ಹೆಲಿಕಾಪ್ಟರ್ ಖರ್ಚು ಭರಿಸಲು ಸಿದ್ಧ

ಇಳಕಲ್ಲ: ಡಾ. ಮಹಾಂತ ಶ್ರೀಗಳು ಲಿಂಗೈಕ್ಯರಾದಾಗ ಅವರ ಅಂತ್ಯಕ್ರಿಯೆಯಲ್ಲಿ ಸರ್ಕಾರಿ ಗೌರವ ಸಲ್ಲಿಸಲು ಆಗಮಿಸಿದ್ದ ಅಂದಿನ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಲಿಕಾಪ್ಟರ್ ಖರ್ಚನ್ನು ಸರ್ಕಾರ ಒಪ್ಪಿದರೆ ಬಿಜೆಪಿ ಕಾರ್ಯಕರ್ತರು ಭರಿಸಲು ಸಿದ್ಧರಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಶಾಸಕ ದೊಡ್ಡನಗೌಡ ಪಾಟೀಲ ಟಾಂಗ್ ನೀಡಿದರು.

ಮಂಗಳವಾರ ನಗರದಲ್ಲಿ ಬಿಜೆಪಿ ನಗರ ಘಟಕದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಶ್ರೀಗಳ ಅಂತ್ಯಕ್ರಿಯೆಯಲ್ಲಿ ಸರ್ಕಾರದ ಪರವಾಗಿ ಗೌರವ ಸಲ್ಲಿಸಲು ಬಂದಿದ್ದರು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಯಡಿಯೂರಪ್ಪನವರು ದುಂದುವೆಚ್ಚ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಆರೋಪ ಮಾಡಿದ್ದಾರೆ. ಇದರಿಂದ ಶ್ರೀಗಳ ಭಕ್ತರಿಗೆ ತುಂಬ ನೋವಾಗಿದೆ. ಯಡಿಯೂರಪ್ಪ ಅವರು ಹೆಲಿಕಾಪ್ಟರ್ ಖರ್ಚುನ್ನು ಸರ್ಕಾರಕ್ಕೆ ಮರಳಿ ನೀಡುವುದಾಗಿ ತಿಳಿಸಿದ್ದಾರೆ. ಬಿಎಸ್​ವೈ ಅವರು ಆ ಹಣವನ್ನು ಭರಿಸುವುದು ಬೇಡ. ಅದನ್ನು ನಾವೇ ಭರಿಸುತ್ತೇವೆ ಎಂದು ಹೇಳಿದರು.

ಪಕ್ಷದ ಮುಖಂಡರಾದ ಮೋಹನ ಹೊಸಮನಿ, ಡಾ. ಮಹಾಂತೇಶ ಕಡಪಟ್ಟಿ ಇತರರು ಮಾತನಾಡಿದರು. ದಿಲೀಪ ದೇವಗಿರಿಕರ, ಅರವಿಂದ ಮಂಗಳೂರ, ಆದಪ್ಪ ಮೇರನಾಳ, ಚೋಳಪ್ಪ ಇಂಡಿ, ಮಹಾಂತಪ್ಪ ಚೆನ್ನಿ, ಮಂಜುನಾಥ ಹೊಸಮನಿ, ದುರಗೇಶ ಸುರಪುರ, ಶ್ಯಾಮ ಕರವಾ, ವೆಂಕಟೇಶ ಪೋತಾ, ಸುಗೂರೇಶ ನಾಗಲೋಟಿ, ಲಕ್ಷ್ಮಣ ಚಂದ್ರಗಿರಿ, ಚಂದ್ರಶೇಖರ ಚಾಪಗಲ್ಲ, ಯಲ್ಲಪ್ಪ ಪೂಜಾರಿ, ಮಲ್ಲಯ್ಯ ಮೂಗನೂರಮಠ ಇತರರಿದ್ದರು.ಪಕ್ಷದ ಕಾರ್ಯಕರ್ತರಾದ ಕಾಶಣ್ಣ ಚಿಲ್ಲಾಳ, ಮಲ್ಲಮ್ಮ ಗೋಟೂರ, ನಾರಾಯಣ ದಾಯಪುಲೆ ಸೇರಿದಂತೆ ಅನೇಕರನ್ನು ಶಾಸಕರು ಸನ್ಮಾನಿಸಿದರು.

ನನ್ನನ್ನು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ ಮತದಾರರಿಗೆ ನನ್ನ ಕೃತಜ್ಞತೆಗಳು. ನಾನು ನಿಮ್ಮ ಸೇವಕ ಎಂದು ತಿಳಿದುಕೊಂಡು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳಿ.

| ದೊಡ್ಡನಗೌಡ ಪಾಟೀಲ ಶಾಸಕ

Leave a Reply

Your email address will not be published. Required fields are marked *