ಹೇಮಾವತಿ ಹೆಂಜೇರು ಸಿದ್ದೇಶ್ವರ ಸ್ವಾಮಿ ರಥೋತ್ಸವ

ಹಿರಿಯೂರು: ತಾಲೂಕಿನ ಗಡಿ ಗ್ರಾಮ ಹೇಮಾವತಿಯಲ್ಲಿ ಶನಿವಾರ ಐತಿಹಾಸಿಕ ಹೆಂಜೇರು ಸಿದ್ದೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ನಿಮಿತ್ತ ಉತ್ಸವ ಮೂರ್ತಿಗಳಿಗೆ ಅಭಿಷೇಕ, ಗಂಗಾಪೂಜೆ, ಮಹಾಮಂಗಳಾರತಿ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 2 ಕ್ಕೆ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಅರ್ಚಕರು ರಥಕ್ಕೆ ವಿಧಿ-ವಿಧಾನ ಪೂರೈಸಿದ ಬಳಿಕ ಗೋವುಗಳಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ತೇರಿಗೆ ಬಾಳೆ ಹಣ್ಣು, ಮಂಡಕ್ಕಿ, ಸೂರು ಬೆಲ್ಲ ತೂರಿ ಭಕ್ತಿ ಸಮರ್ಪಿಸಿದರು.
ವೀರಗಾಸೆ, ಪೂಜಾ ಕುಣಿತ, ತಮಟೆ, ನಗಾರಿ, ಡೊಳ್ಳು ಕುಣಿತ ಕಲಾವಿದರ ಆಕರ್ಷಕ ನೃತ್ಯ ಗಮನ ಸೆಳೆಯಿತು. ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ನಡೆದವು.