ಅಂಗವಿಕಲ ಕುಟುಂಬಕ್ಕೆ ಅಮ್ಮನೇ ಆಸರೆ

ಇಮಾಮಹುಸೇನ್ ಗೂಡುನವರ

ಬೆಳಗಾವಿ: ಅಪಘಾತದಲ್ಲಿ ಕಾಲು ಕಳೆದುಕೊಂಡು ಹಾಸಿಗೆ ಹಿಡಿದಿರುವ ಪತಿ. ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಮಿಂಚಿದರೂ ಮೂಕ ಮತ್ತು ಕಿವುಡನಾಗಿರುವ ಮಗ. ಅಂಗವಿಕಲರಾಗಿರುವ ಈ ತಂದೆ-ಮಗನನ್ನು ಸಾಕಲು ಬೈಲಹೊಂಗಲ ಪಟ್ಟಣದ ಇಳಿವಯಸ್ಸಿನ ಮಹಿಳೆಯೊಬ್ಬರು ಹಗಲಿರುಳು ದುಡಿಯುತ್ತಿದ್ದಾರೆ. ಮಗನ ಭವಿಷ್ಯಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ದಾನಿಗಳ ಮೊರೆಯಿಡುತ್ತಿದ್ದಾರೆ.

ತಲೆಯ ಮೇಲೊಂದು ಹಳೆಯ ಸೂರು, ಒಂದು ಎಕರೆ ಕೃಷಿ ಭೂಮಿ ಬಿಟ್ಟರೆ ಬೇರೆ ಯಾವ ಆಸ್ತಿಯೂ ಇಲ್ಲದ ಕುಟುಂಬವನ್ನು ನೀಲವ್ವ ಬೆಟಗೇರಿ (50) ಮುನ್ನೆಡೆಸಿದ್ದಾರೆ.
ಬೈಲಹೊಂಗಲ ಪಟ್ಟಣದ ಕಲ್ಮಠ ಗಲ್ಲಿಯ ಚನ್ನಮ್ಮನ ಸಮಾಧಿ ಎದುರು ಹಳೆಯ ಕಾಲದ ಮನೆ ಇದೆ. ಪತಿ ಮಹಾದೇವ, ಮಗ ಪ್ರಕಾಶ ಅವರೊಂದಿಗೆ ನೀಲವ್ವ ಇಲ್ಲಿ ಸಂಸಾರ ಕಟ್ಟಿಕೊಂಡಿದ್ದಾರೆ. ರಾಜ್ಯ, ಹೊರರಾಜ್ಯಗಳ ಕುಸ್ತಿ ಕಣಗಳಲ್ಲೂ ಮಿಂಚು ಹರಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಮಗ ಪ್ರಕಾಶ ಈ ಬಡ ಕುಟುಂಬದ ಕುಡಿ. ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಪ್ರಕಾಶ ಶಿಕ್ಷಣ ಮೊಟಕುಗೊಳಿಸುವ ಪರಿಸ್ಥಿತಿ ಇದೆ. ಆದರೆ ಎಂಥ ಕಷ್ಟವಾದರೂ ಸರಿ, ಶಿಕ್ಷಣ ಪೂರೈಸಬೇಕು ಎಂಬ ಆಸೆ ಇವರಿಗಿದೆ. ಆದರೆ ಈತನಿಗೆ ಕುಸ್ತಿಯಲ್ಲಿ ಹೆಚ್ಚಿನ ಸಾಧನೆಗೆ ಆರ್ಥಿಕ ಚೈತನ್ಯವೂ ಅಗತ್ಯವಾಗಿದೆ.

‘ನನ್ನ ಗಂಡನ ಒಂದು ಕಾಲು ಅಪಘಾತದಲ್ಲಿ ಕತ್ತರಿಸಿ ಹೋಗಿದೆ. ಸಣ್ಣದೊಂದು ಪಾನ್‌ಶಾಪ್ ಇಟ್ಟುಕೊಂಡಿದ್ದಾರೆ. ಅದರಿಂದ ಬರುವ ಆದಾಯವೂ ಕಮ್ಮಿ. ಮಗ ಪ್ರಕಾಶ್ ಕುಸ್ತಿಪಟು ಆಗಬೇಕು ಎಂದು ಆಸೆ ಹೊಂದಿದ್ದಾನೆ. 100ಕ್ಕಿಂತ ಹೆಚ್ಚು ಕಣಗಳಲ್ಲಿ ಆತ ಕುಸ್ತಿ ಸ್ಪರ್ಧೆಗಳಲ್ಲಿ ಮಿಂಚಿದ್ದಾನೆ ಎಂದು ತಾಯಿ ಹೇಳುವಾಗ ಅವರ ಕಣ್ಣುಗಳಲ್ಲಿ ನೀರು ಜಿನುಗುತ್ತದೆ. ಒಂದು ಎಕರೆ ಕೃಷಿ ಭೂಮಿಯಲ್ಲಿ ಬರುವ ಐದಾರು ಚೀಲ ಹುರುಳಿ ಉಣ್ಣುವುದಕ್ಕೂ ಸಾಲುವುದಿಲ್ಲ. ಪಾನ್‌ಶಾಪ್ ಆದಾಯವೂ ಹೆಚ್ಚುತ್ತಿಲ್ಲ. ಇದ್ದುದ್ದರಲ್ಲೇ ಮಗನಿಗೆ ಕುಸ್ತಿ ಅಭ್ಯಾಸಕ್ಕೆ ಆರ್ಥಿಕ ಸೌಲಭ್ಯ ಕಲ್ಪಿಸುತ್ತ ಮುನ್ನಡೆದಿದ್ದೇವೆ. ಸರ್ಕಾರ ಮಗನ ಕುಸ್ತಿ ಅಭ್ಯಾಸಕ್ಕಾಗಿ ಆರ್ಥಿಕ ನೆರವು ಇಲ್ಲವೇ, ನುರಿತ ತರಬೇತಿ ವ್ಯವಸ್ಥೆಯನ್ನೂ ಒದಗಿಸಿಕೊಡಬೇಕು’ ಎಂದು ನೀಲವ್ವ ಅಂಗಲಾಚುತ್ತಾರೆ.

ಮಾಸಾಶನ ಮಾತ್ರ ಸಿಕ್ಕಿದೆ: ಈಗ ಕ್ರೀಡಾಪಟುಗಳಿಗೆ ಸರ್ಕಾರ ನೂರೆಂಟು ಸೌಲಭ್ಯ ನೀಡುತ್ತಿದೆ. ಆದರೆ, ಮಗ ಮೂಕ ಮತ್ತು ಕಿವುಡನಾಗಿದ್ದಾನೆ. ಈತ ಕುಸ್ತಿಯಲ್ಲಿ ಗೆಲುವು ಸಾಧಿಸುತ್ತಿದ್ದಾನೆ. ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಆದರೂ ಮಾಸಿಕ 1,400 ರೂ. ಮಾಸಾಶನ ಬಿಟ್ಟರೆ ಬೇರೆ ಯಾವ ಸೌಲಭ್ಯವನ್ನೂ ಸರ್ಕಾರ ಕಲ್ಪಿಸಿಲ್ಲ ಎಂದು ಪ್ರಕಾಶ ತಂದೆ, ತಾಯಿ ಹೇಳುತ್ತಾರೆ.