ಎಪ್ಪತ್ತರಲ್ಲೂ ಫಳಫಳ ಹೇಮಾಮಾಲಿನಿ

| ಎಂ.ವಿಶ್ವನಾಥ್

ಪರದೆಯ ಈಚೆಗೆ ಒಬ್ಬ ಅಪ್ರತಿಮ ನೃತ್ಯಪಟು. ಪರದೆಯ ಮೇಲೆ ರಸಾನುಭೂತಿಗೆ ಕಿಚ್ಚು ಹಚ್ಚುವ ಕನಸಿನ ಕನ್ಯೆ. ಒಬ್ಬ ಯಶಸ್ವಿ ರಾಜಕೀಯ ನಾಯಕಿ, ಲೋಕಸಭಾ ಸದಸ್ಯೆ. ಇವರು ಹೇಮಾಮಾಲಿನಿ. ಇವರಿಗೀಗ ಬರೋಬ್ಬರಿ 70 ವರ್ಷ. ಮುದ್ರಣದೋಷವಲ್ಲ, ಇವರು ಹುಟ್ಟಿದ ದಿನಾಂಕ 16ನೇ ಅಕ್ಟೋಬರ್ 1948. ಇಂಥ ಎವರ್​ಗ್ರೀನ್ ಡ್ರೀಂಗರ್ಲ್ ಬಗ್ಗೆ ಈ ಸಂದರ್ಭಕ್ಕಾಗಿ ಒಂದಿಷ್ಟು ಹಳೇ ಮೆಲುಕು-ಕುಲುಕು.

ಆಕರ್ಷಕ ಅಂಗಸೌಷ್ಟವ, ತಿದ್ದಿತೀಡಿದ ಮುದ್ದುಮುಖ, ಸಮ್ಮೋಹಕ ಸ್ನಿಗ್ಧ ನಗು, ಇದಕ್ಕೆ ಮೇಳೈಸಿದಂತೆ ಅಪೂರ್ವ ನಟನಾ ಸಾಮರ್ಥ್ಯ, ನವರಸಾಭಿನಯ ಚಾತುರ್ಯ. ಸಾಕ್ಷಾತ್ ಇಂದ್ರನೇ ಬಂದರೂ ಆಶ್ಚರ್ಯವಿಲ್ಲ ಎನ್ನುವಾಗ ಇದೇ ಲೋಕದ ಧಮೇಂದ್ರನದು ಏನು ಮಹಾ? ಆ ಮಟ್ಟದಲ್ಲಿ ಚಿತ್ರರಂಗದಲ್ಲಿ ಬೆಳಗಿದ ಪ್ರತಿಭಾವಂತೆ ಹಠೇಮಾಮಾಲಿನಿ. ದಕ್ಷಿಣದಿಂದ ಉತ್ತರಕ್ಕೆ ಹೋಗಿ ಹಿಂದಿ ಚಿತ್ರರಂಗದಲ್ಲಿ ‘ನ ಭೂತೋ ನ ಭವಿಷ್ಯತಿ’ ಎನ್ನುವ ರೀತಿಯಲ್ಲಿ ಬೆಳಗಿದವರು ವೈಜಯಂತಿಮಾಲಾ, ಪದ್ಮಿನಿ ಮತ್ತು ಹೇಮಾಮಾಲಿನಿ. ಈ ಸರಣಿ ಇಲ್ಲಿಗೆ ನಿಂತುಬಿಟ್ಟಿದೆ. ದಕ್ಷಿಣದಲ್ಲಿ ದೊಡ್ಡ ಮಟ್ಟಕ್ಕೆ ಗುರುತಿಸಿಕೊಂಡು ಉತ್ತರಕ್ಕೆ ಹಾರಿದರು ವೈಜಯಂತಿಮಾಲಾ ಮತ್ತು ಪದ್ಮಿನಿ. ಆದರೆ, ಹೇಮಾಮಾಲಿನಿ ಹಾಗಲ್ಲ. ತೆಲುಗು ಸಿನಿಮಾದಲ್ಲೊಂದು ಪುಟ್ಟ ಡ್ಯಾನ್ಸ್ (ಪಾಂಡವ ವನವಾಸಮು), ತಮಿಳು ಸಿನಿಮಾದಲ್ಲೊಂದು ಪುಟ್ಟ ಪಾತ್ರ (ಇದು ಸತ್ಯಂ) ಮಾಡಿ 1968ರಲ್ಲಿ ನೇರ ಮುಂಬೈಗೆ ಹಾರಿ ಸುರಕ್ಷಿತವಾಗಿ ಲ್ಯಾಂಡ್ ಆಗಿಬಿಟ್ಟರು. ಆ ಕಾಲದ ದಂತಕಥೆ ರಾಜ್​ಕಪೂರ್ ಎದುರು ಪ್ರಥಮ ಚಿತ್ರದಲ್ಲೇ (ಸಪ್ನೋಂಕಾ ಸೌದಾಗರ್) ನಾಯಕಿಯಾದರು. ಭಾರತದ ಒಬ್ಬ ಗ್ರೇಟ್ ಶೋಮ್ಯಾನ್ ಎಂದು ಖ್ಯಾತನಾಮರಾಗಿರುವ ರಾಜ್​ಕಪೂರ್ ಪ್ರಭಾವಲಯದಲ್ಲೇ ಈ ಮೂರೂ ನಾಯಕಿಯರು ಬೆಳಗಿರುವುದೊಂದು ಅಚ್ಚರಿಯ ದಾಖಲೆ.

ಎರಡನೇ ಚಿತ್ರ ‘ತುಂ ಹಸೀನ್ ಮೈ ಜವಾನ್’. ಆ ಕಾಲದ ಒಬ್ಬ ಸಭ್ಯ, ಸರಳ ನಟ ಧಮೇಂದ್ರನಿಗೆ ನಾಯಕಿಯಾದರು. ಒಂದು ಚಿತ್ರಕ್ಕೆ ಬಂದ ಧಮೇಂದ್ರ, ಹೇಮಾಮಾಲಿನಿ ಅವರೊಂದಿಗೆ ಮುಂದೆ 20 ಚಿತ್ರಗಳಲ್ಲಿ ನಾಯಕನಾಗಿದ್ದು ಅಲ್ಲದೆ, ಮುಂದೆ ಇವರ ಬದುಕಿಗೂ 1979ರಲ್ಲಿ ನಾಯಕನಾಗಿಬಿಟ್ಟರು.

ಪ್ರತಿಭೆಗೆ ಮೀರಿದ್ದು ಅದೃಷ್ಟ. ಈ ನಿಟ್ಟಿನಲ್ಲಿಯೂ ಹೇಮಾಮಾಲಿನಿ ಪುಣ್ಯವಂತೆ. ಆಗಷ್ಟೇ ‘ಆರಾಧನಾ’ದ ಪ್ರಚಂಡ ಸುನಾಮಿಯಲ್ಲಿ ತೋಯ್ದುಹೋಗಿದ್ದ ರಾಜೇಶ್ ಖನ್ನಾ ಜತೆಗಿನ ‘ಅಂದಾಜ್’ ಮತ್ತು ವಿಜಯಾನಂದ್ ನಿರ್ದೇಶನದ ವಿನೂತನ ಪತ್ತೇದಾರಿ ಚಿತ್ರ ದೇವಾನಂದ್ ಜತೆಗಿನ ‘ಜಾನಿ ಮೇರಾ ನಾಮ್ ಚಿತ್ರದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದರು, ಕಿಚ್ಚೆಬ್ಬಿಸಿದರು. ಈ ಮಧ್ಯೆ ಬಂದ ದಿಲೀಪ್​ಕುಮಾರ್ ಅವರ ಭಯಂಕರ ಜನಪ್ರಿಯ ಚಿತ್ರ ‘ರಾಮ್ ಔರ್ ಶ್ಯಾಮ್​ನ ನಾಯಕಿಯ ಅವತರಣಿಕೆಯಾಗಿದ್ದ ‘ಸೀತಾ ಔರ್ ಗೀತಾ’ ಗಲ್ಲಾಪೆಟ್ಟಿಗೆ ದೋಚಿ ದೌಡಾಯಿಸಿ ‘ಶೋಲೆ’ಗೆ ಅಡಿಪಾಯ ಹಾಕಿತು. ಜತೆಗೆ, ಡ್ರೀಂಗರ್ಲ್ ಎಂಬ ಹೆಸರಿನಲ್ಲಿಯೇ ಒಂದು ಚಿತ್ರ ತಯಾರಾಗಿದ್ದು ಇವರ ಹೆಸರಿನ ನಗದೀಕರಣಕ್ಕೆ ಸಾಕ್ಷಿಯಾಗಿತ್ತು. ಇಲ್ಲಿಂದ ಹೆದ್ದಾರಿ ಹಿಡಿಯಿತು ಇವರ ಚಿತ್ರಯಾತ್ರೆ. ಅಮಿತಾಭ್ ಬಚ್ಚನ್, ಸಂಜೀವ್​ಕುಮಾರ್, ಶಮ್ಮಿಕಪೂರ್, ಶಶಿಕಪೂರ್, ರಾಜ್​ಕುಮಾರ್, ಜಿತೇಂದ್ರ, ವಿನೋದ್ ಖನ್ನಾ, ಫಿರೋಜ್ ಖಾನ್ ಮೊದಲಾಗಿ ಹಿಂದಿ ಚಿತ್ರರಂಗದ ಬಹುತೇಕ ಎಲ್ಲ ಪ್ರಮುಖ ಕಲಾವಿದರೊಂದಿಗೆ ಸುಮಾರು 155 ಚಿತ್ರಗಳಲ್ಲಿ ನಟಿಸಿದ ಹೇಮಾಮಾಲಿನಿ ತಮ್ಮ ಓರಗೆಯ ನಟಿಯರನ್ನು ಮೀರಿಸಿ ಬೆಳೆದುಬಿಟ್ಟರು.

ಈ ಮಧ್ಯೆ ತಾವೇ ಮೂರು ಚಿತ್ರ ತೆಗೆದರು. ಅವು ‘ದಿಲ್ ಆಶ್ನಾ ಹೈ’, ‘ಮೋಹಿನಿ’ ಮತ್ತು ‘ಟೆಲ್ ಮಿ ಓ ಖುದಾ’. ಶಾರುಖ್ ಅಭಿನಯದ ‘ದಿಲ್ ಆಶ್ನಾ ಹೈ’ ಅನ್ನು ತಾವೇ ನಿರ್ದೇಶಿಸಿದರು. ಕೆಲಕಾಲ ವಿರಮಿಸಿದ ನಂತರ 2003ರಲ್ಲಿ ನಟಿಸಿದ ‘ಬಾಗ್​ಬಾನ್’ ಮತ್ತೊಮ್ಮೆ ಇವರ ಜನಪ್ರಿಯತೆಯನ್ನು ಸಾಕ್ಷೀಕರಿಸಿತು. 1993ರಲ್ಲಿ ಫಿಲಂಫೇರ್, 1999ರಲ್ಲಿ ಪದ್ಮಭೂಷಣ, 2000ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತುಮಕೂರಿನಲ್ಲಿ ಡ್ರೀಂಗರ್ಲ್

2011ರಲ್ಲಿ ತುಮಕೂರು ಜಿಲ್ಲಾ ಉತ್ಸವಕ್ಕೆ ಹೇಮಾಮಾಲಿನಿ ಬಂದಿದ್ದರು. ದೇವರಾಯನದುರ್ಗದ ಲಕ್ಷ್ಮೀನರಸಿಂಹ ದೇವರ ಪ್ರಸಾದ ಪಡೆದು ಭಾವುಕರಾಗಿದ್ದರು. ಏಕೆಂದರೆ, ಇವರ ಮನೆದೇವರೂ ಲಕ್ಷ್ಮೀನರಸಿಂಹನೇ. ಈ ಕಾರ್ಯಕ್ರಮಕ್ಕೆ ಇವರ ಗುರುಗಳೂ ಬಂದಿದ್ದರು. ಇಬ್ಬರ ಹುಟ್ಟುಹಬ್ಬವೂ ಒಂದೇ ದಿನವಾಗಿತ್ತು. ಅಂದು ಇಬ್ಬರನ್ನೂ ಸನ್ಮಾನಿಸಲಾಗಿತ್ತು.

ತಿರಸ್ಕಾರದ ನಿರಾಶೆ

ಚಿತ್ರನಟಿಯರಾಗುವುದಕ್ಕೆ ಕನಸು ಕಾಣುವವರು ದಿನನಿತ್ಯವೂ ನೂರಾರು. ಆದರೆ, ಎಲ್ಲರ ಬಯಕೆ ಸುಲಭವಾಗಿ ಈಡೇರುವುದಿಲ್ಲ. ಪ್ರಾರಂಭದಲ್ಲಂತೂ ನಿರಾಶೆ ಕಟ್ಟಿಟ್ಟ ಬುತ್ತಿ. ಹೇಮಾಮಾಲಿನಿಯವರೂ ಇದಕ್ಕೆ ಹೊರತಾಗಿರಲಿಲ್ಲ. ಅದು 1964. ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಸಿ. ವಿ. ಶ್ರೀಧರ್ ತಮ್ಮ ಹೊಸ ಚಿತ್ರ ‘ವೆಣ್ಣಿರ ಆಡೈ’ನ ಎರಡನೇ ನಾಯಕಿಯ ಪಾತ್ರಕ್ಕಾಗಿ ಹುಡುಕಾಡುತ್ತಿದ್ದಾಗ ಹೇಮಾಮಾಲಿನಿ ಪ್ರಯತ್ನಿಸಿದ್ದರು. ‘ತುಂಬ ತೆಳುವಾಗಿದ್ದಾರೆ’ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿತ್ತು. ಅದೇ ಶ್ರೀಧರ್ 1973ರಲ್ಲಿ ಇವರ ‘ಗೆಹರಿ ಬಾಲ್’ ಚಿತ್ರವನ್ನು ನಿರ್ದೇಶನ ಮಾಡುವಂತಾಗಿತ್ತು.

ನೃತ್ಯವೆಂದರೆ ಪಂಚಪ್ರಾಣ

ನೃತ್ಯವೆಂದರೆ ಇವರಿಗೆ ಪಂಚಪ್ರಾಣ. ತಾಯಿಯ ಒತ್ತಾಯಕ್ಕೆ ಕಟ್ಟುಬಿದ್ದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದ ಹೇಮಾಮಾಲಿನಿ ಒಬ್ಬೊಬ್ಬ ನಿರ್ವಪಕ ಮನೆಗೆ ಬಂದಾಗಲೂ ‘ಓ ದೇವರೆ, ನನ್ನ ಜೀವನದ ಒಂದು ವರ್ಷ ಹಾಳಾಗಿ ಹೋಯಿತು’ ಎಂದುಕೊಳ್ಳುತ್ತಿದ್ದರಂತೆ! ಇದಕ್ಕೆ ನೃತ್ಯದ ಮೇಲಿನ ಪ್ರೀತಿಯೇ ಕಾರಣ. ಬಾಲ್ಯದಲ್ಲಿಯೇ ನೃತ್ಯಪ್ರವೀಣೆಯಾಗಿದ್ದು, ನಂತರದಲ್ಲಿ ವೆಂಗಟಿ ಚಿನ್ನಸತ್ಯಂ ಅವರಲ್ಲಿ ಕೂಚಿಪುಡಿ ಮತ್ತು ಕಲಾಮಂಡಲಂ ಗೋಪಾಲಕೃಷ್ಣನ್ ಅವರಲ್ಲಿ ಮೋಹಿನಿಯಾಟ್ಟಂ ಅಭ್ಯಾಸ ಮಾಡಿದ್ದಾರೆ. ಇದೀಗ, ತಮ್ಮದೇ ಆದ ನಾಟ್ಯವಿಹಾರ ಕಲಾಕೇಂದ್ರದ ಮೂಲಕ ವಿಶೇಷ ಪೌರಾಣಿಕ ನೃತ್ಯರೂಪಕಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರ ಇಬ್ಬರು ಹೆಣ್ಣುಮಕ್ಕಳೂ ಈ ನಿಟ್ಟಿನಲ್ಲಿ ಇವರಿಗೆ ಬಲವಾಗಿ, ಬೆಂಬಲವಾಗಿ ನಿಂತಿದ್ದಾರೆ.