ಉಡುಪಿಯಲ್ಲಿ ಹೆಲಿಟೂರಿಸಂ ಆರಂಭ

ಉಡುಪಿ: ಸಾರ್ವಜನಿಕರು ಹೆಲಿಕಾಪ್ಟರ್ ಮೂಲಕ ಹಾರಾಟದ ಅನುಭವ ಪಡೆದುಕೊಳ್ಳುವ ಅವಕಾಶ ಮತ್ತೆ ಬಂದಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲಾಡಳಿತ ಸಹಯೋಗದಲ್ಲಿ ಮೂರು ದಿನ ನಡೆಯುವ ನಾಲ್ಕನೇ ವರ್ಷದ ಹೆಲಿಟೂರಿಸಂ ಶುಕ್ರವಾರ ಆರಂಭಗೊಂಡಿದೆ.

ಆದಿ ಉಡುಪಿ ಹೆಲಿಪ್ಯಾಡ್‌ನಲ್ಲಿ ಶಾಸಕ ರಘುಪತಿ ಭಟ್ ಚಾಲನೆ ನೀಡಿದರು. ಉಡುಪಿಯಲ್ಲಿ ಜ.11ರಿಂದ 13ರವರೆಗೆ ಹೆಲಿಟೂರಿಸಂ ನಡೆಯಲಿದ್ದು, 8 ನಿಮಿಷದ ಸಾಮಾನ್ಯ ಹಾರಾಟ, 10 ನಿಮಿಷದ ಅಡ್ವೆಂಚರ್ ಹಾರಾಟ ಮತ್ತು 13 ನಿಮಿಷಗಳ ದೀರ್ಘ ಹಾರಾಟದ ಪ್ಯಾಕೇಜ್‌ಗಳಿವೆ. ಒಮ್ಮೆ 6 ಮಂದಿ ಹಾರಾಟ ನಡೆಸಬಹುದಾಗಿದೆ, 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಎಂದು ಹೆಲಿ ಟೂರಿಸಂ ಆಯೋಜಕರಾದ ಸುದೇಶ್ ಶೆಟ್ಟಿ ಮಾಹಿತಿ ನೀಡಿದರು.

ಬೆಂಗಳೂರಿನ ಚಿಪ್ಸನ್ ಏವಿಯೇಷನ್ ಸಂಸ್ಥೆಯ ಪೈಲೆಟ್ ರಮೇಶ್ ಭೂಮಿನಾಥ್, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನೇಕ ರಮಣೀಯ ಸ್ಥಳಗಳಿವೆ. ಇವುಗಳನ್ನು ಹೆಲಿಕಾಪ್ಟರ್ ಮೂಲಕ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದು. ಇದಕ್ಕಾಗಿ ಉಡುಪಿಯನ್ನು ಕೇಂದ್ರಸ್ಥಳವಾಗಿಸಿ ಹೆಲಿಟೂರಿಸಂ ಆರಂಭಿಸಬೇಕು.
| ರಘುಪತಿ ಭಟ್, ಉಡುಪಿ ಶಾಸಕ