ತೇರದಾಳ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮತ್ತೆ ಮಳೆ ಸುರಿಯುತ್ತಿದ್ದು, ಈ ಭಾಗದ ತಮದಡ್ಡಿ ಮತ್ತು ಹಳಿಂಗಳಿ ಗ್ರಾಮದ ಗುಳ್ಳಿಮಳ್ಳಿ ವಸತಿ ಜನತೆಗೆ ಪ್ರವಾಹದ ಚಿಂತೆ ಕಾಡುತ್ತಿದೆ. ಈ ವರ್ಷ ವಾಡಿಕೆಗಿಂತ ಮಳೆ ಪ್ರಮಾಣ ಹೆಚ್ಚಾಗಿದ್ದು, ಕೃಷ್ಣೆ ಮುನಿಸಿಕೊಳ್ಳದೆ ಶಾಂತವಾಗಿರಲೆಂಬುದು ರೈತರ ಆಶಯವಾಗಿದೆ.
ತಮದಡ್ಡಿ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಅಥಣಿ ತಾಲೂಕಿನ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಬೋಟ್ ವ್ಯವಸ್ಥೆ ಚಾಲ್ತಿಯಲ್ಲಿದೆ. ಮಂಗಳವಾರಗಿಂತಲೂ ಬುಧವಾರ ಒಂದೂವರೆ ಫೂಟ್‌ನಷ್ಟು ನೀರಿನ ಹರಿವು ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬುಧವಾರದ ವರದಿಯಂತೆ ಹಿಪ್ಪರಗಿ ಜಲಾಶಯದಲ್ಲಿ 22 ಗೇಟ್‌ಗಳನ್ನು ತೆರೆಯಲಾಗಿದ್ದು, ಹರಿದು ಬಂದಷ್ಟೇ ನೀರನ್ನು ಹೊರಬಿಡಲಾಗುತ್ತಿದೆ. ಕೃಷ್ಣಾ ಒಳಹರಿವು 93,235 ಕ್ಯೂಸೆಕ್, ಹೊರಹರಿವು 92,485 ಕ್ಯೂಸೆಕ್‌ನಷ್ಟಾಗಿದೆ. ಮಹಾರಾಷ್ಟ್ರದ ಕೊಯ್ನ 76 ಮಿಮೀ, ನವಜಾ 104 ಮಿಮೀ, ಮಹಾಬಲೇಶ್ವರ 148 ಮಿಮೀ ಮಳೆ ದಾಖಲಾಗಿದೆ ಎಂದು ಹಿಪ್ಪರಗಿ ಜಲಾಶಯದ ಹಿರಿಯ ಅಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.