ಹೇಮಾವತಿಗೆ ಒಳಹರಿವು ಹೆಚ್ಚಳ

ಹಾಸನ: ಹತ್ತು ದಿನಗಳಿಂದ ಎಡಬಿಡದೆ ಸುರಿದ ಭಾರಿ ಮಳೆ ಎರಡು ದಿನಗಳಿಂದ ಕಡಿಮೆಯಾಗಿದ್ದರೂ ಮಲೆನಾಡು ಭಾಗದಲ್ಲಿ ಮುಂದುವರಿದ ಪರಿಣಾಮ ಹೇಮಾವತಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚುತ್ತಲೇ ಇದೆ.
ಜೂ.12 ರಂದು 29 ಸಾವಿರ ಕ್ಯೂಸೆಕ್ ಒಳಹರಿವಿದ್ದರೆ ಬುಧವಾರ 37,946 ಕ್ಯೂಸೆಕ್ ಇತ್ತು. ಜಿಲ್ಲೆಯ ವಿವಿಧೆಡೆ ಬೆಳಗಿನ ಜಾವ ಮಳೆಯಾಗಿ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಕೆಲವು ದಿನಗಳಿಂದ ಹಗಲಿರುಳು ಸುರಿದ ಮಳೆ ಎರಡು ದಿನಗಳಿಂದ ಬಿಡುವು ನೀಡಿದೆ.
2922 ಅಡಿ ಗರಿಷ್ಠ ಮಟ್ಟ ಹೊಂದಿರುವ ಹೇಮಾವತಿ ಜಲಾಶಯದಲ್ಲಿ 2888.54 ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಗೆ 2853.23 ಅಡಿ ನೀರಿತ್ತು. 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 13.22 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಕೇವಲ 2.71 ಟಿಎಂಸಿ ಪ್ರಮಾಣ ನೀರಿತ್ತು.

ಹೋಬಳಿವಾರು ಮಳೆ ವಿವರ: ಬುಧವಾರ ಬೆಳಗ್ಗೆ 9 ಗಂಟೆಗೆ ಕೊನೆಗೊಂಡಂತೆ ಜಿಲ್ಲಾದ್ಯಂತ ಹೋಬಳಿವಾರು ಸುರಿದ ಮಳೆ ವಿವರ ಇಂತಿದೆ. ಹಿರಿಸಾವೆ 2 ಮಿಮೀ, ನುಗ್ಗೇಹಳ್ಳಿ 2, ಶ್ರವಣಬೆಳಗೊಳ 1, ಹಾಸನ 22, ದುದ್ದ 6, ಕಟ್ಟಾಯ 7, ಸಾಲಗಾಮೆ 16, ಶಾಂತಿಗ್ರಾಮ 3, ಹೊಳೆನರಸೀಪುರ 1, ಹಳೆಕೋಟೆ 1, ಸಕಲೇಶಪುರ 66, ಬೆಳಗೋಡು 62, ಅರೇಹಳ್ಳಿ 100, ಬಿಕ್ಕೋಡು 50, ಹಳೇಬೀಡು 2, ಮಾರನಹಳ್ಳಿ 20, ಚನ್ನರಾಯಪಟ್ಟಣ 1, ಬಾಗೂರು 1, ದಂಡಿಗನಹಳ್ಳಿ 2, ಆಲೂರು 29, ಕೆಂಚಮ್ಮನಹೊಸಕೋಟೆ 30, ಕುಂದೂರು 4, ಪಾಳ್ಯ 40, ಅರಕಲಗೂಡು 4, ದೊಡ್ಡಮಗ್ಗೆ 4, ಕೊಣನೂರು 8, ಮಲ್ಲಿಪಟ್ಟಣ 9, ರಾಮನಾಥಪುರ 1, ಅರಸೀಕೆರೆ 1, ಗಂಡಸಿ 2, ಜಾವಗಲ್ 1, ಬೇಲೂರು 8, ಹಾನುಬಾಳು 110, ಹೆತ್ತೂರು 99 ಹಾಗೂ ಯಸಳೂರು ಭಾಗದಲ್ಲಿ 54 ಮಿಮೀ ಮಳೆಯಾಗಿದೆ.

ಬೆಳಗ್ಗೆ ಆತಂಕ ಮೂಡಿಸಿದ್ದ ಮಳೆ: ಬುಧವಾರ ಮುಂಜಾನೆ 5.30 ರಿಂದಲೇ ಜೋರಾಗಿ ಆರಂಭವಾದ ಮಳೆ ಮತ್ತೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ದಿನಪೂರ್ತಿ ಅದೇ ರೀತಿ ಮಳೆ ಸುರಿದರೆ ಜನಜೀವನ ಅಸ್ತವ್ಯಸ್ತವಾಗುತ್ತಿತ್ತು. ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದ ಮಕ್ಕಳು ಮಳೆಯನ್ನು ಶಪಿಸುತ್ತಲೇ ಇದ್ದರು. ಆದರೆ 10 ಗಂಟೆ ನಂತರ ಮಳೆ ನಿಂತಿತು. ಬಿಸಿಲು ಕಾಣಿಸಿಕೊಂಡು ಅಚ್ಚರಿ ಮೂಡಿಸಿತು. ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಚಳಿ ಆರಂಭವಾಯಿತು.

Leave a Reply

Your email address will not be published. Required fields are marked *