ಹೆಬ್ಬೆ ಯೋಜನೆಯಾದರೆ ರೈತರಿಗೆ ಹೆಚ್ಚು ಅನುಕೂಲ

ಬೀರೂರು: ಹೆಬ್ಬೆ ತಿರುವು ಯೋಜನೆಗೆ ಅನುಷ್ಠಾನಕ್ಕಾಗಿ ಕುಮಾರಸ್ವಾಮಿ ಬಜೆಟ್​ನಲ್ಲಿ 100 ಕೋಟಿ ರೂ. ಮೀಸಲಿಟ್ಟಿರುವುದು ಕುಡಿಯುವ ನೀರು ಸೇರಿ ತಾಲೂಕಿನ ಅಂತರ್ಜಲ ವೃದ್ಧಿಯ ಆಸೆ ಗರಿಗೆದರುವಂತೆ ಮಾಡಿದೆ ಎಂದು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಆರ್. ಸೋಮಶೇಖರ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಅಡಕೆ ಬೆಳೆಗಾರರ ಸಂಘದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕೃತಜ್ಞತಾ ಪತ್ರ ರವಾನಿಸಿ ಮಾತನಾಡಿದ ಅವರು, ಈ ಯೋಜನೆ ಕಾರ್ಯಗತದಿಂದ ಸುತ್ತಮುತ್ತಲಿನ 19 ಕೆರೆಗಳಿಗೆ ನೀರಿನ ಸೌಭಾಗ್ಯ ದೊರಕಲಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ತಾಲೂಕು ಸತತ ಬರಗಾಲ ಅನುಭವಿಸಿದ್ದು ವಾಣಿಜ್ಯಬೆಳೆ ಕೃಷಿಕರು ತೋಟಗಳನ್ನು ಒಣಗಿಸಿಕೊಂಡು ಕಂಗಾಲಾಗಿದ್ದಾರೆ ಎಂದರು.

ಹೆಬ್ಬೆ ಯೋಜನೆ ಜಾರಿಗೆ ನಡೆಸಿದ್ದ ಹೋರಾಟಗಳಿಗೆ ಹಿನ್ನಡೆಯಾಗುತ್ತ ಬಂದು ಯೋಜನೆ ಕಾರ್ಯಸಾಧುವಲ್ಲ ಎಂಬ ಸಲ್ಲದ ನಿರ್ಧಾರ ರೈತರ ಭರವಸೆಯನ್ನು ಹುಸಿಗೊಳಿಸಿತ್ತು. ಇದೀಗ ಸರ್ಕಾರ ಈ ಯೋಜನೆಯನ್ನು ಮರು ಪರಿಶೀಲಿಸಿ ಕೊಳವೆಗಳ ಮೂಲಕ ನೀರುಹರಿಸಲು ಕ್ರಮವಹಿಸುತ್ತಿರುವುದು ಸಂತಸದ ವಿಚಾರ ಎಂದರು.