ರೈತರಿಂದ ಅಧಿಕಾರಿಗಳ ತರಾಟೆ

ವಿಜಯಪುರ: ಅಧಿಕಾರಿಗಳ ಮಾತು ನಂಬಿ ಮೂರು ದಿನಗಳಿಂದ ನಡೆಸಿದ್ದ ಅಹೋರಾತ್ರಿ ಧರಣಿ ಹಿಂಪಡೆಯಲಾಗಿತ್ತು. ಆದರೆ, ಅಧಿಕಾರಿಗಳು ಕಾಲುವೆಗೆ ನೀರು ಹರಿಸದೇ ರೈತರಿಗೆ ಮೋಸ ಮಾಡಿರುವುದು ಸರಿಯಲ್ಲ ಎಂದು ಅಖಂಡ ಕರ್ನಾಟಕ ರೈತರ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭಾನುವಾರ ಮಲಘಾಣ ಪಶ್ಚಿಮ ಕಾಲುವೆ ಮೂಲಕ ಹೆಬ್ಬಾಳಟ್ಟಿ ಗ್ರಾಮದ ಕಾಲುವೆ 106ನೇ ಕಿ.ಮೀ. ಭೇಟಿ ನೀಡಿ, ನೀರು ಹರಿಸದಿರುವುದನ್ನು ಖಂಡಿಸಿ, ಮೇಲಧಿಕಾರಿಗಳಿಗೆ ಕರೆ ಮಾಡಿ ಕಾಲುವೆ ಪಕ್ಕದಲ್ಲಿರುವ ಹಿರೋಡೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿದರು.
ಸಭೆಗೆ ಸಹಾಯಕ ಅಭಿಯಂತರ ಬಿ.ಜಿ. ಕಲ್ಲೂರಮಠ ಹಾಗೂ ಸಿಬ್ಬಂದಿ ಆಗಮಿಸಿದಾಗ, ಈ ರೀತಿ ರೈತರಿಗೆ ಮೋಸ ಮಾಡುವುದು ಸರಿಯಲ್ಲ. ಮೇಲಧಿಕಾರಿಗಳ ಮಾತು ನಂಬಿ ರೈತರು ಧರಣಿ ಹಿಂಪಡೆದಿದ್ದರು. ಆದರೆ, ಇಂದು ನಾನು ರೈತರೊಂದಿಗೆ ಕಾಲುವೆ ವೀಕ್ಷಣೆ ಮಾಡಿದಾಗ ಹನಿ ನೀರು ಬಂದಿಲ್ಲ. ಇದು ಹೋರಾಟಗಾರರ ದಿಕ್ಕು ತಪ್ಪಿಸುವ ತಂತ್ರವಾಗಿದೆ ಎಂದು ಕುಲಕರ್ಣಿ ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಭಾನುವಾರ ಸಂಜೆ ಅಥವಾ ಸೋಮವಾರ ಬೆಳಗಿನ ಜಾವದಲ್ಲಿ ಕಾಲುವೆ ಅಂಚಿನವರೆಗೆ ನೀರು ಬರದಿದ್ದರೆ ಆಲಮಟ್ಟಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರ ಕಚೇರಿಗೆ ಸಾವಿರಕ್ಕೂ ಹೆಚ್ಚು ರೈತರೊಂದಿಗೆ ಆಗಮಿಒಸಿ, ಕಚೇರಿಗೆ ಬೀಗ ಜಡಿದು ಅಹೋರಾತ್ರಿ ಧರಣಿ ನಡೆಸುವುದಾಗಿ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಸುರೇಶ ದೇಸಾಯಿ, ಶೇಖಪ್ಪ ದೇಸಾಯಿ, ಉಮಾಕಾಂತ ತಡಾಕಿ, ಜಗದೀಶ ಅಂಬಲಿ, ಸುರೇಶ ನಾವದಗಿ, ಸಿದ್ದಪ್ಪ ಕಲಬೀಳಗಿ, ದಾದಾಪೀರ್ ಮಾಚಪ್ಪನವರ, ರಾಮಣ್ಣ ತಂಬಾಕಿ, ಮಾದೇವ ಹುಕ್ಕೇರಿ, ರಮೇಶ ಹುಕ್ಕೇರಿ, ಸಂಗಪ್ಪ ಮುಂಡಗನೂರ, ಭೀಮಶಿ ಕುಂಚನೂರ, ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

ಭಾನುವಾರ ರೈತ ಮುಖಂಡ ಅರವಿಂದ ಕುಲಕರ್ಣಿ ಅವರು ನಮ್ಮೊಂದಿಗೆ ನೀರು ಬಿಡುವ ವಿಷಯದಲ್ಲಿ ವಾಗ್ವಾದ ನಡೆಸಿದ್ದರು. ತದನಂತರ ಕೆಬಿಜೆಎನ್‌ಎಲ್ ಅಧಿಕಾರಿಗಳು ಕಾಲುವೆಗೆ ನೀರು ಬಿಡಿಸುವ ಕಾರ್ಯದಲ್ಲಿ ತೊಡಗಿದ್ದರು. ಸದ್ಯ ಕಾಲುವೆಯ 84 ಕಿಮೀವರೆಗೆ 1ಮೀ.ನಷ್ಟು ನೀರು ಹರಿ ಬಿಡಲಾಗಿದೆ. ಇನ್ನು 70 ಕಿಮೀವರೆಗೆ ನೀರು ಹರಿಸಲಾಗುವುದು.
ಬಿ.ಜಿ. ಕಲ್ಲೂರಮಠ, ಸಹಾಯಕ ಅಭಿಯಂತರ

Leave a Reply

Your email address will not be published. Required fields are marked *