ಉತ್ತರ ಕರ್ನಾಟಕ ಸೊಗಡಿನ ಕಥಾ ಹಂದರ ಇರುವ ‘ಹೆಬ್ಬುಲಿ ಕಟ್’ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಭೀಮರಾವ್ ನಿರ್ದೇಶನದ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸದಭಿರುಚಿಯ ಚಿತ್ರದಲ್ಲಿ ಮೌನೇಶ್ ನಟರಂಗ ಹಾಗೂ ಅನನ್ಯಾ ನಿಹಾರಿಕಾ ಮುಖ್ಯಪಾತ್ರದಲ್ಲಿ ನಟಿಸಿದ್ದು, ತಮ್ಮ ಸಿನಿಮಾ ಜರ್ನಿ ಹಾಗೂ ಪಾತ್ರದ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ನನಸಾಯಿತು ಮೌನೇಶನ ಕನಸು

ನನಸಾಯಿತು ಮೌನೇಶನ ಕನಸು
ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದ ಹುಡುಗ ಮೌನೇಶ್. ಪಿಯುಸಿ ವ್ಯಾಸಂಗ ಮುಗಿಸಿರುವ ಅವರು ಕಳೆದ ಆರು ವರ್ಷಗಳಿಂದ ಗದಗದ ‘ನಟರಂಗ’ ಶಾಲೆಯ ಮೂಲಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ‘ಹೆಬ್ಬುಲಿ ಕಟ್’ ಮೂಲಕ ಸಿನಿಮಾ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಮೌನೇಶ್, ‘‘ನಟರಂಗ’ ಸಂಸ್ಥೆಗೆ ಒಂದು ದಿನ ಭೀಮರಾವ್ ಸರ್ ಆಡಿಷನ್‌ಗೆ ಬಂದಿದ್ದರು. ಆಗ ನಾನೂ ಆಡಿಷನ್ ನೀಡಿದ್ದೆ. ಮೂರು ದಿನಗಳ ಬಳಿಕ ಕರೆ ಮಾಡಿ, ನೀವು ಚಿತ್ರದ ನಾಯಕನ ಪಾತ್ರಕ್ಕೆ ಆಯ್ಕೆಯಾಗಿದ್ದೀರಿ ಎಂದರು. ಅಂದು ನನ್ನ ಕನಸ್ಸು ನನಸಾದಂತನ್ನಿಸಿತು. ನಾನಿಲ್ಲಿ ಕಣ್ಣಿಗೆ ಕಟ್ಟುವಂತಿರುವ ಸವಾಲಿನ ವಿನ್ಯಾ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರಕ್ಕೆ ಸುದೀಪ್ ಸರ್ ಅವರ ‘ಹೆಬ್ಬುಲಿ’ ಚಿತ್ರ ಸ್ಫೂರ್ತಿ. ಆ ಸಿನಿಮಾ ಬರದಿದ್ದರೆ, ಈ ಕಥೆಯೂ ಹುಟ್ಟುತ್ತಿರಲಿಲ್ಲವೇನೋ? ಪಾತ್ರಕ್ಕೆ ಹಲವು ಆಯಾಮಗಳಿದ್ದು, ಸುದೀಪ್ ಸರ್ ಅಭಿಮಾನ ಮೆರಯುವ ಜತೆಗೆ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಸಂದೇಶ ನೀಡುತ್ತದೆ. ಮೊದಲ ದಿನ ಕ್ಯಾಮರಾ ಮುಂದೆ ನಿಂತಾಗ ಸ್ವಲ್ಪ ಭಯವಿತ್ತು. ಆದರೆ, ಇಡೀ ಚಿತ್ರತಂಡ ಧೈರ್ಯ ತುಂಬಿತು. ಕ್ರಮೇಣ ಆ ಭಯ ಹೋಯಿತು. ಡಾಲಿ ಧನಂಜಯ್ ಸರ್, ಸತೀಶ್ ಸರ್ ನನ್ನ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಲೈಮ್ಯಾಕ್ಸ್ ನನಗೆ ಚಾಲೆಂಜ್ ಆಗಿತ್ತು. ಅದಕ್ಕಾಗಿ ಬಹಳ ಶ್ರಮಪಟ್ಟಿದ್ದೇನೆ. ಪಾತ್ರ ಚೆನ್ನಾಗಿ ನಿರ್ವಹಿಸಿದ ಸಮಾಧಾನವಿದೆ. ಇದು ನನ್ನ ಭಾಗದ ಕಥೆಯಾಗಿದ್ದರಿಂದ ನನ್ನ ಜೀವನದಲ್ಲಿ ನಡೆದ ಎಷ್ಟೋ ವಿಚಾರಗಳಿವೆ. ಹಾಗಾಗಿ, ನಾನು ಕೂಡ ಕಥೆಯಲ್ಲಿದ್ದೇನೆ ಎನಿಸುತ್ತದೆ’ ಎಂದು ಖುಷಿ ಹಂಚಿಕೊಂಡರು.
ಅನನ್ಯಾನುಭವಗಳ ನಿಹಾರಿಕಾ
ಸದ್ಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚನ್ನರಾಯಪಟ್ಟಣದ ಅನನ್ಯ ನಿಹಾರಿಕಾ ‘ ಹೆಬ್ಬುಲಿ ಕಟ್’ ಮೂಲಕ ಹೀರೋಯಿನ್ ಆಗುತ್ತಿದ್ದಾರೆ. ‘ನಾನು ರೀಲ್ಸ್ ಮಾಡುತ್ತಿದ್ದೆ. ಇದನ್ನು ಗಮನಿಸಿದ ಚಿತ್ರತಂಡ ತಂದೆಯವರನ್ನು ಸಂಪರ್ಕಿಸಿತು. ಅವರು ಒಪ್ಪಿದ ಬಳಿಕ ನಾನು ಚಿತ್ರತಂಡ ಸೇರಿಕೊಂಡೆ. ನನ್ನದು ಮುಗ್ಧೆ ರೇಖಾ ಎನ್ನುವ ಪಾತ್ರ. ಊರಗೌಡನ ತಂಗಿ. ಉಳಿದಂತೆ ನನ್ನ ಪಾತ್ರದ ವಿಶೇಷತೆಯ ಬಗ್ಗೆ ಸಿನಿಮಾದಲ್ಲಿಯೇ ನೋಡಬೇಕು. ನನ್ನೂರು ಹಾಸನ. ಆದರೆ, ಚಿತ್ರದಲ್ಲಿ ನಾನು ಉತ್ತರ ಕರ್ನಾಟಕ ಭಾಷೆ ಕಲಿಯಬೇಕಿತ್ತು. ಅದಕ್ಕಾಗಿ ತುಂಬಾ ಸಿದ್ಧತೆ ನಡೆಸಿದೆ. ಸ್ವಲ್ಪ ಕಷ್ಟ ಎನಿಸಿದರೂ, ಇಷ್ಟಪಟ್ಟು ನಿರ್ವಹಿಸಿದೆ. ಮೊದಲ ಚಿತ್ರ ಬಿಡುಗಡೆಯಾಗುತ್ತಿರುವ ಖುಷಿಯಿದೆ. ‘ಹೆಬ್ಬುಲಿ ಕಟ್’ ಬಳಿಕ ವ್ಯಾಸಂಗಕ್ಕೆ ಒತ್ತು ನೀಡುತ್ತೇನೆ. ಆ್ಯಕ್ಟರ್ ಜತೆಗೆ ಡಾಕ್ಟರ್ ಆಗಬೇಕು ಎಂದುಕೊಂಡಿದ್ದೇನೆ. ಮೊದಲ ಆದ್ಯತೆ ಶಿಕ್ಷಣವೇ. ಹಾಗಂತ ನಟನೆ ಬಿಡಲ್ಲ. ನನ್ನ ಇನ್ನೊಂದು ಸಿನಿಮಾ ‘ಅನಂತ ಪಯಣ’ ಆಗಸ್ಟ್‌ನಲ್ಲಿ ರಿಲೀಸ್ ಆಗಲಿದೆ’ ಎಂದು ಮಾಹಿತಿ ನೀಡಿದರು.