೂಜೆ, ದೇವರಿಗೆ ವಿಶೇಷ ಅಲಂಕಾರ. ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ವಿಶೇಷ ದರ್ಶನ; ಸುಪ್ರಭಾತ ಸೇವೆ, ವೈಕುಂಠದ್ವಾರದಲ್ಲಿ ದೇವರ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ.

    ಚಿಕ್ಕತಿರುಪತಿಯಲ್ಲಿ ಸಕಲ ಸಿದ್ಧತೆ

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯಲ್ಲಿರುವ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಿನ್ನೆಲೆ ಪ್ರತಿವರ್ಷ ಕರ್ನಾಟಕ, ಆಂಧ್ರ, ತಮಿಳುನಾಡಿನಿಂದ ಒಂದೂವರೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಕೆಜಿಎಫ್ ತಾಲೂಕಿನ ಬಂಗಾರ ತಿರುಪತಿ (ಗುಟ್ಟಹಳ್ಳಿ)ಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕೋಲಾರ ನಗರದ ದೊಡ್ಡಪೇಟೆಯ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗ್ಗೆ 4ರಿಂದ ರಾತ್ರಿ 12ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ.

    ಒಂಟಿಕೊಪ್ಪಲಿನ ದೇವಸ್ಥಾನ

    1,200 ವರ್ಷಗಳ ಇತಿಹಾಸವುಳ್ಳ ಮೈಸೂರು ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೆಳಗ್ಗೆ 4.30ಕ್ಕೆ ಸುಪ್ರಭಾತ, ಗೋಪೂಜೆ, ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಗುವುದು. ನಂತರ ವೈಕುಂಠ ದ್ವಾರಕ್ಕೆ ಪೂಜೆ ಸಲ್ಲಿಸಿ ಬಾಗಿಲು ತೆರೆಯಲಾಗುವುದು. ಈ ದೇವಸ್ಥಾನದ ಮೂರ್ತಿ ಮೊದಲು ಪಾಂಡವಪುರ ಬಳಿಯ ತಿರುಮಲಸಾಗರ ಛತ್ರದಲ್ಲಿ ಇತ್ತು. ಮೇಲುಕೋಟೆಗೆ ಭೇಟಿ ನೀಡಿದ ಸಂದರ್ಭ ಮಾರ್ಗಮಧ್ಯೆ ತಿರುಮಲಸಾಗರ ಛತ್ರದಲ್ಲಿದ್ದ ದೇವಸ್ಥಾನದಲ್ಲಿ ರಾಮಾನುಜಾ ಚಾರ್ಯರು ಪೂಜೆ ಮಾಡಿದ ಹಿನ್ನೆಲೆಯಲ್ಲಿ ಮಹತ್ವ ಹೊಂದಿದೆ.

    ಉತ್ತರ ದ್ವಾರದಿ ಚನ್ನಕೇಶವನ ದರ್ಶನ

    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಣ್ಣಕ್ಕಿ ಬಾಗೂರು ಗ್ರಾಮದ ಶ್ರೀ ಪ್ರಸನ್ನ ಚನ್ನಕೇಶವಸ್ವಾಮಿ ದೇಗುಲದಲ್ಲಿ ಉತ್ತರ ದಿಕ್ಕಿಗೆ ಸ್ಥಾಪಿಸಿರುವ ಗರುಡಾರೂಢ ಮಹಾಲಕ್ಷ್ಮೀ ಸಮೇತ ವಿಷ್ಣುವಿನ ಉತ್ಸವ ಮೂರ್ತಿಯನ್ನು ವೈಕುಂಠ ದ್ವಾರದ ಮೂಲಕ ಭಕ್ತರು ದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ದೇವಾಲಯದ 11 ಮಹಾದ್ವಾರಗಳ ಮೂಲಕ ಚನ್ನಕೇಶವ ಸ್ವಾಮಿಯ ಮೂಲ ಮೂರ್ತಿಯನ್ನು ದರ್ಶಿಸಿ ನಂತರ ಕೊನೆಯ ಉತ್ತರದ್ವಾರದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಿರುವ ಸ್ವಾಮಿಯ ಭೂ ವೈಕುಂಠ ಸೇವಾ ದರ್ಶನ ಮಾಡಬಹುದು. ದೇಗುಲ 800 ವರ್ಷಗಳ ಇತಿಹಾಸ ಹೊಂದಿದೆ.

    ಭದ್ರಾವತಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ

    ಭದ್ರಾವತಿ ಹಳೇನಗರದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ 1226ರಲ್ಲಿ ಹೊಯ್ಸಳರ ಕಾಲದ ವಿಷ್ಣುವರ್ಧನನ ಮೊಮ್ಮಗ ವೀರನರಸಿಂಹ ಕಟ್ಟಿಸಿದ್ದು. ಸಂಪೂರ್ಣ ಕಲ್ಲಿನಿಂದ ನಿರ್ವಿುಸಲಾದ ಶ್ರೀಚಕ್ರ, ಸುದರ್ಶನ ಚಕ್ರದ ಆಕಾರದಲ್ಲಿರುವ ತ್ರಿಕೂಟಾಚಲವಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಪುರುಷೋತ್ತಮ ಸ್ವಾಮಿಗೆ ಶ್ರೀನಿವಾಸನ ಅಲಂಕಾರ ಮಾಡಲಾಗುತ್ತದೆ. ವೈಕುಂಠ ದರ್ಶನಕ್ಕೆ 9 ದ್ವಾರಗಳನ್ನು ವಿದ್ಯುತ್​ಚಾಲಿತ ಯಂತ್ರೋಪಕರಣಗಳ ಮೂಲಕ ನಿರ್ವಿುಸಿದ್ದು ವಿಶೇಷ.

    ಪಂಢರಪುರದಲ್ಲಿ ಸಂಭ್ರಮ

    ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಢರಪುರದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಶ್ರೀ ವಿಠ್ಠಲ ರುಕ್ಮಿಣಿ ದೇವರಿಗೆ ನಿತ್ಯೋಪಚಾರ ಮಾಡಲಾಗುತ್ತದೆ. ಪ್ರತಿ ಏಕಾದಶಿಯಂದು ನಡೆಯುವ ಕೀರ್ತನೆ ಹಾಗೂ ಭಜನೆ ಕಾರ್ಯಕ್ರಮದೊಂದಿಗೆ ಶ್ರೀ ನಾಮಜಪ ನಡೆಯಲಿದೆ. ಕಾರ್ತಿಕ ಏಕಾದಶಿಯಿಂದ ಚಳಿಗಾಲ ಆರಂಭವಾಗುವುದರಿಂದ ದೇವರಿಗೆ ಏಕಾದಶಿ ನಂತರ ಪ್ರಕ್ಷಲ ಪೂಜೆ. ಬಳಿಕ ಚಳಿಯಿಂದ ರಕ್ಷಣೆಗಾಗಿ ವಿಶೇಷ ಪೋಷಾಕುಗಳನ್ನು ಹಾಕಲಾಗುತ್ತದೆ. ನಿತ್ಯ ಕಾಕಡಾರತಿ ಮುಗಿದ ನಂತರ ದೇವರಿಗೆ ರಜಾಯಿ, ಕಿವಿ ಪಟ್ಟಿ ಹಾಗೂ ಮೈಮೇಲೆ ಶಾಲು ಹೊದಿಸಲಾಗುತ್ತದೆ. ಜತೆಗೆ ಪಾರಂಪರಿಕ ಚಿನ್ನಾಭರಣವನ್ನು ಪರಿದಾನ ಮಾಡಲಾಗುತ್ತದೆ. ಇದೇರೀತಿ ವಸಂತ ಪಂಚಮಿವರೆಗೆ ಅಂದರೆ ಬರುವ ಫೆಬ್ರವರಿವರೆಗೆ ಮುಂದುವರಿಸಲಾಗುತ್ತದೆ. ವರ್ಷದಲ್ಲಿ ಆಚರಿಸಲಾಗುವ 23 ಏಕಾದಶಿಗಳಿಗೂ ಇಲ್ಲಿ ಮಹತ್ವವಿದೆ. ಈ ದಿನ ಪಂಢರಪುರಕ್ಕೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

    ಉಡುಪಿ ಕೃಷ್ಣಮಠದಲ್ಲಿ ವಿಶೇಷ ಪೂಜೆ

    ಮಂಗಳೂರು ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲೋಕಕಲ್ಯಾಣ ಸಂಕಲ್ಪದೊಂದಿಗೆ ಪುಷ್ಪಯಾಗ ಮತ್ತು ಅಷ್ಟಾವಧಾನ ನಡೆಯಲಿದೆ. ಉಡುಪಿ ಕೃಷ್ಣಮಠದಲ್ಲಿ ವಿಶೇಷ ಪೂಜೆ, ಧಾರ್ವಿುಕ ಕಾರ್ಯಕ್ರಮ ನಡೆಯಲಿವೆ. ಪಲಿಮಾರು ಪರ್ಯಾಯ ಕೊನೆ ಏಕಾದಶೀ ಆಚರಣೆ ಆದ್ದರಿಂದ ವಿಶೇಷವಾಗಿರಲಿದೆ. ಉಡುಪಿ ನಗರದ ತೆಂಕಪೇಟೆ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ರಾತ್ರಿ ಪಲ್ಲಕ್ಕಿ ಉತ್ಸವ ನಡೆಯಲಿದೆ.

    ಹಿರೇಮಗಳೂರು ರಾಮಚಂದ್ರಸ್ವಾಮಿ

    ಚಿಕ್ಕಮಗಳೂರು ಸಮೀಪದ ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಕನ್ನಡದಲ್ಲಿ ಪೂಜೆ ನಡೆಯುತ್ತದೆ. ಬೆಳಗ್ಗೆ 5.30ಕ್ಕೆ ದೇವಸ್ಥಾನದ ಶ್ರೀ ವಿಜಯ ಮಂಟಪದಲ್ಲಿ ಶ್ರೀ ಸೀತಾ-ಲಕ್ಷ್ಮಣ-ಆಂಜನೇಯ ಸಹಿತ ಶ್ರೀ ಕೋದಂಡರಾಮನ ಉತ್ಸವಮೂರ್ತಿಗೆ ವಿಶೇಷ ಪೂಜೆ ಜರುಗಿದ ಬಳಿಕ ವೈಕುಂಠದ್ವಾರದ ಮೂಲಕ ಪಲ್ಲಕ್ಕಿಯನ್ನು ತರಲಾಗುವುದು. ಜತೆಯಲ್ಲೇ ಭಕ್ತರೂ ದ್ವಾರ ಪ್ರವೇಶಿಸುತ್ತಾರೆ. ರಾತ್ರಿ 9 ಗಂಟೆಯವರೆಗೆ ಭಕ್ತರ ಪ್ರವೇಶಕ್ಕೆ ತೆರೆದಿರುತ್ತದೆ.

    ವೈಕುಂಠ ಏಕಾದಶಿಯಂದು ಸೂರ್ಯಕಿರಣ ಪಸರಿಸುತ್ತಿದ್ದಂತೆ ದ್ವಾರ ಪ್ರವೇಶವಾಗಬೇಕು. ಬ್ರಾಹ್ಮಿ ಅಂದರೆ ಕಡೆಯ ನಿದ್ರೆ ಎಂದರ್ಥ. ಇಲ್ಲಿ ದೇವರು, ಭಕ್ತರು ಇಬ್ಬರೂ ಏಳುತ್ತಾರೆ. ಕಾಳುಮೆಣಸು, ತುಪ್ಪ ಮತ್ತು ಹೆಸರುಬೇಳೆಯಿಂದ ತಯಾರಿಸಿದ ಪೊಂಗಲ್ ನೈವೇದ್ಯ ನೀಡಲಾಗುವುದು. ಚಳಿಗೆ ದೇಹದ ಉಷ್ಣತೆ ಕಾಪಾಡಿಕೊಂಡು ಲವಲವಿಕೆಯಿಂದ ಇರಬೇಕು ಎನ್ನುವುದನ್ನು ವೈಕುಂಠ ಏಕಾದಶಿ ಮೂಲಕ ಹಿರಿಯರು ಪರಿಚಯಿಸಿದ್ದಾರೆ.

    | ಹಿರೇಮಗಳೂರು ಕಣ್ಣನ್ ಕನ್ನಡ ಪೂಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts