More

    ಅಪರಿಚಿತ ಶವಗಳ ಗುರುತಿಗೆ ಬೇಕಿದೆ ಆಧಾರ; 3 ವರ್ಷದಲ್ಲಿ 7 ಸಾವಿರ ಅಪರಿಚಿತ ಶವಗಳ ಪತ್ತೆ

    ಅಪರಿಚಿತ ಶವಗಳ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಶವಗಳ ಐಡೆಂಟಿಟಿಗೆ ನೆರವು ನೀಡುವಂತೆ ಆಧಾರ್ (ಯುಐಡಿಎಐ) ಸಂಸ್ಥೆಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. ಆದರೆ, ಅಲ್ಲಿಂದ ಸರಿಯಾದ ಸ್ಪಂದನೆ ದೊರೆಯದಿರುವುದು ಪೊಲೀಸ ರನ್ನು ಚಿಂತೆಗೀಡು ಮಾಡಿದೆ.

    2016ರ ಜನವರಿಯಿಂದ 2019ರ ಮೇವರೆಗೆ ರಾಜ್ಯದಲ್ಲಿ 7,620 ಅಪರಿಚಿತ ಶವಗಳು ಪತ್ತೆಯಾಗಿವೆ. ಅವುಗಳಲ್ಲಿ ಕೇವಲ 1,762 ಶವಗಳ ಗುರುತು ಪತ್ತೆಯಾಗಿದೆ. ಉಳಿದ 5,858 ಶವಗಳ ಗುರುತು ಸಿಕ್ಕಿಲ್ಲ. ಪೊಲೀಸರಿಗೆ ಅಗತ್ಯ ತಂತ್ರಜ್ಞಾನದ ನೆರವು ಲಭಿಸದಿರುವುದರಿಂದ ಪ್ರತಿವರ್ಷ ಶೇ.77 ಅಪರಿಚಿತ ಶವಗಳನ್ನು ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸು ತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ಸರಾಸರಿ 6ರಿಂದ 7 ಅಪರಿಚಿತ ಶವ ಪತ್ತೆಯಾಗುತ್ತಿವೆ. ಕೊಲೆ, ಅಪಘಾತ, ಬುದ್ಧಿಮಾಂದ್ಯರು, ವೃದ್ಧರು, ಭಿಕ್ಷುಕರು ಶವಗಳು ಸಿಗುತ್ತಿವೆ.

    ಆಸ್ತಿ ವಿಲೇವಾರಿಗೂ ಅಡ್ಡಿ: ಅನಾಥವಾಗಿ ಸತ್ತವರಲ್ಲಿ ಬಹುತೇಕರ ಪೈಕಿ ಯಾವುದೋ ಸಮಸ್ಯೆಯಿಂದ ಕುಟುಂಬ ತೊರೆದವರಾಗಿರುತ್ತಾರೆ. ಯಾವುದೇ ವ್ಯಕ್ತಿ ಅನುಪಸ್ಥಿತಿಯಲ್ಲಿ ಆತನ ಹೆಸರಿನಲ್ಲಿರುವ ಆಸ್ತಿ ಮಾರಾಟ ಹಾಗು ಮುಂದಿನ ವಾರಸುದಾರರಿಗೆ ಒಪ್ಪಿಸಲು ಬರುವುದಿಲ್ಲ. ಕಾನೂನು ಪ್ರಕಾರ ವ್ಯಕ್ತಿ ನಾಪತ್ತೆಯಾದ ದಿನದಿಂದ (ಪೊಲೀಸರಿಗೆ ದೂರು ಕೊಟ್ಟ ದಿನ) 7 ವರ್ಷದ ನಂತರ ಮೃತಪಟ್ಟಿದ್ದಾನೆ ಎಂದು ನ್ಯಾಯಾಲಯ ಪರಿಗಣಿಸುತ್ತದೆ.

    ಅಲ್ಲಿಯವರೆಗೆ ನಾಪತ್ತೆಯಾದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿ ಹಾಗೂ ಉದ್ಯಮವನ್ನು ಕುಟುಂಬಸ್ಥರು ಮಾರಾಟ ಮಾಡಲು ಆಗುವುದಿಲ್ಲ. ಅಲ್ಲದೆ, 7 ವರ್ಷದ ನಂತರ ನ್ಯಾಯಾಲಯದಿಂದ ಪ್ರಮಾಣಪತ್ರ ಪಡೆಯಲು ಆತನ ಕುಟುಂಬಸ್ಥರು ಭಾವನಾತ್ಮಕ ಕಾರಣಗಳಿಗಾಗಿ ಹಿಂದೇಟು ಹಾಕುತ್ತಾರೆ.

    ಪೊಲೀಸರಿಂದ ಅಂತಿಮ ಸಂಸ್ಕಾರ: ಅಪರಿಚಿತ ಶವಗಳ ಹೆಸರು, ವಿಳಾಸ ಪತ್ತೆಹಚ್ಚಲು 10 ದಿನಗಳವರೆಗೆ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಇಡಲಾಗುತ್ತದೆ. ಬಳಿಕ ಪೊಲೀಸರು, ಶವದ ಫೋಟೋ ಹಾಗೂ ದೇಹದ ಮೇಲಿನ ಗುರುತುಗಳ ಬಗ್ಗೆ ಎಲ್ಲ ಠಾಣೆಗಳಿಗೆ ಮಾಹಿತಿ ಕಳುಹಿಸುತ್ತಾರೆ. ಇದಾದ ನಂತರವೂ ಶವದ ವಾರಸುದಾರರು ಪತ್ತೆಯಾಗದಿದ್ದರೆ ಕೋರ್ಟ್ ಅನುಮತಿ ಪಡೆದು ಪೊಲೀಸರೆ ಅಂತಿಮ ಶವಸಂಸ್ಕಾರ ನೆರವೇರಿಸುತ್ತಾರೆ.

    ಮಣ್ಣು ಮಾಡುತ್ತಾರೆ: ವಾರಸುದಾರರು ಪತ್ತೆಯಾಗಬಹುದು ಎಂಬ ನಂಬಿಕೆಯಿಂದ ಅನಾಥ ಶವಗಳನ್ನು ಸುಡದೆ ಮಣ್ಣು ಮಾಡಲಾಗುತ್ತದೆ. ವಾರಸುದಾರರು ಸ್ಥಿತಿವಂತರಾಗಿದ್ದರೆ ಕೋರ್ಟ್​ನಿಂದ ಅನುಮತಿ ಪಡೆದು ಡಿಎನ್​ಎ ಪರೀಕ್ಷೆ ನಡೆಸುತ್ತಾರೆ. ಇದೇ ಕಾರಣಕ್ಕೆ ಅಪರಿಚಿತ ಶವಗಳನ್ನು ಸುಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.

    ಶೇ.93 ಮಂದಿಗೆ ಆಧಾರ್: ರಾಜ್ಯದಲ್ಲಿ ಒಟ್ಟು ಜನಸಂಖ್ಯೆ ಪೈಕಿ 6.22 ಕೋಟಿ ಮಂದಿ (ಶೇ.93.1) ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಆಧಾರ್ ಸಂಸ್ಥೆ ತಂತ್ರಜ್ಞಾನದ ನೆರವು ನೀಡದರೆ ಅಪರಿಚಿತ ಶವಗಳ ಗುರುತು ಪತ್ತೆಹಚ್ಚಿ ವಾರಸುದಾರ ರಿಗೆ ಒಪ್ಪಿಸಲು ಸುಲಭವಾಗುತ್ತದೆ. ಆದರೆ. ಆಧಾರ್ ಡೇಟಾ ಹಂಚಿ ಕೊಳ್ಳಲು ಕಾನೂನು ತೊಡಕಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಮಂಡ್ಯದಲ್ಲಿ ಅತಿಹೆಚ್ಚು ಕೇಸ್!

    ಮಂಡ್ಯದಲ್ಲಿ ಅತಿಹೆಚ್ಚು ಅಪರಿಚಿತ ಶವ ಪತ್ತೆಯಾಗುತ್ತಿದೆ. ಬೆಂಗಳೂರು 2ನೇ ಸ್ಥಾನದಲ್ಲಿದೆ. 2016ರ ಜನವರಿಯಿಂದ 2019ರ ಮೇವರೆಗೆ ಮಂಡ್ಯದಲ್ಲಿ 875 ಅಪರಿಚಿತ ಶವಗಳು ಪತ್ತೆಯಾಗಿವೆ. ಅದರಲ್ಲಿ 404 ಶವಗಳ ಗುರುತು ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಒಟ್ಟು 630 ಅಪರಿಚಿತ ಶವಗಳ ವಾರಸುದಾರರು ಯಾರು ಎಂಬ ಸುಳಿವು ಸಿಕ್ಕಿಲ್ಲ. ಪೊಲೀಸರಿಗೆ ಕೆಲಸದೊತ್ತಡ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

    ಆಧಾರ್​ಕಾರ್ಡ್ ಬಳಕೆ ಕುರಿತು ಕಾಯ್ದೆಯಲ್ಲಿ ಪ್ರಸ್ತಾಪವಾಗಿರುವುದಕ್ಕೆ ಮಾತ್ರ ಬಳಸಬಹುದು. ಕಾಯ್ದೆಯಲ್ಲಿ ಪ್ರಸ್ತಾಪ ವಾಗದ ಕಡೆ ಬಳಸುವ ಅಗತ್ಯ ಬಿದ್ದರೆ ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕಾಗುತ್ತದೆ. ಇದು ಪೊಲೀಸ್ ಇಲಾಖೆಗೂ ಅನ್ವಯಿಸುತ್ತದೆ.

    | ರಾಜೀವ್ ಚಾವ್ಲಾ ಪ್ರಧಾನ ಕಾರ್ಯದರ್ಶಿ (ಇ-ಆಡಳಿತ) 

    | ಯಂಕಣ್ಣ ಸಾಗರ್ ಬೆಂಗಳೂರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts