More

  ಶ್ವಾನವೇ ಇಲ್ಲಿಯ ವಾಹನ

  ಕಾಲಭೈರವನ ಫೋಟೋ ನೋಡಿದರೆ ಆತ ನಾಯಿಯ ಮೇಲೆ ಕುಳಿತಿರುವುದನ್ನು ನೀವು ಗಮನಿಸಿರಬಹುದು. ಏಕೆಂದರೆ ನಾಯಿ ಆತನ ವಾಹನ ಎನ್ನುವ ಪ್ರತೀತಿ ಇದೆ. ಅಂತೆಯೇ ಸರಕು, ಸಾಗಣೆ ಮಾಡಲು ಕತ್ತೆ, ಕುದುರೆ, ಎತ್ತಿನ ಗಾಡಿಗಳನ್ನು ವಾಹನವಾಗಿ ಬಳಸುವುದನ್ನೂ ನೀವು ನೋಡಿರುವಿರಿ. ಆದರೆ ಜನರ ಸಂಚಾರಕ್ಕೂ, ಸರಕುಗಳನ್ನು ಸಾಗಣೆ ಮಾಡುವುದಕ್ಕೂ, ಜನರಿಗೆ ದಾರಿ ತೋರುವುದಕ್ಕೂ ನಾಯಿಗಳನ್ನೇ ಬಳಸುವ ಬಗ್ಗೆ ನೀವು ಕೇಳಿದ್ದೀರಾ? ಅದರ ಬಗ್ಗೆ ಇಲ್ಲಿದೆ ಮಾಹಿತಿ

  ಸುತ್ತಲೂ ಹಿಮದ ರಾಶಿ. ಎದುರಿಗೆ ಇರುವವರೂ ಕಾಣಿಸದಷ್ಟು ಹಿಮ ಬೀಳುತ್ತಿರುತ್ತದೆ. ಎತ್ತ ಕಣ್ಣು ಹಾಯಿಸಿದರೂ ಹಿಮವೇ ಹಿಮ. ನಿಮಗೆಲ್ಲೋ ಒಂದು ಜಾಗಕ್ಕೆ ತಲುಪಬೇಕಿರುತ್ತದೆ. ಆದರೆ ದಾರಿ ಕಾಣುವುದು ದೂರದ ಮಾತು, ಯಾವ ಕಡೆ ಹೋಗಬೇಕು ಎನ್ನುವುದೇ ತಿಳಿಯದ ಪರಿಸ್ಥಿತಿ ಈ ಹಿಮಚ್ಛಾದಿತ ಪ್ರದೇಶ. ಅಂಥ ಜಾಗದಲ್ಲಿ ನಿಮ್ಮನ್ನು ಬಿಟ್ಟರೆ ಏನು ಮಾಡುತ್ತೀರಿ?

  ಊಹಿಸಿಕೊಂಡರೇ ಹೆದರಿಕೆಯಾಗುತ್ತದಲ್ಲವೆ? ಹಿಮಾವೃತ ಪ್ರದೇಶಗಳಲ್ಲಿರುವ ಜನರು ಇಂಥ ಪರಿಸ್ಥಿತಿಗೆ ಒಗ್ಗಿಕೊಂಡಿದ್ದರೂ, ಎಷ್ಟೋ ಬಾರಿ ಅವರಿಗೂ ದಾರಿ ಕಾಣದೇ ಕಂಗಾಲಾಗುವುದು ಉಂಟು. ಅನೇಕ ಸಂದರ್ಭಗಳಲ್ಲಿ ಅವರ ಸರಕು, ಸಾಮಗ್ರಿಗಳನ್ನು ಸಾಗಣೆ ಮಾಡಬೇಕಾಗಿರುತ್ತದೆ. ಅಂಥ ಸಂದರ್ಭಗಳಲ್ಲಿ ಅವರಿಗೆ ದಾರಿ ತೋರುವವರು ಯಾರು ಗೊತ್ತೆ? ನಾಯಿಗಳು!

  ಹೌದು. ನಮಗೆ ಬಸ್ಸು, ಕಾರು, ಬೈಕು ವಾಹನಗಳು ಇರುವಂತೆ ಹಿಮದಿಂದ ಕೂಡಿರುವ ಅನೇಕ ಪ್ರದೇಶಗಳಲ್ಲಿನ ಜನರಿಗೆ ವಾಹನಗಳೇ ನಾಯಿಗಳು. ಕತ್ತೆ, ಕುದುರೆ, ಒಂಟೆ, ಎತ್ತು ಇತ್ಯಾದಿ ಮೇಲೆ ಮೂಟೆ ಹೊತ್ತುಕೊಂಡು ಹೋಗುವಂತೆ ಹಿಮ ಪ್ರದೇಶಗಳ ಜನರ ಮೂಟೆಗಳನ್ನು ಹೊತ್ತು ಸಾಗುವುದೂ ಇದೇ ನಾಯಿ. ಅಷ್ಟೇ ಏಕೆ? ನಮ್ಮ ಯೋಧರು ಯುದ್ಧ ಮಾಡುತ್ತಾ ವೀರ ಮರಣವನ್ನಪ್ಪಿದ ಸಂದರ್ಭದಲ್ಲಿ ಹಿಮದೊಳಗೆ ಹೂತು ಹೋಗಿದ್ದರೆ ಅವರನ್ನು ಗುರುತು ಹಿಡಿಯುವುದು ಕೂಡ ಇದೇ ನಾಯಿ. ಹಾಗಿದ್ದರೆ ಅಂಥ ವಿಶೇಷ ನಾಯಿಗಳು ಯಾವುವು?

  ನಾಯಿಗಳ ವಾಹನಕ್ಕೆ ಇಂಗ್ಲಿಷ್​ನಲ್ಲಿ ಸ್ಲೆಡ್ ಡಾಗ್ ಎನ್ನುತ್ತಾರೆ. ಅಲಾಸ್ಕನ್ ಮಾಲಾಮ್ಯೂಟ್, ಹಸ್ಕಿ ಹಾಗೂ ಎಸ್ಕಿಮೋ ಎಂಬ ತಳಿಗಳನ್ನು ವಾಹನಗಳಾಗಿ ಬಳಸಲಾಗುತ್ತದೆ. ‘ಹಸ್ಕಿ’ ತಳಿ ಹೆಚ್ಚಿನ ಹಿಮ ಪ್ರದೇಶಗಳಲ್ಲಿ ಸ್ಲೆಡ್ ಡಾಗ್ ಆಗಿವೆ. ಇವು ನೋಡಲು ಥೇಟ್ ತೋಳದಂತೆಯೇ ಇರುತ್ತವೆ. ಇವು ಬೌ ಬೌ ಅನ್ನದೇ ತೋಳಗಳ ಹಾಗೆ ಊಳಿಡುತ್ತವೆೆ.

  ಮಾಮೂಲು ನಾಯಿಗಳಿಗಿಂತ ಇವುಗಳ ಚರ್ಮ ಎಷ್ಟು ದಪ್ಪ ಇರುತ್ತದೆ. ಇದರಿಂದಲಾಗಿಯೇ ಮೈನಸ್ 40ರಿಂದ 60 ಡಿಗ್ರಿ ಚಳಿಯನ್ನೂ ಇದು ಸಹಿಸಬಲ್ಲುದು. ನಮಗೆ ತಡೆದುಕೊಳ್ಳಲಾರದಷ್ಟು ಚಳಿಯಾಗಿ, ಹಲ್ಲು ಗಡಗಡ ಎನ್ನುತ್ತಿದ್ದರೆ ಆಗಿನ ಉಷ್ಣಾಂಶ 20ರಿಂದ 25 ಡಿಗ್ರಿ ಆಗಿರುತ್ತದೆ. ಮೈನಸ್ ಡಿಗ್ರಿ ಎಂದರೆ ಎಷ್ಟೆಂದು ಊಹಿಸಿನೋಡಿ. ಅಲ್ಲಿ ವಾಸಿಸುವವರು ಚಳಿ ತಡೆದುಕೊಳ್ಳುವ ಬಟ್ಟೆ ತೊಟ್ಟುಗೊಂಡರೆ ಬಟ್ಟೆಯೂ ಇಲ್ಲದ ನಾಯಿಯ ದೇಹ ರಚನೆ ಅದ್ಹೇಗೆ ಇರಬಹುದು ಅಲ್ಲವೆ?

  ಭಯಂಕರ ಪ್ರಾಣಿ!: ಅಂದ ಹಾಗೆ ಹಸ್ಕಿ ತಳಿ ನಾಯಿಯ ತವರೂರು ಸೈಬಿರಿಯಾ. ಅದಕ್ಕಾಗಿಯೇ ಇದನ್ನು ‘ಸೈಬಿರಿಯಾ ಹಸ್ಕಿ’ ಎನ್ನುತ್ತಾರೆ. ಸಾಮಾನ್ಯವಾಗಿ ಈ ನಾಯಿ ಗುಂಪಿನಲ್ಲಿಯೇ ಇರುತ್ತದೆ. ಇವು ನೋಡಲು ತುಂಬಾ ಮುದ್ದುಮುದ್ದಾಗಿರುತ್ತವೆೆ. ಅಂದ ಮಾತ್ರಕ್ಕೆ ಸಾಕು ನಾಯಿಗಳಂತೆ ನೋಡಿಕೊಂಡರೆ ಆಗುವುದಿಲ್ಲ. ಇವುಗಳನ್ನು ಬಹಳ ಚೆನ್ನಾಗಿ, ಅಷ್ಟೇ ಜಾಗೃತೆಯಿಂದ ನೋಡಿಕೊಳ್ಳುತ್ತಿರಬೇಕು.

  ಇಲ್ಲದೇ ಹೋದರೆ ಇದಕ್ಕಿಂತ ಕ್ರೂರ ಪ್ರಾಣಿ ಮತ್ತೊಂದಿಲ್ಲ. ಯಾವುದಾದರೂ ಪ್ರಾಣಿಯನ್ನು ಇದು ನೋಡಿದರೆ ಅದು ತನಗೆ ಅಪರಿಚಿತ ಎನಿಸಿದರೆ ತಕ್ಷಣ ಕೊಂದು ಹಾಕುತ್ತದೆ. ಆದ್ದರಿಂದಲೇ ಇದನ್ನು ಒಂಟಿಯಾಗಿ ಬಿಡುವುದೇ ಇಲ್ಲ. ಸದಾ ಅದರ ಮಾಲೀಕರು ಜತೆಯಲ್ಲಿಯೇ ಇರಬೇಕು ಇಲ್ಲವೇ ಗುಂಪಿನಲ್ಲಿ ಇರಬೇಕು. ಸ್ಲೆಡ್ ಡಾಗ್​ಗಳ ರೇಸ್ ಕೂಡ ನಡೆಯುತ್ತದೆ. ಆದರೆ ಹಲವು ರೇಸ್​ಗಳಲ್ಲಿ ನಾಯಿಗಳು ಸತ್ತಿರುವ ಕಾರಣ, ಈ ರೇಸ್​ಗಳ ಬಗ್ಗೆ ವಿವಾದ ಎದ್ದಿದೆ. ಮನೆಯಲ್ಲಿ ಇದನ್ನು ಸಾಕುವವರೂ ಇದ್ದಾರೆ. ಆದರೆ ಇದು ಹಿಮವಾಸಿಯಾಗಿರುವ ಕಾರಣ, ಮನೆಯಲ್ಲಿ ಸಾಕಬೇಕಾದರೆ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.

  ಏನಿದು ಸ್ಲೆಡ್ ಡಾಗ್?

  ಹಿಮಚ್ಛಾದಿತ ಪ್ರದೇಶಗಳಲ್ಲಿ ಸರಕು ಸಾಗಣೆ ಮಾಡು, ಔಷಧಗಳನ್ನು ತರಲು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಪೋಸ್ಟ್ ಗಳನ್ನು ತಲುಪಿಸಲು ಎಲ್ಲದಕ್ಕೂ ಸ್ಲೆಡ್ ಡಾಗ್ ಬಳಸಲಾಗುತ್ತದೆ. ಹಾಗೆಂದು ಇದು ಇಂದು ನಿನ್ನೆಯ ವಾಹನವಲ್ಲ. ಸುಮಾರು 4 ಸಾವಿರ ವರ್ಷಗಳಿಂದಲೂ ಇದರ ಬಳಕೆ ಆಗುತ್ತಿದೆ ಎನ್ನಲಾಗಿದೆ. ಸ್ಲೆಡ್ ಡಾಗ್ ಎಂದು ಕನ್ನಡದಲ್ಲಿ ಹೇಳುವುದಾದರೆ ನಾಯಿ ವಾಹನ ಅಥವಾ ನಾಯಿಯ ರಥ.

  ಹಾಗೆಂದು ನಾಯಿಯ ಮೇಲೆ ನೇರವಾಗಿ ಮನುಷ್ಯ ಕುಳಿತು ಹೋಗುವುದು ಎಂದರ್ಥವಲ್ಲ. ಕುದುರೆ ಗಾಡಿ, ಎತ್ತಿನ ಗಾಡಿ ನೋಡಿದ್ದೀರವಲ್ಲವೆ? ಹಾಗೆಯೇ ಇದು ನಾಯಿಯ ಗಾಡಿ ಅಷ್ಟೇ. ಕುದುರೆ ಗಾಡಿಯಲ್ಲಿ ಒಂದು ಕುದುರೆ, ಎತ್ತಿನ ಗಾಡಿಯಲ್ಲಿ ಎರಡು ಎತ್ತು ಇದ್ದರೆ, ನಾಯಿಯ ಗಾಡಿಯಲ್ಲಿ ನಾಲ್ಕರಿಂದ ಏಳು ನಾಯಿಗಳು ಇರುತ್ತವೆ. ಇದೇ ಇದರ ವಿಶೇಷತೆ. ಜನರು ಕುಳಿತುಕೊಳ್ಳಲು, ಸರಕು ತುಂಬಲು ಅನುಕೂಲ ಆಗುವಂತೆ ಈ ಏಳೂ ನಾಯಿಗಳಿಗೆ ಹಿಂದೆ ಗಾಡಿ ಕಟ್ಟಲಾಗುತ್ತದೆ. ಎಲ್ಲಾ ನಾಯಿಗಳು ಒಂದೇ ವೇಗದಲ್ಲಿ ಹಿಮದೊಳಕ್ಕೆ ದಾರಿ ಹುಡುಕಿಕೊಂಡು ತನ್ನ ಯಜಮಾನ ಹೇಳುವ ಜಾಗವನ್ನು ತಲುಪುತ್ತವೆ. ಇದು ಗಂಟೆಗೆ ಸುಮಾರು 20 ಕಿ.ಮೀ ವೇಗದಲ್ಲಿ ಪಯಣಿಸುತ್ತದೆ.

  ಹಸ್ಕಿ ಹೇಗಿರತ್ತೆ ಗೊತ್ತಾ?

  ಬಿಳಿ ಬಣ್ಣದ ಹಸ್ಕಿ ನಾಯಿಯ ಕಣ್ಣುಗಳು ಬಾದಾಮಿ ಆಕಾರದಲ್ಲಿದ್ದು ನೀಲಿ- ಕಂದು ಮಿಕ್ಸ್ ಇರುತ್ತವೆ. 22ರಿಂದ 24 ಇಂಚುಗಳಷ್ಟು ಎತ್ತರ ಇರುವ ಹಸ್ಕಿಯ ಭಾರ ಸುಮಾರು 25 ಕೆ.ಜಿ. ಕಿವಿಯ ತ್ರಿಕೋನಾಕೃತಿಯಲ್ಲಿ ಇದ್ದು, ಕಿಲೋಮೀಟರ್​ಗಟ್ಟಲೆ ಯಾರಾದರೂ ಚಲಿಸುತ್ತಿದ್ದರೆ ಇದು ಸರಕ್ಕನೆ ಪತ್ತೆ ಹಚ್ಚಿಬಿಡುತ್ತದೆ. ನಾಲಗೆ ತುಂಬಾ ಉದ್ದ ಇರುತ್ತದೆ. ಹಸ್ಕಿ, ಗಂಟೆಗೆ 20 ಕಿ.ಮೀ ದೂರವನ್ನು ಕ್ರಮಿಸುತ್ತದೆ.

  ಒಂದು ಸಣ್ಣ ಕ್ರಿಮಿ ಅಲುಗಾಡಿದರೂ ಇದು ಅದನ್ನು ಗುರುತಿಸಬಲ್ಲುದು. ಇದು 12 ರಿಂದ 14 ವರ್ಷಗಳವರೆಗೆ ಬದುಕಬಲ್ಲುದು. ಆದರೆ 9 ವರ್ಷ ಆಗುತ್ತಿದ್ದಂತೆಯೇ ಇವುಗಳಿಗೆ ನಿವೃತ್ತಿ ಘೋಷಿಸಲಾಗುತ್ತದೆ. ಅಂದರೆ ಅವುಗಳಿಂದ ಹೆಚ್ಚು ಕೆಲಸ ಮಾಡಿಸಿಕೊಳ್ಳುವುದಿಲ್ಲ. ಎಷ್ಟೇ ಭಯಂಕರ ಚಳಿಯನ್ನು ಇದು ತಡೆದುಕೊಂಡರೂ, ವಾತಾವರಣದಲ್ಲಿ ಆಗುವ ಬದಲಾವಣೆಗಳಿಗೂ ಇದರ ದೇಹ ಒಗ್ಗಿಕೊಳ್ಳುತ್ತದೆ. ದಿನವೊಂದಕ್ಕೆ 10 ಸಾವಿರ ಕ್ಯಾಲರಿಗಳಷ್ಟು ಆಹಾರ ಇದಕ್ಕೆ ಬೇಕು. ಕೂದಲು ಉದುರುವುದು ಹೆಚ್ಚು. ಆದ್ದರಿಂದ ವಾರಕ್ಕೆ ಒಂದು ಬಾರಿಯಾದರೂ ಅದನ್ನು ಬಾಚಬೇಕಾಗುತ್ತದೆ.

  ಸೇನೆಯಲ್ಲಿ ಡಿಮಾಂಡ್

  ಸೈನಿಕರು ಗಡಿ ಭಾಗಗಳಲ್ಲಿ ಕೆಲಸ ನಿರ್ವಹಿಸುವಾಗ ಹುತಾತ್ಮರಾಗಿ ಹಿಮದೊಳಕ್ಕೆ ಹೂತುಹೋದರೆ, ಆ ಹಿಮದ ರಾಶಿಯಲ್ಲಿ ಮೃತದೇಹವನ್ನು ಗುರುತು ಮಾಡುವಲ್ಲಿ ನೆರವಿಗೆ ಬರುವುದು ಹಸ್ಕಿ ಹಾಗೂ ಅಲಾಸ್ಕನ್ ತಳಿಯ ನಾಯಿಗಳು. ಕಳೆದ ವರ್ಷ ಸಿಯಾಚಿನ್​ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹನುಮಂತಪ್ಪ ಎಂಬ ಯೋಧರು ಹಿಮದಲ್ಲಿ ಹೂತು ಹೋದ ಸಂದರ್ಭದಲ್ಲಿ ಹಸ್ಕಿ ನಾಯಿಯೇ ಪತ್ತೆ ಮಾಡಿತ್ತು. ಅಷ್ಟು ಸೂಕ್ಷ್ಮ ಮೂಗು ಇದರದ್ದು. ಹಿಮದೊಳಕ್ಕೆ 10-15 ದಿನಗಳ ಹಿಂದೆ ಹಿಮದಲ್ಲಿ ನಡೆದಿರುವ ಹೆಜ್ಜೆ ಗುರುತುಗಳನ್ನೂ ವಾಸನೆ ಮೂಲಕವೇ ಇದು ಕಂಡುಹಿಡಿಯಬಲ್ಲುದು. ವಿದ್ಯುತ್ ತಂತಿಗಳೇನಾದರೂ ಇದ್ದರೆ ಅದನ್ನೂ ಗುರುತಿಸುವ ಹಸ್ಕಿ, ಆ ತಂತಿಗಳ ನಡುವೆ ತುಂಬಾ ಸುಲಭದಲ್ಲಿ ನುಸುಳಿ ಹೋಗುತ್ತದೆ.

  | ಸುಚೇತನಾ 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts