ಮುಂಗಾರು ಬಿತ್ತನೆ ಚುರುಕು

2 Min Read
ಮುಂಗಾರು ಬಿತ್ತನೆ ಚುರುಕು
ಬಸವಕಲ್ಯಾಣ ತಾಲೂಕಿನಲ್ಲಿ ಜಮೀನು ಹದ ಮಾಡುತ್ತಿರುವ ರೈತರು.

ಬಸವಕಲ್ಯಾಣ: ತಾಲೂಕಿನಲ್ಲಿ ಸುರಿದ ಮುಂಗಾರು ಮಳೆ ರೈತರಲ್ಲಿ ಭರವಸೆ ಮೂಡಿಸಿದ್ದು, ಜೂನ್ ಮೊದಲ ವಾರವೇ ಹೊಲ ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ಕೃಷಿಕರು ಬಿತ್ತನೆಗೆ ಚಾಲನೆ ನೀಡಿದ್ದಾರೆ.

ತಾಲೂಕಿನಲ್ಲಿ ವಾಡಿಕೆಗಿಂತ ಅಧಿಕ ೮೦ ಎಂಎಂ ಮಳೆಯಾಗಿದೆ. ಸೋಮವಾರವೂ ಮಳೆ ಮುಂದುವರಿದಿದ್ದು, ಪೂರಕ ವಾತಾವರಣ ಇರುವುದರಿಂದ ಹಲವೆಡೆ ಉದ್ದು-ಹೆಸರು ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಸೋಯಾಬೀನ್ ಬಿತ್ತನೆಗೆ ಇನ್ನಷ್ಟು ಮಳೆ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಬಸವಕಲ್ಯಾಣ ಹೋಬಳಿಯಲ್ಲಿ ೨೬ ಎಂಎಂ ಮಳೆ ಆಗಬೇಕಿತ್ತು. ಆದರೆ ೯೯.೫ ಮಿಮೀ ಸುರಿದಿದೆ. ಆದರೆ ಹುಲಸೂರು ಹೋಬಳಿಯಲ್ಲಿ ಸರಾಸರಿ ೧೮ ಎಂಎಂ ಪೈಕಿ ೩೫ ಮಿಮೀ ಮಳೆಯಾಗಿದೆ. ಹವಾಮಾನ ಇಲಾಖೆ ಇನ್ನೂ ಎರಡ್ಮೂರು ದಿನ ಹೆಚ್ಚು ಮಳೆ ಆಗುವ ಮುನ್ಸೂಚನೆ ನೀಡಿದೆ.
ಸೋಯಾ ಅವರೆ ಬೀಜವನ್ನು ಜೂನ್ ಮೊದಲನೇ ವಾರದಿಂದ ಜುಲೈ ೨ನೇ ವಾರದವರೆಗೂ ಬಿತ್ತಬಹುದಾಗಿದೆ. ಈ ಸಮಯದಲ್ಲಿ ಬಿತ್ತುವುದರಿಂದ ಯಾವುದೇ ರೀತಿಯ ಇಳುವರಿಯಲ್ಲಿ ಗಣನೀಯ ವ್ಯತ್ಯಾಸ ಕಂಡುಬರುವುದಿಲ್ಲ. ಬಿತ್ತುವುದಕ್ಕೆ ಇನ್ನೂ ಸಾಕಷ್ಟು ಸಮಯವಿದ್ದು, ರೈತರು ಸಮಾಧಾನದಿಂದ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪಡೆದುಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಮಾರ್ಥಂಡ ಮಚಕುರಿ ತಿಳಿಸಿದ್ದಾರೆ.
ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕುಗಳಲ್ಲಿ ಈ ವರ್ಷವೂ ರೈತ ಸಂಪರ್ಕ ಕೇಂದ್ರ, ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಸರತಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ ಪಡೆದುಕೊಳ್ಳಬೇಕು ಕೋರಿದ್ದಾರೆ.

ಸರಾಸರಿಗಿಂತ ಹೆಚ್ಚು ಮಳೆ:ತಾಲೂಕಿನಲ್ಲಿ ಜೂನ್ ಮೊದಲ ವಾರದಲ್ಲೇ ಸರಾಸರಿಗಿಂತ ಹೆಚ್ಚು ಮುಂಗಾರು ಮಳೆಯಾಗಿದೆ. ಬಸವಕಲ್ಯಾಣ ಹೋಬಳಿಯಲ್ಲಿ ಸುಮಾರು ೧೦೦ ಎಂಎಂ ಮಳೆಯಾದರೆ, ಹುಲಸೂರು ಹೋಬಳಿಯಲ್ಲಿ ಕಡಿಮೆ. ಬಸವಕಲ್ಯಾಣ ಹೋಬಳಿಯಲ್ಲಿ ೯೯.೫ ಮಿಮೀ ಮಳೆ ಆಗಿದೆ. ಕೋಹಿನೂರ (೮೮ ಎಂಎಂ), ಮಂಠಾಳ (೭೧), ಮುಡಬಿ (೬೩), ರಾಜೇಶ್ವರ (೫೨.೭) ಹಾಗೂ ಹುಲಸೂರು ವಲಯದಲ್ಲಿ ೩೫ ಮಿಮೀ ಮಳೆ ಸುರಿದಿದೆ.

See also  ಶರಣರ ವಿಚಾರ ಅರಿಯಲು ವಚನಗಳೇ ಆಧಾರ

ಬಿತ್ತನೆ ಬೀಜ ವಿತರಣೆ ಪ್ರಗತಿಯಲ್ಲಿ: ತಾಲೂಕಿನಲ್ಲಿ ಈಗಾಗಲೆ ೯೫೨೦ ಕ್ವಿಂಟಾಲ್ ಸೋಯಾ, ಅವರೆ ಬೀಜ ವಿತರಿಸಲಾಗಿದ್ದು, ವಿತರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಾರ್ಥಂಡ ಮಚಕುರಿ ತಿಳಿಸಿದ್ದಾರೆ. ತೊಗರಿ, ಉದ್ದು, ಹೆಸರು ಬಿತ್ತನೆ ಬೀಜಗಳನ್ನು ಕೂಡ ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು. ಸೋಯಾಬೀನ್ ಬೀಜದ ಚೀಲದಲ್ಲಿ ೫೦ ಗ್ರಾಂ ತೈರಾಮ್ ಶಿಲೀಂಧ್ರನಾಶಕ ಇದ್ದು, ಬಿತ್ತನೆ ಪೂರ್ವ ಬೀಜಗಳಿಗೆ ಲೇಪನೆ ಮಾಡುವುದರಿಂದ ಸಂಭವನೀಯ ರೋಗಗಳನ್ನು ತಡೆಗಟ್ಟಬಹುದು. ಆದ್ದರಿಂದ ಬೀಜೋಪಚಾರದ ಬಳಿಕವೇ ಬಿತ್ತನೆ ಮಾಡಬೇಕು. ತೊಗರಿ ಬೆಳೆಯಲ್ಲಿ ಎರಡ್ಮೂರು ವರ್ಷಗಳಿಂದ ನೆಟೆರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ತಡೆಗಟ್ಟಲು ಟ್ರೈಕೋಡರ್ಮಾ ೪ರ ಕೆಜಿ ಬಿತ್ತನೆ ಬೀಜ ಹಾಗೂ ೨೦೦ ಗ್ರಾಂ ರೈಸೋಬಿಯಂ ಪೌಡರ್ ಲೇಪನೆ ಮಾಡಿ ಬಿತ್ತನೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Share This Article