ಹೆಚ್ಚತೊಡಗಿದೆ ಪ್ರತಿಭಟನೆ ಕಾವು

ಕುಮಟಾ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಟಸ್ಥವಾಗಿದ್ದ ಬೈಪಾಸ್ ಯೋಜನೆಯ ಪ್ರಕ್ರಿಯೆ ಈಗ ಚುರುಕು ಪಡೆಯುತ್ತಿದ್ದಂತೆ ಪ್ರತಿಭಟನೆ ಕಾವೇರತೊಡಗಿದೆ.

ಕುಮಟಾ ಪಟ್ಟಣದ ಹೊರಭಾಗದಲ್ಲಿ ಬೈಪಾಸ್ ನಿರ್ವಿುಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿದೆ. ಬೈಪಾಸ್ ಸಾಗುವ ಹಂದಿಗೋಣ, ಕಲಭಾಗ, ಹೊಸ ಹೆರವಟ್ಟಾ ಹಾಗೂ ಮಣಕಿ ಗ್ರಾಮಗಳಲ್ಲಿ ನಾಲ್ಕು ಮಾರ್ಗಗಳಲ್ಲಿ ಪ್ರತ್ಯೇಕ ಸರ್ವೆ ಮಾಡಿ, ಸಿದ್ಧಪಡಿಸಿದ ನಕ್ಷೆಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವ ಕಾರ್ಯವನ್ನು ಬೆಂಗಳೂರಿನ ಸರ್ವೆ ಕಂಪನಿಯೊಂದು ನಿರ್ವಹಿಸಿದೆ. ಐದಾರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ಘೊಷಣೆಯಾಗಿದ್ದರಿಂದ ಈ ಬೈಪಾಸ್ ಯೋಜನೆಯ ಪ್ರಕ್ರಿಯೆ ತಟಸ್ಥವಾಗಿತ್ತು. ಈಗ ಹೊಸ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಬೈಪಾಸ್ ಯೋಜನೆ ಚುರುಕುಗೊಂಡಿದೆ.

ಯೋಜನೆಗೆ ಸಂಬಂಧಿಸಿದಂತೆ ಅಂತಿಮ ಸರ್ವೆ ಮಾಡಲು ಇತ್ತೀಚೆಗೆ ಮುನ್ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯ ಬಲದೊಂದಿಗೆ ತಾಲೂಕು ಆಡಳಿತದ ಸಹಕಾರದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ಸರ್ವೆ ಕೈಗೊಂಡಿದ್ದರು. ಈ ಸರ್ವೆಯನ್ನು ತಡೆಯಲು ಪ್ರಯತ್ನಿಸುವ ಪ್ರತಿಭಟನಾಕಾರರನ್ನು ತಕ್ಷಣ ಬಂಧಿಸುವ ಆಜ್ಞೆ ಜಿಲ್ಲಾಡಳಿತದಿಂದಲೇ ಪೊಲೀಸ್ ಇಲಾಖೆಗೆ ದೊರೆತಿತ್ತು. ಇದರಿಂದ ಕಂಗಾಲಾದ ಸಂತ್ರಸ್ತರು ಮತ್ತು ಬೈಪಾಸ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಕೈಕಟ್ಟಿ ಕುಳಿತುಕೊಳ್ಳುವಂತಾಗಿತ್ತು. ಕೆಲವರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಬೈಪಾಸ್ ಯೋಜನೆಯಿಂದಾಗುವ ನಷ್ಟದ ಕುರಿತು ತಮ್ಮ ಅಳಲು ತೋಡಿಕೊಂಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.

ಬೃಹತ್ ಪ್ರತಿಭಟನಾ ರ‍್ಯಾಲಿ ನಾಳೆ: ಬೈಪಾಸ್ ಯೋಜನೆಯ ಸಂತ್ರಸ್ತರು ಅ. 5ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. ಕುಮಟಾದ ಎಲ್ಲ ಅಂಗಡಿಕಾರರು, ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಮಸ್ತ ನಾಗರಿಕರು ಈ ಬಡ ಸಂತ್ರಸ್ತರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡುವಂತೆ ಹೋರಾಟ ಸಮಿತಿಯಿಂದಲೇ ವಿನಂತಿಸಲಾಗಿದೆ.

ಧರ್ಮ ಸಂಕಟದಲ್ಲಿ ಶಾಸಕರು: ಬೈಪಾಸ್ ವಿಚಾರ ಪ್ರಸ್ತಾಪವಾದಾಗಲೆಲ್ಲ ಶಾಸಕ ದಿನಕರ ಶೆಟ್ಟಿ ಅವರು ನುಣುಚಿಕೊಳ್ಳುತ್ತಿರುವುದು ಕಂಡುಬಂದಿದೆ. ಬೈಪಾಸ್ ಪರ ನಿಂತರೆ ಹೋರಾಟ ಸಮಿತಿಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಬೈಪಾಸ್ ವಿರೋಧಿಸಿದರೆ ಕೆಲ ಉದ್ಯಮಿಗಳ ನಿಷ್ಠುರತೆ ಕಟ್ಟಿಕೊಳ್ಳಬೇಕಾಗದ ಧರ್ಮ ಸಂಕಟಕ್ಕೆ ಶಾಸಕರು ಸಿಲುಕಿಕೊಳ್ಳುವಂತಾಗಿದೆ. ಅಲ್ಲದೆ, ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಬೈಪಾಸ್ ವಿರೋಧಿ ಹೋರಾಟ ಸಮಿತಿಯು ತಮ್ಮ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕರು ಪಾಲ್ಗೊಳ್ಳಬೇಕೆಂದು ಒತ್ತಾಯಿಸಿದೆ. ಇದರಿಂದ ಗಲಿಬಿಲಿಗೊಂಡ ಶಾಸಕರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಕೈ-ಕಮಲ ಆರೋಪ ಪ್ರತ್ಯಾರೋಪ: ಬೈಪಾಸ್ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೆ ಇದೆ. ಕಾಂಗ್ರೆಸ್ ಮುಖಂಡರಿಗೆ ಪ್ರಶ್ನಿಸಿದರೆ, ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದತ್ತ ಬೊಟ್ಟು ತೋರಿಸುತ್ತಿದ್ದಾರೆ. ಇದನ್ನು ನಿರಾಕರಿಸುವ ಬಿಜೆಪಿಗರು, ಬೈಪಾಸ್​ಗೆ ಶಿಫಾರಸು ಮಾಡಿರುವುದು ರಾಜ್ಯ ಸರ್ಕಾರವಾಗಿದ್ದರಿಂದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಈ ಪ್ರಕ್ರಿಯೆಯ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರಬಲ ಕೈವಾಡ ಇದೆ ಎಂದು ಆರೋಪಿಸುತ್ತಾರೆ. ಒಟ್ಟಾರೆ, ಈ ಬೈಪಾಸ್ ವಿವಾದ ಎರಡು ಪಕ್ಷಗಳ ಮುಖಂಡರ ನಡುವೆ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

 ಎನ್​ಎಚ್ ಬಳಿ ಶೇ. 88ರಷ್ಟು ಭೂ ಪ್ರದೇಶ ವಶದಲ್ಲಿರುವುದರಿಂದ ಈಗಿನ ಹೆದ್ದಾರಿಯಲ್ಲಿ ಚತುಷ್ಪಥ ಸಾಗಿದರೆ ನಷ್ಟದ ಪ್ರಮಾಣ ತೀರಾ ಕಡಿಮೆ ಇದೆ. ಬೈಪಾಸ್ ಯೋಜನೆ ರೂಪಿಸಿದರೆ ಸಂತ್ರಸ್ತರ ಸಂಖ್ಯೆ ಮೂರುಪಟ್ಟು ಜಾಸ್ತಿಯಾಗುತ್ತದೆ. ಕೃಷಿ ಭೂಮಿ ಮತ್ತು ಅರಣ್ಯ ಪ್ರದೇಶ ನಾಶವಾಗುತ್ತದೆ. ಪರಿಸರದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಬೈಪಾಸ್ ವಿರೋಧಿಸಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. —-ಆರ್.ಜಿ. ನಾಯ್ಕ, ಬೈಪಾಸ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ