More

  ಹಲೋ ಡಾಕ್ಟರ್| ಮನಸ್ಸಿಗಿದ್ದರೆ ಅಂಕೆ, ಜೀವನದಲ್ಲಿಲ್ಲ ಹಿಂಜರಿಕೆ

  ಮನಸ್ಸು ಎಂಬ ಮೂರಕ್ಷರದ ಈ ಪದದ ಬಗ್ಗೆ ನಾವು ಎಷ್ಟು ಬರೆದರೂ ಕಡಿಮೆಯೇ ಮತ್ತು ಅದರ ವ್ಯಾಪ್ತಿ ಹಾಗೂ ಸಾಮರ್ಥ್ಯ ಅಪಾರ. ಮನುಷ್ಯ ಇಂದು ಎದುರಿಸುತ್ತಿರುವ ತೊಂದರೆ ಮತ್ತು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮನಸ್ಸೇ ಕಾರಣ. ಮನಸ್ಸಿನ ಮೇಲೆ ಹಿಡಿತ ಸಾಧಿಸುವುದು ಇದೆಯಲ್ಲ, ಅದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಹಿಂದೆ ಆಧ್ಯಾತ್ಮಿಕ ಚಿಂತಕರು ಮೊದಲು ಮನಸ್ಸನ್ನು ಹಿಡಿತದಲ್ಲಿಡು ಎಂದು ಹಲವು ಉದಾಹರಣೆಗಳ ಮೂಲಕ ಬಲು ಮಾರ್ವಿುಕವಾಗಿ ಹೇಳಿದ್ದಾರೆ.

  ಮನೋನಿಗ್ರಹ ವೈಯಕ್ತಿಕ ಸಮಸ್ಯೆಯಾದರೂ ಅದು ಹಿಡಿತ ಕಳೆದುಕೊಂಡಲ್ಲಿ ಸೃಷ್ಟಿಸುವ ಅನಾಹುತ ಅಪಾರ. ಜೀವನಶೈಲಿಯಲ್ಲಿ ಆಂತರಿಕ ಶಿಸ್ತು ಪಾಲಿಸಿದ್ದೇ ಆದಲ್ಲಿ ಮನೋನಿಗ್ರಹ ದೊಡ್ಡ ಸವಾಲೇನಲ್ಲ. ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಸರಿಯಾಗಿ ನಿರ್ಧರಿಸಿ ಹೆಜ್ಜೆ ಇಡುವುದು ಮತ್ತು ಎಂತಹದ್ದೇ ಸಮಸ್ಯೆ ಎದುರಾದರೂ ಧೃತಿಗೆಡದಂತೆ ಇರುವುದು. ಮನಸ್ಸಿನ ಪರಿಶುದ್ಧತೆ ಕಾಯುವುದು ಒಂದು ದೊಡ್ಡ ಸಾಧನೆ. ಕಷ್ಟವೆನಿಸಿದರೂ ಅಸಾಧ್ಯವೇನಲ್ಲ. ಮನಸ್ಸಿನ ಮೇಲೆ ಹಿಡಿತವಿಟ್ಟುಕೊಂಡವರು ಇಡೀ ಜಗತ್ತೇ ನಿಬ್ಬೆರಗಾಗುವಂತಹ ವಿಶ್ವಮಾನ್ಯ ಸಾಧನೆ ಮಾಡಿದ್ದಾರೆ. ಸ್ವಾಮಿ ವಿವಕಾನಂದರೇ ಇದಕ್ಕೆ ಉತ್ತಮ ಉದಾಹರಣೆ. ಅನಿಯಂತ್ರಿತ ಭಾವನೆಗಳ ಬಿರುಗಾಳಿಗೆ ಸಿಕ್ಕು ನಲುಗಿದ ಜನರು ನಮ್ಮ ಮಧ್ಯೆ ಎಷ್ಟಿಲ್ಲ ಹೇಳಿ. ಅವರ ವೈಫಲ್ಯಗಳು ನಮಗೆ ಎಚ್ಚರಿಕೆ ಗಂಟೆಯಾಗಬೇಕೇ ಹೊರತು ಮಾದರಿಯಾಗಬಾರದು. ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮ ಹೇಳಿದಂತೆ ರಾಗದ್ವೇಷಗಳ ನಿಯಂತ್ರಣ ಮತ್ತು ವೈರಾಗ್ಯ ಅಳವಡಿಸಿಕೊಂಡಲ್ಲಿ ಚಂಚಲ ಮನಸ್ಸನ್ನು ಹಿಡಿದಿಡಬಹುದು. ತಪ್ಪಿದಲ್ಲಿ ನಮ್ಮ ವರ್ತನೆ, ಬದುಕಲ್ಲಿ ಏರುಪೇರಾಗಿ ಮಾನಸಿಕ ಕ್ಷೋಭೆ ಶತಸಿದ್ಧ. ಭಾವನೆಗಳು ನಮ್ಮ ಬದುಕಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅವುಗಳ ಪಾರುಪತ್ಯ ಬಲು ದೊಡ್ಡದು. ಕಾಮ, ಕ್ರೋಧ, ಮತ್ಸರ ಇವು ಮನಸ್ಸಿನೊಳಗೆ ಹೊಕ್ಕರೆ ಮನುಷ್ಯನ ನೈತಿಕ ಅಧಃಪತನ ಶುರುವಾದಂತೆಯೇ. ಅರಿಷಡ್ವರ್ಗಗಳನ್ನು ಗೆದ್ದವನೇ ಮಹಾಶೂರ ಎಂದು ಹೇಳಿದ್ದು ಸುಮ್ಮನೆಯೇ? ಆ ಮಾತಿಗೆ ಅಷ್ಟೊಂದು ಅರ್ಥವೂ ಇದೆ ಮತ್ತು ಶಕ್ತಿಯೂ ಇದೆ.

  ವ್ಯಕ್ತಿಯ ಏಳುಬೀಳುಗಳಿಗೆ ಮನವೇ ಮೂಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಉಪದೇಶದಷ್ಟು ಸಾಧನೆ ಸುಲಭವಲ್ಲ ಎಂದುಕೊಂಡು ಮನೋನಿಗ್ರಹದ ಯತ್ನ ಕೈಬಿಡುವುದು ಮೂರ್ಖತನವೇ ಸರಿ. ಅದರಲ್ಲೂ ಇಂದಿನ ಕಲಿಯುಗದಲ್ಲಿ ಸಂಸಾರವೆಂಬ ಸಂತೆಯಲ್ಲಿ ಮನಸ್ಸನ್ನು ಸರಿಯಾದ ದಾರಿಯಲ್ಲಿ ಚಲಿಸದಿದ್ದರೆ ಅಪಘಾತ ಮತ್ತು ಅನಾಹುತ ಕಟ್ಟಿಟ್ಟ ಬುತ್ತಿ. ಮನೋವಿಕೃತಿಗೆ ತುತ್ತಾದವರು ಸೃಷ್ಟಿಸಿದ ನೂರಾರು ಅನಾಹುತಗಳು ನಮ್ಮ ಕಣ್ಣೆದುರಿಗಿವೆ. ನಾವಿಂದು ಇಂತಹ ಪ್ರಕರಣಗಳನ್ನು ನೋಡುತ್ತೇವೆ ಅಥವಾ ಓದುತ್ತೇವೆ, ಮತ್ತೆ ಕೆಲವು ದಿನಗಳ ನಂತರ ಮರೆತುಬಿಡುತ್ತೇವೆ. ಅದರ ಅನಾಹುತದ ಪರಿಣಾಮ ಮತ್ತು ಪ್ರಮಾಣದ ಅರಿವಿದ್ದರೂ ನಮಗೂ ಈ ಪ್ರಕರಣ ಎಚ್ಚರಿಕೆಯ ಗಂಟೆ ಎಂಬ ಕಹಿ ಸತ್ಯವನ್ನು ಮರೆತುಬಿಡುತ್ತೇವೆ. ಕತ್ತಲಿನಲ್ಲಿ ತಡವರಿಸುತ್ತಿರುವ ಮನಸ್ಸಿಗೆ ಬೆಳಕು ತೋರಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಮೇಲೆ ಹೇಳಿದಂತೆ ಭಾವನೆಗಳ ಅಸ್ತ್ರ ದುರುಪಯೋಗವಾಗದಂತೆ ಬದುಕು ಕಟ್ಟಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಮರ್ಕಟ ಮನಸ್ಸಿನ ಮಾಯಾಜಾಲಕ್ಕೆ ಸಿಲುಕದೆ ಮನಸ್ಸನ್ನು ಸಂಸ್ಕರಣೆಗೊಳಿಸಿ ಸಾಧನಾಪಥದತ್ತ ಸಾಗಬೇಕಾದ ತುರ್ತು ಅಗತ್ಯ ಇಂದಿನದಾಗಿದೆ. ಅಂಕೆ ತಪ್ಪಿಸುವ ಮನಸ್ಸಿಗೆ ಸವಾಲೊಡ್ಡುವ ಸಾಮರ್ಥ್ಯ ನಮ್ಮೆಲ್ಲರಲ್ಲೂ ಇದೆ. ಆದರೆ ಅದನ್ನು ಅರ್ಥೈಸಿಕೊಳ್ಳುವಲ್ಲಿ ನಾವು ಎಡವಿದ್ದೇವೆ ಮತ್ತು ಎಡವುತ್ತಿದ್ದೇವೆ. ಪರಿಣಾಮ ಮತ್ತದೇ ಮಾನಸಿಕ ಕ್ಷೋಭೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts